ಬೆಂಗಳೂರು: ನಿಮಗೆ ದ್ವೇಷ ಇದ್ದದ್ದು ನನ್ನ ಮೇಲಲ್ಲವೇ? ಆದರೆ ಬಡವರ ಮೇಲೇಕೆ ನಿಮ್ಮ ಕೋಪ? ‘ಬಡವರ ಬಂಧು’ ಯೋಜನೆಯನ್ನು ನಿರ್ಲಕ್ಷಿಸಿರುವ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪರನ್ನು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸೇಡಿನ ರಾಜಕೀಯ ಮಾಡುವುದಿಲ್ಲ ಎಂದು ಸದನದಲ್ಲಿ ನೀವು ಭಾಷಣ ಮಾಡಿದ್ರಿ, ಆದ್ರೆ ಅಧಿಕಾರ ವಹಿಸಿಕೊಂಡ ನಂತರ ನನ್ನ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ಸೇಡಿನ ರಾಜಕೀಯ ಮಾಡಿ ನೀವು ಬಡವರ ವಿರೋಧಿಯಾಗಿದ್ದೀರಿ ಎಂದು ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬಡವರ ಬಂಧು ಕಾರ್ಯಕ್ರಮವನ್ನು ಆರ್ಥಿಕವಾಗಿ ಅಶಕ್ತರಾದವರು, ಸಣ್ಣ ವ್ಯಾಪಾರಿಗಳನ್ನು ಲೇವಾದೇವಿದಾರರ ವಿಷ ವರ್ತುಲದಿಂದ ಪಾರು ಮಾಡುವ ಸದುದ್ದೇಶದಿಂದ ಜಾರಿಗೆ ತರಲಾಗಿತ್ತು. ಅಶಕ್ತರು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ಈ ಯೋಜನೆಯನ್ನು ಕೊಲ್ಲುತ್ತಿರುವ ನೀವು ಬಡವರ ಸ್ವಾಭಿಮಾನವನ್ನು ಕೆಣಕಿದ್ದೀರಿ ಎಂದು ಹೆಚ್ಡಿಕೆ ಕಿಡಿಕಾರಿದ್ದಾರೆ.
‘ಬಡವರ ಬಂಧು’ ಯೋಜನೆಯಲ್ಲಿ ಜಾತಿ, ಧರ್ಮ, ಪಕ್ಷಗಳಿಲ್ಲ. ಆದ್ದರಿಂದ ಈ ಯೋಜನೆ ವಿಫಲವಾಗಬಾರದು. ಈ ಕಾರ್ಯಕ್ರಮಕ್ಕೆ ನೀವು ಚೈತನ್ಯ ತುಂಬಬೇಕು, ಇಲ್ಲವೇ ಹೋರಾಟ ಎದುರಿಸಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.