ಮೈಸೂರು ಪ್ರವಾಸಿಗರಿಗೆ ದುಃಖದ ಸುದ್ದಿ: ಇನ್ಮುಂದೆ ಸಿಗಲ್ಲ ಜಿರಾಫೆ ‘ಯುವರಾಜ’
ಮೈಸೂರು ಮೃಗಾಲಯದ ಅತ್ಯಂತ ಜನಪ್ರಿಯ ಜಿರಾಫೆ 'ಯುವರಾಜ' 25 ವರ್ಷ ವಯಸ್ಸಿನಲ್ಲಿ ನಿಧನವಾಗಿದೆ. ವಯೋಸಹಜ ಕಾಯಿಲೆಗಳಿಂದ ಮೃತಪಟ್ಟ ಯುವರಾಜ, ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದ. ಅವನ ಅಗಲಿಕೆ ಪ್ರಾಣಿಪ್ರೇಮಿಗಳಿಗೆ ತೀವ್ರ ಬೇಸರ ತಂದಿದೆ. ಮೈಸೂರು ಮೃಗಾಲಯ ಜಿರಾಫೆಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಯುವರಾಜನ ಪರಂಪರೆ ಮುಂದುವರಿಯಲಿದೆ.

ಮೈಸೂರು, ಜ.29: ಮೈಸೂರು ಮೃಗಾಲಯದ ಅತ್ಯಂತ ಹಿರಿಯ ಮತ್ತು ಜನಪ್ರಿಯ ಜಿರಾಫೆ ‘ಯುವರಾಜ’ ಸಾವನ್ನಪ್ಪಿದೆ. ಇದೀಗ ಈ ವಿಚಾರ ಪಾಣಿ ಪ್ರೇಮಿಗಳಿಗೆ ಹಾಗೂ ಮೈಸೂರು ನಿವಾಸಿಗಳಿಗೆ ತೀವ್ರ ಬೇಸರ ತಂದಿದೆ. 25 ವರ್ಷಗಳ ಕಾಲ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಯುವರಾಜ, ವಯೋಸಹಜ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆದಿದ್ದಾನೆ. ಡಿಸೆಂಬರ್ 7, 2001 ರಂದು ಮೈಸೂರು ಮೃಗಾಲಯದಲ್ಲೇ ಜನಿಸಿದ ಯುವರಾಜ, 1987 ರಲ್ಲಿ ಜರ್ಮನಿಯ ಮೃಗಾಲಯದಿಂದ ಮೈಸೂರಿಗೆ ಕರೆತರಲಾಗಿದ್ದ ಹೆನ್ರಿ ಮತ್ತು ಹನಿ ಎಂಬ ಜಿರಾಫೆ ದಂಪತಿಗಳ ಮರಿ. ಯುವರಾಜ ಹುಟ್ಟಿದ ನಂತರ ಅವನನ್ನು ಮೃಗಾಲಯದ ಪಾಲಕರು (Zoo keepers) ಅತ್ಯಂತ ಪ್ರೀತಿಯಿಂದ ಪೋಷಿಸಿ ಬೆಳೆಸಿದ್ದಾರೆ. ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಯುವರಾಜನ ಎತ್ತರದ ನಿಲುವು ಮತ್ತು ಶಾಂತ ಸ್ವಭಾವ ಬಹಳ ಅಚ್ಚುಮೆಚ್ಚಿನದಾಗಿತ್ತು.
ಜಿರಾಫೆಗಳ ಸರಾಸರಿ ಜೀವಿತಾವಧಿ ಸಾಮಾನ್ಯವಾಗಿ 20 ರಿಂದ 25 ವರ್ಷಗಳು. ಯುವರಾಜ ತನ್ನ ಜೀವಿತಾವಧಿಯ ಗರಿಷ್ಠ ಮಿತಿಯವರೆಗೂ ಬದುಕಿದ್ದನು. ಕಳೆದ ಕೆಲವು ದಿನಗಳಿಂದ ವಯೋಸಹಜ ದೌರ್ಬಲ್ಯದಿಂದ ಬಳಲುತ್ತಿದ್ದ ಅವನಿಗೆ ಮೃಗಾಲಯದ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೈಸೂರು ಮೃಗಾಲಯದ ಇತಿಹಾಸದಲ್ಲಿ ‘ಯುವರಾಜ’ನ ಹೆಸರು ಸದಾ ನೆನಪಿನಲ್ಲಿ ಉಳಿಯುತ್ತದೆ. ಮೃಗಾಲಯದ ಸಿಬ್ಬಂದಿ ಮತ್ತು ಅವನನ್ನು ನೋಡಲು ಬರುತ್ತಿದ್ದ ಲಕ್ಷಾಂತರ ಅಭಿಮಾನಿಗಳು ಅವನನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ಇಲ್ಲಿದೆ ವಿಡಿಯೋ:
ಮೈಸೂರು ಮೃಗಾಲಯವು (ಚಾಮರಾಜೇಂದ್ರ ಮೃಗಾಲಯ) ದೇಶದಲ್ಲೇ ಅತಿ ಹೆಚ್ಚು ಜಿರಾಫೆಗಳನ್ನು ಹೊಂದಿರುವ ಮತ್ತು ಅವುಗಳ ಸಂತಾನೋತ್ಪತ್ತಿಯಲ್ಲಿ ಯಶಸ್ವಿಯಾದ ಮೃಗಾಲಯಗಳಲ್ಲಿ ಒಂದಾಗಿದೆ. ‘ಯುವರಾಜ’ನ ಅಗಲಿಕೆಯ ನಂತರವೂ ಅಲ್ಲಿ ಜಿರಾಫೆಗಳ ದೊಡ್ಡ ಕುಟುಂಬವೇ ಇದೆ. ಕೃಷ್ಣ ಮತ್ತು ಸುಧೀರ್, ಬಬೂಲಿ, ಭರತ್ ಸೇರಿದಂತೆ ಮೈಸೂರು ಮೃಗಾಲಯದಲ್ಲಿ ಸದ್ಯ 7 ರಿಂದ 8 ಜಿರಾಫೆಗಳು ಇವೆ.ಮೈಸೂರು ಮೃಗಾಲಯದ ಜಿರಾಫೆಗಳು ದಕ್ಷಿಣ ಆಫ್ರಿಕಾ ಮತ್ತು ಜರ್ಮನಿಯ ತಳಿಗಳ ವಂಶಸ್ಥವಾಗಿವೆ. ಇಲ್ಲಿ ಜಿರಾಫೆಗಳ ಸಂತಾನೋತ್ಪತ್ತಿ ಚೆನ್ನಾಗಿ ನಡೆಯುವುದರಿಂದ, ಇಲ್ಲಿನ ಜಿರಾಫೆಗಳನ್ನು ಹೈದರಾಬಾದ್, ಅಹಮದಾಬಾದ್ ಮತ್ತು ಚೆನ್ನೈನ ಮೃಗಾಲಯಗಳಿಗೆ ಪ್ರಾಣಿ ವಿನಿಮಯ ಯೋಜನೆಯಡಿ ನೀಡಲಾಗಿದೆ.
ಇದನ್ನೂ ಓದಿ: ವಿವಾಹೇತರ ಸಂಬಂಧ ಹೊಂದುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಯುವತಿ
ಯುವರಾಜ ಕೇವಲ ಪ್ರವಾಸಿಗರ ಆಕರ್ಷಣೆಯಾಗಿರಲಿಲ್ಲ, ಅವನು ಮೃಗಾಲಯದ ಜಿರಾಫೆ ಕುಟುಂಬದ ಹಿರಿಯ ಸದಸ್ಯನಾಗಿದ್ದನು. ಈಗ ಅವನ ಸ್ಥಾನವನ್ನು ಅವನ ನಂತರದ ಪೀಳಿಗೆಯ ಜಿರಾಫೆಗಳಾದ ಕೃಷ್ಣ ಮತ್ತು ಇತರ ಯುವ ಜಿರಾಫೆಗಳು ತುಂಬಲಿವೆ. ಈ ಜಿರಾಫೆಗಳಿಗೆ ಪ್ರತಿದಿನ ಸುಮಾರು 50-60 ಕೆಜಿ ಹಸಿರು ಮೇವು, ಆಲದ ಮರದ ಎಲೆಗಳು, ಮತ್ತು ವಿಶೇಷ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಇಲ್ಲಿನ ಜಿರಾಫೆಗಳ ಎತ್ತರಕ್ಕೆ ತಕ್ಕಂತೆ ಆಹಾರದ ತೊಟ್ಟಿಗಳನ್ನು ಎತ್ತರದಲ್ಲಿ ಅಳವಡಿಸಲಾಗಿರುವುದು ಇಲ್ಲಿನ ವಿಶೇಷ. ಮೈಸೂರು ಮೃಗಾಲಯವು ಜಿರಾಫೆಗಳ ಸಂರಕ್ಷಣೆಗಾಗಿ ಪ್ರತ್ಯೇಕವಾದ ದೊಡ್ಡ ಆವರಣವನ್ನು ಹೊಂದಿದೆ. ನೀವು ಮೃಗಾಲಯಕ್ಕೆ ಭೇಟಿ ನೀಡಿದಾಗ ಈ ಜಿರಾಫೆ ಕುಟುಂಬವು ಆನೆಯ ಆವರಣದ ಸಮೀಪದಲ್ಲೇ ನಿಮಗೆ ಕಾಣಸಿಗುತ್ತದೆ.
ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ