
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಈ ಮಾತಿನ ಅರ್ಥ ಮನೆ ಕಟ್ಟುವುದಾಗಲೀ, ಮಕ್ಕಳ ಮದುವೆ ಮಾಡುವ ವಿಚಾರವಾಗಲಿ ಸುಲಭದ್ದಲ್ಲ. ಹಲವು ಬಗೆಯ ಕಷ್ಟಗಳು, ಸವಾಲುಗಳನ್ನು ಎದುರಿಸಬೇಕಾಗುತ್ತೆ. ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದ ಜನರಿಗೆ ಈ ಮಾತಿನ ಅರ್ಥದ ಅನುಭವ ಚೆನ್ನಾಗಿಯೇ ಆಗಿರುತ್ತೆ. ಮಕ್ಕಳ ಮದುವೆ ಮಾಡಲು ಪೋಷಕರು ಹಗಲು-ರಾತ್ರಿ ದುಡಿಯುವುದನ್ನು ನೋಡಿದ್ದೇವೆ. ಚೀಟಿ, ಸಾಲ ಅಂತೆಲ್ಲ ಮಾಡಿಕೊಂಡು ಮದುವೆ ಮಾಡಿಸಿದ ನಂತರವೂ ಗಂಜಿ ಕುಡ್ಕೊಂಡು ಹತ್ತಾರು ವರ್ಷ ಸಾಲ ತೀರಿಸುವುದುಂಟು. ಅದೆಷ್ಟೋ ತಂದೆ-ತಾಯಿ ಸಾಲ ತೀರಿಸಲಾಗದೆ, ನೆಮ್ಮದಿಯಿಂದ ಬದುಕು ನಡೆಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದನ್ನೂ ನಾವು ನೋಡಿದ್ದೇವೆ. ಹೀಗಾಗಿ ಈ ಜಂಜಾಟಗಳೇ ಬೇಡ ಎನ್ನುವವರು ಮಂತ್ರ ಮಾಂಗಲ್ಯ ಪದ್ಧತಿಯ ಮೂಲಕ ಹೊಸ ಜೀವನ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿ ಕುವೆಂಪು ಅವರ ‘ ಮಂತ್ರ ಮಾಂಗಲ್ಯ ‘ ನಿಜಕ್ಕೂ ಪ್ರಸ್ತುತ. ಅರ್ಥ ಮಾಡಿಕೊಂಡಲ್ಲಿ ನೆಮ್ಮದಿ ನಿಶ್ಚಿತ. ಕುವೆಂಪು ಅವರು ಸಾಹಿತಿ, ಕವಿ, ಬರಹಗಾರ, ಪ್ರಾಧ್ಯಾಪಕರಷ್ಟೇ ಅಲ್ಲ ಶ್ರೇಷ್ಠ ಸಮಾಜ ಸುಧಾರಕರೂ ಹೌದು. ಸಮಾಜದಲ್ಲಿದ್ದ ಮೇಲು ಕೀಳು, ಅಸಮಾನತೆ, ಮೌಢ್ಯ, ದುಂದುವೆಚ್ಚ, ಪುರೋಹಿತಶಾಹಿಗಳ ವಿರುದ್ಧ ಧ್ವನಿ ಎತ್ತಿದ್ದವರು. ವಿಶ್ವಮಾನವ ಕುವೆಂಪು ಅವರು ಮದುವೆ ಎಂಬುವುದು ಅದ್ದೂರಿತನ ಮತ್ತು ಮೌಢ್ಯಗಳಿಂದ ತುಂಬಿದೆ ಎಂದು ಆ ಆಚರಣೆಗೆ ಬೇರೆಯದ್ದೇ ರೂಪ ಕೊಟ್ಟು, ಅದನ್ನು ಪ್ರಚಾರ ಮಾಡಲು...