ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಅರ್ಟಿಸಿ) ಯು ಬುಧವಾರದಂದು ಒಂದು ಪ್ರಕಟಣೆಯನ್ನು ಹೊರಡಿಸಿದ್ದು ಜುಲೈ 12 ರಿಂದ ಬೆಂಗಳೂರು, ಮೈಸೂರು ಮಂಗಳೂರು, ಪುತ್ತೂರು ಮತ್ತು ಇತರ ಕೆಲ ಭಾಗಗಳಿಂದ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಬಸ್ ಸಂಚಾರ ಸೇವೆಯನ್ನು ಆರಂಭಿಸುವುದಾಗಿ ಹೇಳಿದೆ. ಸದರಿ ಸೇವೆಯು ಸಂಚಾರ ಸಾಂದ್ರತೆ ಮತ್ತು ಅವಶ್ಯಕತೆಗಳ ಮೇಲೆ ಆಧಾರಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೇರಳದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಹೆಚ್ಚಿದ್ದರಿಂದ ಕೆಎಸ್ಅರ್ಟಿಸಿಯು ಏಪ್ರಿಲ್ನಿಂದ ಆ ರಾಜ್ಯಕ್ಕೆ ಬಸ್ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಿತ್ತು. ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣ ಮಾಡಲಿಚ್ಛಿಸುವರು ಕೆಲ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ ಎಂದು ಕೆಎಸ್ಅರ್ಟಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಕೇರಳದಿಂದ ಕರ್ನಾಟಕ್ಕೆ ಕೆಎಸ್ಅರ್ಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡಲಿಚ್ಚಿಸುವ ಜನ, ಕರ್ನಾಟಕದ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಪ್ರಕಾರ, ತಮ್ಮೊಂದಿಗೆ 72 ಗಂಟೆಗಳಿಗಿಂತ ಹಳೆಯದಾಗಿರದ ಕೊವಿಡ್-19 ಪ್ರಮಾಣ ಪತ್ರವನ್ನು ಕ್ಯಾರಿ ಮಾಡಬೇಕು. ಅದಿಲ್ಲದ ಪಕ್ಷದಲ್ಲಿ ಅವರು ಅವರು ಕನಿಷ್ಟ ಒಂದು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿರತಕ್ಕದ್ದು,’ ಎಂದು ಕೆಎಸ್ಅರ್ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳು ಮತ್ತು ವ್ಯಾಪಾರ ಹಾಗೂ ಇನ್ನಿತರ ಕಾರಣಗಳಿಗೆ ಪ್ರತಿನಿತ್ಯ ಕೇರಳ-ಕರ್ನಾಟಕ ನಡುವೆ ಓಡಾಡುವ ಜನರು ಕಡ್ಡಾಯವಾಗಿ 15 ದಿನಗಳಿಗೊಮ್ಮೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುತ್ತಿರಬೇಕು ಮತ್ತು ತಮ್ಮೊಂದಿಗೆ ಕೊವಿಡ್-19 ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು ಎಂದು ಸಹ ಕೆಎಸ್ಅರ್ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಪ್ರಯಾಣಿಕರೆಲ್ಲ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಎಲ್ಲ ಕೋವಿಡ್-19 ಮಾರ್ಗಸೂಚಿಗಳನ್ನು ಪ್ರಯಾಣಿಸುವಾಗ ಪಾಲಿಸಬೇಕು ಎಂದು ಕೆಎಸ್ಅರ್ಟಿಸಿ ಪ್ರಕಟಣೆಯಲ್ಲಿ ಹೇಳಲಾಗಿದೆ.
ಪ್ರಯಾಣ ಮಾಡಲು ಇಚ್ಛಿಸುವರ ಅನುಕೂಲಕ್ಕಾಗಿ ಕೆಎಸ್ಅರ್ಟಿಸಿ ಟಿಕೆಟ್ಗಳನ್ನು ಕಾಯ್ದಿರಿಸುವ ಬಗ್ಗೆಯೂ ವಿವರಗಳನ್ನು ಒದಗಿಸಿದೆ. ಪ್ರಯಾಣ ಬೆಳೆಸಲು ಇಚ್ಛಿಸುವವರು ಮುಂಗಡವಾಗಿ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ksrtc.karnataka.gov.in / www.ksrtc.in ಮುಖಾಂತರ ಬುಕ್ ಮಾಡಬಹುದು. ಅಲ್ಲದೆ ಟಿಕೆಟ್ಗಳನ್ನು ಕೆಎಸ್ಅರ್ಟಿಸಿ ಫ್ರಾಂಚೈಸಿ ಮತ್ತು ಮುಂಗಡ ಟಿಕೆಟ್ ಬುಕಿಂಗ್ ಕೌಂಟರ್ಗಳಲ್ಲಿ ಬುಕ್ ಮಾಡಬಹುದು ಎಂದು ಅದ ತಿಳಿಸಿದೆ.
ಕೆಎಸ್ಅರ್ಟಿಸಿ ಕೊಡಮಾಡುವ ಎಲ್ಲ ಸೌಲಭ್ಯಗಳನ್ನು ಪ್ರಯಾಣಿಕರು ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: KSRTC: ಬಸ್ ಚಾಲನೆ ಮಾಡುವಾಗ ಚಾಲಕ ನಿದ್ರಿಸಿದರೂ ಅಪಘಾತವಾಗಲ್ಲ; ಕೃತಕ ಬುದ್ಧಿಮತ್ತೆ ಬಳಸಿ ಅಪಘಾತ ತಡೆಯಲಿದೆ ಕೆಎಸ್ಆರ್ಟಿಸಿ
Published On - 5:50 pm, Thu, 8 July 21