ಪಾಟ್ನಾ: ಬಿಜೆಪಿ-ಜೆಡಿಯು ಪಕ್ಷಗಳ ಎನ್ಡಿಎ ಮೈತ್ರಿಕೂಟ ಸದಸ್ಯರಿಗೆ ಗಾಳಹಾಕಲು ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ.
ಜೈಲಿನಿಂದಲೇ ಲಾಲು ಯಾದವ್ ಅವರು ಎನ್ಡಿಎ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬಿಹಾರ ವಿಧಾನಸಭೆಯಲ್ಲಿ ಸ್ಪೀಕರ್ ಚುನಾವಣೆಯನ್ನು ತ್ಯಜಿಸಿದರೆ ಬಿಜೆಪಿ ನಾಯಕನನ್ನು ಮಂತ್ರಿ ಮಾಡುತ್ತೇನೆ ಎಂಬ ಆಮಿಷವೊಡ್ಡಿದ್ದಾರೆ ಎಂದು ಬುಧವಾರ ತಮ್ಮ ಆಡಿಯೊ ಕ್ಲಿಪ್ ಟ್ವಿಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಬಿಜೆಪಿ ಶಾಸಕರಿಗೆ ಸಾಂಕ್ರಾಮಿಕ ರೋಗದ ನೆಪವೊಡ್ಡಿ ಮತದಾನದ ದಿನದಂದು ಗೈರುಹಾಜರಾಗುವಂತೆ ಲಾಲು ಸೂಚಿಸಿದ್ದಾರೆ ಎಂದು ಸುಶೀಲ್ ಮೋದಿ ಆರೋಪಿಸಿದ್ದಾರೆ.
ಮೋದಿ ಹಂಚಿಕೊಂಡಿರುವ ಆಡಿಯೊ ಕ್ಲಿಪ್ನಲ್ಲಿ ‘ನಾವು ನಿಮ್ಮನ್ನು ಮಂತ್ರಿಯನ್ನಾಗಿ ಮಾಡುತ್ತೇವೆ. ನಾಳೆ ಸ್ಪೀಕರ್ ಚುನಾವಣೆಯಲ್ಲಿ ನೀವು ನಮ್ಮನ್ನು ಬೆಂಬಲಿಸಬೇಕಾಗುತ್ತದೆ. ಸ್ಪೀಕರ್ ಒಮ್ಮೆ ಹೋದ ನಂತರ ಮತ್ತೆ ನೋಡಿಕೊಳ್ಳೊಣ’ ಎಂದು ಲಾಲು ಪ್ರಸಾದ್ ಹೇಳುತ್ತಾರೆ. ಇದಕ್ಕೆ ಬಿಜೆಪಿ ಶಾಸಕ ‘ನಾನಿನ್ನೂ ಪಕ್ಷದಲ್ಲಿದ್ದೇನೆ’ ಎಂದು ಹಿಂಜರಿಕೆ ತೋರಿಸುತ್ತಾರೆ. ಲಾಲು ಪ್ರಸಾದ್ ‘ಆಬ್ಸೆಂಟ್ ಹೋ ಜಾವೋ, ಕೊರೊನಾ ಹೋ ಗಯಾ ಥಾ’ ಎಂದು ಹೇಳಿದ್ದಾರೆ.
ಮೇವು ಹಗರಣದಲ್ಲಿ ಲಾಲು ಶಿಕ್ಷೆ ಅನುಭವಿಸುತ್ತಿದ್ದರೂ ಅವರಿಗೆ ಫೋನ್ನಲ್ಲಿ ಮಾತನಾಡಲು ಅವಕಾಶವಿದೆ. ಲಾಲು ಯಾದವ್ ರಾಂಚಿಯಿಂದ ಎನ್ಡಿಎ ಶಾಸಕರಿಗೆ ದೂರವಾಣಿ ಕರೆ ಮಾಡಿ ಮಂತ್ರಿ ಸ್ಥಾನದ ಆಮಿಷವೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಲಾಲುಗೆ ಕರೆ ಮಾಡಿದಾಗ ಅವರೇ ನೇರವಾಗಿ ಮಾತನಾಡಿದ್ದಾರೆ. ಆಗ ನಾನು ಲಾಲುಗೆ ಕೊಳಕು ತಂತ್ರಗಳನ್ನು ಮಾಡಬೇಡಿ ಎಂದು ಹೇಳಿದ್ದೆ ಎಂದು ಸುಶೀಲ್ ಮೋದಿ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
ಸುಶೀಲ್ ಮೋದಿಯವರ ಆರೋಪವನ್ನು ಆರ್ಜೆಡಿ ನಿರಾಕರಿಸಿದೆ.
ರಾಷ್ಟೀಯ ಜನತಾದಳ ಪಕ್ಷದ ವಕ್ತಾರ ಮೃತ್ಯುಂಜಯ್ ತಿವಾರಿ ಮಂಗಳವಾರ ಸುಶೀಲ್ ಮೊದಿಯವರ ಆರೋಪವನ್ನು ತಿರಸ್ಕರಿಸಿದ್ದಾರೆ. ‘ಎನ್ಡಿಎ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂಬ ಆತಂಕವಿದೆ, ನಿಜವಾದ ಸಮಸ್ಯೆಗಳಿಂದ ವಿಮುಖರಾಗಲು ಸುಶೀಲ್ ಮೋದಿ ಅವಿವೇಕದ ಆರೋಪವನ್ನು ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
लालू यादव ने दिखाई अपनी असलियत
लालू प्रसाद यादव द्वारा NDA के विधायक को बिहार विधान सभा अध्यक्ष के लिए होने वाले चुनाव में महागठबंधन के पक्ष में मतदान करने हेतु प्रलोभन देते हुए। pic.twitter.com/LS9968q7pl
— Sushil Kumar Modi (@SushilModi) November 25, 2020
Published On - 3:06 pm, Wed, 25 November 20