200ಕ್ಕೂ ಹೆಚ್ಚು ಪ್ರಾಣಿಗಳಿಗೆ ಕ್ವಾರಂಟೈನ್: ಬಿಂಕದಕಟ್ಟಿ ಮೃಗಾಲಯದಲ್ಲಿ ಆಗಿದ್ದೇನು?
ಗದಗನ ಬಿಂಕದಕಟ್ಟಿ ಮೃಗಾಲಯದಲ್ಲಿ ಗಳಲೆ ರೋಗದಿಂದ ನೀಲಗಾಯ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಇತರ ಪ್ರಾಣಿಗಳಿಗೆ ಸೋಂಕು ಹರಡದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹಿಮೋರೇಜಿಕ್ ಸೆಪ್ಟಿಸಿಮಿಯಾ ಸೋಂಕು ಪತ್ತೆಯಾದ ನಂತರ, ಸಸ್ಯಹಾರಿ ಪ್ರಾಣಿಗಳಿಗೆ 21 ದಿನಗಳ ಕ್ವಾರಂಟೈನ್ ಜಾರಿ ಮಾಡಲಾಗಿದ್ದು, ಮೃಗಾಲಯಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.

ಗದಗ, ಫೆಬ್ರವರಿ 18: ಬಿಂಕದಕಟ್ಟಿ ಮೃಗಾಲಯ (binkadakatti zoo) ಉತ್ತರ ಕರ್ನಾಟಕದ ಪ್ರಮುಖ ಮೃಗಾಲಯ. ಈ ಮೃಗಾಲಯದಲ್ಲಿ ಪ್ರಾಣಿಗಳಿಗೆ ರೋಗದ ಭೀತಿ ಎದುರಾಗಿದೆ. ಮಾರಣಾಂತಿಕ ಗಳಲೆ ರೋಗದಿಂದ ನೀಲಗಾಯ್ ಸಾವನ್ನಪ್ಪಿದ ಬಳಿಕ ಮತ್ತಷ್ಟು ಆತಂಕ ಮನೆ ಮಾಡಿದೆ. ಹೀಗಾಗಿ ಸಸ್ಯಹಾರಿ ಪ್ರಾಣಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಪ್ರಾಣಿಗಳ ಮೇಲೆ ನಿಗಾವಹಿಸಲಾಗಿದೆ. ಮೃಗಾಲಯ ವೀಕ್ಷಣೆಗೆ ನಿರ್ಬಂಧ ಹೇರಲಾಗಿದ್ದು, ಪ್ರವಾಸಿಗರಿಗೆ ಭಾರೀ ನಿರಾಸೆ ಉಂಟಾಗಿದೆ.
ಕ್ವಾರಂಟೈನ್ ಅಂದರೆ ಥಟ್ ಅಂತ ನೆನಪಾಗುವುದು ಕೊರೊನಾ ಎಮರ್ಜೆನ್ಸಿ. ಕೊರೊನಾ ಹೆಮ್ಮಾರಿಗೆ ಅಂದು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆದರೆ ಇದೀಗ ಪ್ರಾಣಿಗಳನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಪ್ರಾಣಿ ಸಂಗ್ರಹಾಲಯವಾಗಿರುವ ಗದಗಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಗಂಭೀರ ರೋಗದ ಆತಂಕ ಎದುರಾಗಿದೆ.
ಇದನ್ನೂ ಓದಿ: ಮೈಸೂರು ಪ್ರವಾಸಿಗರಿಗೆ ದುಃಖದ ಸುದ್ದಿ: ಇನ್ಮುಂದೆ ಸಿಗಲ್ಲ ಜಿರಾಫೆ ‘ಯುವರಾಜ’
ಫೆಬ್ರವರಿ 3ರಂದು ಮೃಗಾಲಯದಲ್ಲಿದ್ದ ನೀಲಗಾಯ್ ಪ್ರಾಣಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ಬಳಿಕ ಅದು ಹೆಮರಾಜಿಕ್ ಸೆಪ್ಟಿಸೆಮಿಯಾ (ಗಳಲೆ) ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಈ ರೋಗವು ನೀಲಗಾಯ್ ಸೇರಿದಂತೆ ಸಸ್ಯಹಾರಿ ಪ್ರಾಣಿಗಳಲ್ಲಿ ವೇಗವಾಗಿ ಹರಡುವ ಹಾಗೂ ಪ್ರಾಣ ತೆಗೆಯುವ ಸ್ವರೂಪ ಹೊಂದಿರುವುದರಿಂದ ಮೃಗಾಲಯದ ಆಡಳಿತ ಮತ್ತು ಅರಣ್ಯ ಇಲಾಖೆ ತೀವ್ರ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ರೋಗದ ಭೀತಿ ಹಿನ್ನೆಲೆ ಮೃಗಾಲಯದಲ್ಲಿರುವ 200ಕ್ಕೂ ಹೆಚ್ಚು ಸಸ್ಯಹಾರಿ ಪ್ರಾಣಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಇನ್ನು ನೀಲಗಾಯ್, ಕೃಷ್ಣಮೃಗ, ಜಿಂಕೆ ಹಾಗೂ ಕಡವೆ ಇರುವ ಸುತ್ತಲೂ ಹಸಿರು ಪರದೆ ಅಳವಡಿಸಿ ಕ್ವಾರಂಟೈನ್ ವಲಯ ನಿರ್ಮಿಸಲಾಗಿದ್ದು, ಈ ವಿಭಾಗಗಳ ವೀಕ್ಷಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮೃಗಾಲಯದಲ್ಲಿರುವ 37 ನೀಲಗಾಯ್‌ಗಳ ಮೇಲೆ ವಿಶೇಷ ನಿಗಾವಹಿಸಲಾಗಿದ್ದು, ನಾಲ್ವರು ಪ್ರಾಣಿ ಪಾಲಕರು ಸಸ್ಯಹಾರಿ ಪ್ರಾಣಿಗಳ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.
ಮೃಗಾಲಯ ಆರ್ಎಫ್ಓ ಸ್ನೇಹಾ ಕೊಪ್ಪಳ ಹೇಳಿದ್ದಿಷ್ಟು
ಇದೇ ರೋಗದಿಂದ ಇತ್ತೀಚೆಗೆ ಬೆಳಗಾವಿ ಮೃಗಾಲಯದಲ್ಲಿಯೂ ಕೃಷ್ಣಮೃಗಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ಗದಗ ಮೃಗಾಲಯದಲ್ಲೂ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸೋಂಕು ಹರಡದಂತೆ 21 ದಿನಗಳ ಕಾಲ ಸಸ್ಯಹಾರಿ ಪ್ರಾಣಿಗಳ ಮೇಲೆ ತೀವ್ರ ನಿಗಾವಹಿಸಲು ತೀರ್ಮಾನಿಸಲಾಗಿದೆ. ಸಸ್ಯಹಾರಿ ಪ್ರಾಣಿಗಳನ್ನು ಹೊರತುಪಡಿಸಿ ಮೃಗಾಲಯದ ಉಳಿದ ಭಾಗದಲ್ಲಿ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಮೃಗಾಲಯ ಆರ್ಎಫ್ಓ ಸ್ನೇಹಾ ಕೊಪ್ಪಳ ಹೇಳಿದ್ದಾರೆ.
ಇದನ್ನೂ ಓದಿ: ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಮುಂದುವರಿದ ಸಾವಿನ ಸರಣಿ: ಮೃತ ಕೃಷ್ಣಮೃಗಗಳ ಸಂಖ್ಯೆ 29ಕ್ಕೆ ಏರಿಕೆ
ಒಟ್ಟಿನಲ್ಲಿ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಅಗತ್ಯ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಡೇಂಜರ್ ಕಾಯಿಲೆಯಾದ ಗಳಲೆ ರೋಗ ಸಾಕಷ್ಟು ಆತಂಕ್ಕೆ ಕಾರಣವಾಗಿದೆ. ಹೀಗಾಗಿ ಸಸ್ಯಹಾರಿ ವೀಕ್ಷಣೆ ಮಾಡಲು ಬರುವ ಪ್ರವಾಸಿಗರು ಹಾಗೂ ಪ್ರಾಣಿ ಪ್ರಿಯರಿಗೆ ನಿರಾಸೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:37 pm, Wed, 18 February 26