
ಬೆಂಗಳೂರು, ಜನವರಿ 19: ಕರ್ನಾಟಕದಲ್ಲಿ (Karnataka) ಕಳೆದ ಎರಡು ವರ್ಷಗಳಲ್ಲಿ 90 ಸಾವಿರದಷ್ಟು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸರ್ಕಾರಿ ಭೂಮಿಯ ಸಂರಕ್ಷಣೆಗಾಗಿ ತಂತ್ರಜ್ಞಾನ ಆಧಾರಿತ ಪ್ರಯತ್ನವಾಗಿ ಕಂದಾಯ ಇಲಾಖೆಯು ‘ಲ್ಯಾಂಡ್ ಬಿಟ್ ಡಿಜಿಟಲ್ ಸರ್ವೈಲೆನ್ಸ್ (Land Beat digital surveillance)’ ಕಾರ್ಯಕ್ರಮ ಅನುಷ್ಠಾನಗೊಳಿಸಿತ್ತು. ಇದರಡಿ ಕಳೆದ ಎರಡು ವರ್ಷಗಳಲ್ಲಿ 13.9 ಲಕ್ಷಕ್ಕೂ ಹೆಚ್ಚು ಸರ್ಕಾರಿ ಭೂಮಿಗಳನ್ನು ಪರಿಶೀಲನೆ ಮಾಡಲಾಗಿದೆ. ಈ ವೇಳೆ, ಒತ್ತುವರಿ ವಿಚಾರ ಬಯಲಾಗಿದೆ.
ಲ್ಯಾಂಡ್ ಬಿಟ್ ಡಿಜಿಟಲ್ ಸರ್ವೈಲೆನ್ಸ್ ಕಾರ್ಯಕ್ರಮದಡಿ ಪರಿಶೀಲನೆ 2024 ರಿಂದ ಚುರುಕುಗೊಂಡಿತ್ತು. 2024ರ ಮಾರ್ಚ್ ವೇಳೆಗೆ 27,380 ಜಾಗಗಳನ್ನು ಪರಿಶೀಲನೆ ನಡೆಸಲಾಗಿದ್ದರೆ, ಜುಲೈ ವೇಳೆಗೆ ಆ ಸಂಖ್ಯೆ 10.7 ಲಕ್ಷಕ್ಕೆ ಏರಿಕೆ ಕಂಡಿತ್ತು. ಸೆಪ್ಟೆಂಬರ್ ವೇಳೆಗೆ 13, ದಾಟಿತ್ತು. 2025ರ ಡಿಸೆಂಬರ್ 24ರ ವೇಳೆಗೆ ಒಟ್ಟು 13,94,519 ಸರ್ಕಾರಿ ಜಾಗಗಳನ್ನು ಪರಿಶೀಲನೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಗ್ರಾಮ ಲೆಕ್ಕಿಗರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು (ವಿಎಒ) ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಭೂ ಗಡಿಗಳನ್ನು ಪರಿಶೀಲನೆ ನಡೆಸಿದ್ದರು. ಇದರಲ್ಲಿ ಅಧಿಕಾರಿಗಳು ಪ್ರತಿಯೊಂದು ಸ್ಥಳಕ್ಕೆ ಭೌತಿಕವಾಗಿ ಭೇಟಿ ನೀಡಿ, ಅದರ ಗಡಿಗಳಲ್ಲಿ ನಡೆದುಕೊಂಡು ಹೋಗಿ ಛಾಯಾಚಿತ್ರಗಳು ಮತ್ತು ಕಿರು ವೀಡಿಯೊಗಳನ್ನು ಅಪ್‌ಲೋಡ್ ಮಾಡಬೇಕಾಗಿತ್ತು.
ಈ ವ್ಯವಸ್ಥೆಯು ಕಚೇರಿಗಳಿಂದ ದತ್ತಾಂಶ ನಮೂದನ್ನು ತಡೆಯುತ್ತದೆ, ಇದು ಆನ್-ಗ್ರೌಂಡ್ ಪರಿಶೀಲನೆಯನ್ನು ಖಚಿತಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಂಡ್ ಬೀಟ್ ವ್ಯವಸ್ಥೆಯನ್ನು ಡಿಜಿಟಲ್ ಪರಿಶೀಲನೆಗಳು ಇತರ ನಿರ್ದಿಷ್ಟ ಕ್ರಮಗಳ ಮೂಲಕ ಶಿಸ್ತುಬದ್ಧವಾಗಿ ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಕೋಗಿಲು ಲೇಔಟ್: ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ
ಹಿಂದೆ, ಕೆಲಸದ ಒತ್ತಡ ಮತ್ತು ಬಹು ಜವಾಬ್ದಾರಿಗಳಿಂದಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಭೂಮಿ ಪರಿಶೀಲನೆ ಕಾರ್ಯವನ್ನು ತಪ್ಪಿಸುತ್ತಿದ್ದರು. ಅದಕ್ಕಾಗಿ ಲ್ಯಾಂಡ್ ಬೀಟ್ ವ್ಯವಸ್ಥೆಯನ್ನು ತರಬೇಕಾಯಿತು ಎಂದೂ ಅವರು ತಿಳಿಸಿದ್ದಾರೆ.
Published On - 7:49 am, Mon, 19 January 26