AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಸಾಲಿನ ಉತ್ತರದ ನಾಯಕ ನಿಸ್ಸೀಮ ಪಟೇಲ್: ಮೃದುತ್ವ ಮತ್ತು ಕೆಲಸ ಎರಡಕ್ಕೂ ಸೈ

ದೇಶದ ಎಲ್ಲ ರಾಜ್ಯಗಳ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳು, ಒಳಸುಳಿಗಳು ಅಹ್ಮದ್ ಪಟೇಲ್​ ಅವರ ಅಂಗೈ ಹಿಡಿತದಲ್ಲಿತ್ತು. ಅದರ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್​ಗೆ ಸಕಾಲಕ್ಕೆ, ಸಮಂಜಸ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತಿದ್ದರು ಎಂದು ಅಹ್ಮದ್ ಪಟೇಲ್​ರನ್ನು ನೆನೆಯುತ್ತಾರೆ ಹಿರಿಯ ಕಾಂಗ್ರೆಸ್​ ನಾಯಕ ಬಿ.ಕೆ.ಹರಿಪ್ರಸಾದ್.

ಒಂದು ಸಾಲಿನ ಉತ್ತರದ ನಾಯಕ ನಿಸ್ಸೀಮ ಪಟೇಲ್: ಮೃದುತ್ವ ಮತ್ತು ಕೆಲಸ ಎರಡಕ್ಕೂ ಸೈ
ಒಂದೇ ಸಾಲು ಉತ್ತರ ನೀಡುವುದರಲ್ಲಿ ನಿಸ್ಸೀಮರಾಗಿದ್ದ ಅಹ್ಮದ್ ಪಟೇಲ್ ಅವರು ಮೃದುತ್ವ ಮತ್ತು ಕೆಲಸ ಎರಡಕ್ಕೂ ಸೈ- ಬಿಕೆ ಹರಿಪ್ರಸಾದ್ ನುಡಿನಮನ
ಸಾಧು ಶ್ರೀನಾಥ್​
| Updated By: ganapathi bhat|

Updated on:Nov 25, 2020 | 5:33 PM

Share

ನಾನು ಅವರನ್ನು ನನ್ನ NSUI ದಿನದಿಂದ ಬಲ್ಲೆ. ನಾನು ಎನ್​​ಎಸ್​ಯುಐ ನಾಯಕನಾಗಿದ್ದಾಗ ಅವರು ಗುಜರಾತ್ ಯೂತ್ ಕಾಂಗ್ರೆಸ್ ನಾಯಕರಾಗಿದ್ದರು. ಆದರೆ, ಅವರ ಜೊತೆಗಿನ ಸಂಬಂಧ ಗಟ್ಟಿಯಾಗಿದ್ದು ನಾನು ರಾಜ್ಯಸಭೆಗೆ ಹೋದಾಗ. ನಾನು ಕರ್ನಾಟಕದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆರಿಸಿ ಹೋಗಿದ್ದೆ. ಅವರು ಅದಾಗಲೇ ರಾಜ್ಯಸಭೆಯಲ್ಲಿ ಇದ್ದರು. ಕೆಲವೇ ದಿನದಲ್ಲಿ ನಾನು ಅವರಿಗೆ ತುಂಬಾ ಹತ್ತಿರವಾದೆ. ಅವರು ನನ್ನನ್ನು ಬಿಕೆ ಎಂದು ಕರೆಯುತ್ತಿದ್ದರು. ಜೂನ್ ತಿಂಗಳಿನಲ್ಲಿ ಅವರನ್ನು ವೈಯಕ್ತಿಕ ಭೇಟಿಯಾಗಿದ್ದು. ಅದಾದ ಮೇಲೆ ಭೇಟಿ ಆಗಲಿಲ್ಲ. ಮತ್ತು ಆಗಸ್ಟ್ ತಿಂಗಳಿನಲ್ಲಿ ಅವರ ಹುಟ್ಟುಹಬ್ಬ ಇತ್ತು. ಆಗ ಮಾತನಾಡಿದ್ದೇ ಕೊನೆ.

ಅವರ ಕರಿಷ್ಮಾ ನೋಡಿ. ಐತಿಹಾಸಿಕ 1977ರ ಲೋಕಸಭೆ ಚುನಾವಣೆಯಲ್ಲಿ ಇಡೀ ಉತ್ತರ ಭಾರತ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ತೇಲಿತ್ತು ಮತ್ತೂ ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಘಟಾನುಘಟಿ ಕಾಂಗ್ರೆಸ್​ ನಾಯಕರು ಸೋತಿದ್ದರು. ಕೆಲವೇ ಕೆಲವು ಕಾಂಗ್ರೆಸ್​ ನಾಯಕರು ಚುನಾವಣೆ ಗೆದ್ದಿದ್ದರು. ಅವರಲ್ಲಿ ಅಹ್ಮದ್ ಪಟೇಲ್ ಕೂಡ ಒಬ್ಬರು.

ನಾನು ನೋಡಿದ ಕೆಲವೇ ಕೆಲವು ಕಾಂಗ್ರೆಸ್ ನಾಯಕರಲ್ಲಿ ಪಟೇಲ್ ಕೂಡ ಒಬ್ಬರು. ಅವರ ಮನೆಯಲ್ಲಿ ಮಹಾತ್ಮ ಗಾಂಧೀಜಿ ಫೋಟೋ ಇದೆ ಮತ್ತು ಪ್ರತಿದಿನ ಅವರು ಅದಕ್ಕೆ ನಮನ ಸಲ್ಲಿಸುತ್ತಿದ್ದರು.

ರಾಜಕೀಯ ನಾಯಕರೆಂದರೆ ಸದಾ ಮಾತನಾಡಬೇಕು. ಎದುರಿಗಿದ್ದವರಿಗೆ ಮಾತನಾಡಲು ಬಿಡದಂತೆ ಅವರನ್ನು ಸುಮ್ಮನಿರಿಸಬೇಕು. ಇಲ್ಲದಿದ್ದರೆ ಅವರು ನಾಯಕರೇ ಅಲ್ಲ ಎನ್ನುವ ಸಂಪ್ರದಾಯ ಭಾರತೀಯ ರಾಜಕೀಯದಲ್ಲಿ. ಅದಕ್ಕೆ ಅಪವಾದ ಎಂಬಂತೆ ಇದ್ದವರು ಅಹ್ಮದ್ ಪಟೇಲ್. ಅವರನ್ನು ನಮ್ಮಲ್ಲಿ ಕೆಲವರು ಒಂದು ವಾಕ್ಯದ ನಾಯಕರು (leader with single line replies) ಎಂದು ಕರೆಯುತ್ತಿದ್ದೆವು. ಅವರ ಮಾತು ಬಹಳ ಮೃದು. ಯಾವತ್ತೂ ಯಾರನ್ನೂ ನೋಯಿಸಿದವರಲ್ಲ.

ಗುಜರಾತ್ ಚುನಾವಣೆಯ ಸಮಯ. ಆಗ ನಾವು ಬೆಳಗಿನ ಐದು ಘಂಟೆವರೆಗೂ ಕೆಲಸ ಮಾಡುತ್ತಿದ್ದೆವು. ಬಿಕೆ, ಅಬ್ ಮುಜೆ ನಮಾಜ್ ಪರ್ ಜಾನಾ ಹೈ. ತುಂ ರೆಸ್ಟ್ ಲೇಲೊ ಎಂದು ಹೇಳಿ ಹೊರಟು ಬಿಡುತ್ತಿದ್ದರು. ಆವರು ಕೆಲಸ ಮಾಡುತ್ತಿದ್ದ ರೀತಿಯೇ ಹಾಗೆ. ಕಾಂಗ್ರೆಸ್ ಪಕ್ಷದ ಐಡಿಯಾಲಜಿ ಮತ್ತು ಗಾಂಧಿ ಕುಟುಂಬಕ್ಕೆ ಇದ್ದ ನಿಷ್ಠೆಯನ್ನು ಯಾರೂ ಪ್ರಶ್ನಿಸಲಾಗದು. ಇಂದು ನಿನ್ನೆ ರಾಜಕೀಯಕ್ಕೆ ಬಂದು ಆ ಪದವಿ ಬೇಕು ಈ ಪದವಿ ಬೇಕು ಎಂದು ಲಾಬಿ ಮಾಡುವ ನಾಯಕರನ್ನು ನೋಡಿದಾಗ ಪಟೇಲ್ ಅವರು ಜೆಮ್ ಅಂತ ಅನ್ನಿಸ್ತಾರೆ. ಅವರು ಯಾವತ್ತೂ ಮಂತ್ರಿಯಾಗಲೇ ಇಲ್ಲ.

ಅವರ ಮಗ ಫೈಜಲ್ ತುಂಬಾ ಬುದ್ಧಿವಂತ. ಹಾರ್ವರ್ಡನಲ್ಲಿ ಓದಿ ಬಂದಿದ್ದಾನೆ. ಅವರು ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ಪ್ರಕಾರ ಆತನನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತರಬೇಕು ಮತ್ತು ಬೆಳೆಸಬೇಕು.

(ನಿರೂಪಣೆ: ಭಾಸ್ಕರ​ ಹೆಗಡೆ )

Published On - 4:52 pm, Wed, 25 November 20