ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ಮುಷ್ಕರ ಹೂಡಿರುವ ಸಾರಿಗೆ ನೌಕರರು ಪಟ್ಟು ಸಡಿಲಿಸಲು ಒಪ್ಪದ ಕಾರಣ ನಾಲ್ಕನೇ ದಿನವೂ ರಾಜ್ಯದಲ್ಲಿ ಸರ್ಕಾರಿ ಬಸ್ಗಳು ರಸ್ತೆಗಿಳಿದಿಲ್ಲ. ಕೆಲವೆಡೆ ತರಬೇತಿ ನಿರತ ಸಿಬ್ಬಂದಿ ಮೂಲಕ ಬಸ್ ಚಲಾಯಿಸಲಾಗುತ್ತಿದೆಯಾದರೂ ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಅದು ಸಾಧ್ಯವಾಗಿದೆ. ಹೀಗಾಗಿ ಸಾರಿಗೆ ನಿಗಮದ ಅಧಿಕಾರಿಗಳು ಖಾಸಗಿ ಬಸ್ಗಳನ್ನೇ ಮುಂದಿಟ್ಟುಕೊಂಡು ಸಂಚಾರ ವ್ಯವಸ್ಥೆ ನಿರ್ವಹಿಸುತ್ತಿದ್ದಾರೆ. ಆದರೆ, ಇದೇ ಅವರಿಗೆ ಮುಳುವಾಗಿದ್ದು ಕೆಲವೆಡೆ ಸರ್ಕಾರಿ ಬಸ್ ಬಿಡೋಣವೆಂದರೂ ಖಾಸಗಿ ಬಸ್ ಮಾಲೀಕರು ತಕರಾರು ತೆಗೆಯುತ್ತಿದ್ದಾರೆ. ಇದರಿಂದಾಗಿ ಸಾರಿಗೆ ನೌಕರರ ಮುಷ್ಕರದ ಸಂಕಷ್ಟ ಅನುಭವಿಸುತ್ತಿರುವ ಅಧಿಕಾರಿಗಳಿಗೆ ಈಗ ಖಾಸಗಿ ಬಸ್ ಮಾಲೀಕರ ಮನವೊಲಿಸುವ ಅನಿವಾರ್ಯತೆಯೂ ಎದುರಾಗಿದ್ದು ಅವರ ಪರಿಸ್ಥಿತಿ ಕೋಲು ಕೊಟ್ಟು ಪೆಟ್ಟು ತಿಂದಂತಾಗಿದೆ.
ಮೈಸೂರಿನಲ್ಲಿ ಅರ್ಧಗಂಟೆಗೊಂದರಂತೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಿದ್ದು, ಕೆಲ ಸಿಬ್ಬಂದಿ ಮೂಲಕ ಬಸ್ ಚಲಾಯಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಕೆಎಸ್ಆರ್ಟಿಸಿ ಬಸ್ ಚಾಲನೆ ಆರಂಭವಾಗುತ್ತಿದ್ದಂತೆಯೇ ಖಾಸಗಿ ಬಸ್ ಮಾಲೀಕರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಬಸ್ ಓಡಿಸೋದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ನಂತರ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿ ಬಗೆಹರಿಸುವ ಪ್ರಯತ್ನ ಮಾಡಿದ್ದು, ಸಾರಿಗೆ ಅಧಿಕಾರಿಗಳು ಅರ್ಧ ಗಂಟೆಗೊಂದರಂತೆ ಬಸ್ ಬಿಡುವುದಿಲ್ಲ, ನಾವು ಬಸ್ ತರಿಸಲ್ಲ ಎಂದು ಖಾಸಗಿ ಬಸ್ ಮಾಲೀಕರಿಗೆ ಮಾತು ಕೊಡಬೇಕಾದ ಅನಿವಾರ್ಯತೆ ಎದುರಾಯಿತು. ಅಧಿಕಾರಿಗಳು ಭರವಸೆ ಕೊಟ್ಟ ನಂತರವಷ್ಟೇ ಖಾಸಗಿ ಬಸ್ಗಳು ಮತ್ತೆ ಸಂಚಾರ ಆರಂಭಿಸಿವೆ.
ಈ ಮಧ್ಯೆ, ಸರ್ಕಾರ ಹಾಗೂ ಸಾರಿಗೆ ಅಧಿಕಾರಿಗಳ ಯಾವ ಆದೇಶಕ್ಕೂ ಜಗ್ಗದ ನೌಕರರು ಕರ್ತವ್ಯಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ನಾಲ್ಕು ನಿಗಮಗಳ ನೌಕರರೂ ಕರ್ತವ್ಯಕ್ಕೆ ಹಾಜರಾಗದೇ ದೂರ ಉಳಿದಿದ್ದು ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಮುಖಂಡರು ತಯಾರಿಯಲ್ಲಿ ತೊಡಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಗಾವಿ ಹಾಗೂ ಕಲಬುರ್ಗಿಯಲ್ಲಿ ಸಾರಿಗೆ ಮುಖಂಡರು ಹಾಗೂ ನೌಕರರು ಸಭೆ ನಡೆಸಲಿದ್ದು, ಯಾವ ರೀತಿ ಮುಷ್ಕರವನ್ನು ಮುಂದುವರೆಸಬೇಕೆಂದು ತೀರ್ಮಾನಿಸಲಿದ್ದಾರೆ.
ಇದನ್ನೂ ಓದಿ:
ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲಿಸಿದವರಿಗೆ ಸರ್ಕಾರದಿಂದ ನೋಟಿಸ್
ಸಾರಿಗೆ ನಿಗಮ ನೌಕರರ ಮುಷ್ಕರ, ಕೆಎಸ್ಆರ್ಟಿಸಿಗೆ ಮೂರು ದಿನಗಳಲ್ಲಿ ರೂ. 51 ಕೋಟಿ ನಷ್ಟ!
(KSRTC BMTC Workers Strike: Private Bus owners opposes to operate KSRTC bus in Mysuru)