ವಿಜಯಪುರ: ಲಿಂಬೆ ಅಭಿವೃದ್ಧಿ ಮಂಡಳಿ ಉತ್ತೇಜನಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ತೋಟಗಾರಿಕಾ ಸಚಿವರಿಗೆ ಒತ್ತಾಯ

| Updated By: preethi shettigar

Updated on: Jul 09, 2021 | 1:26 PM

ಕರ್ನಾಟಕದಲ್ಲಿ ಸುಮಾರು 21,660 ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆ ಬೆಳೆಯನ್ನು ಬೆಳೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ.

ವಿಜಯಪುರ: ಲಿಂಬೆ ಅಭಿವೃದ್ಧಿ ಮಂಡಳಿ ಉತ್ತೇಜನಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ತೋಟಗಾರಿಕಾ ಸಚಿವರಿಗೆ ಒತ್ತಾಯ
ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವರಾದ ಅಲ್ಲಾಪೂರ್ ಅವರಿಗೆ ಮನವಿ
Follow us on

ವಿಜಯಪುರ: ಬಹು ವರ್ಷಗಳ ನಂತರ ನಿಂಬೆ ಅಭಿವೃದ್ಧಿ ಮಂಡಳಿ ವಿಜಯಪುರ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ನಿಂಬೆ ಅಭಿವೃದ್ಧಿ ಮಂಡಳಿಯನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸ್ಥಾಪನೆ ಮಾಡಿತ್ತು. ಆದರೆ ನಿಂಬೆ ಅಭಿವೃದ್ಧಿ ಮಂಡಳಿಗೆ ಇಲ್ಲಿಯವರೆಗೆ ಸರ್ಕಾರ ನಿರೀಕ್ಷಿತವಾಗಿ ಬೆಂಬಲ ನೀಡಿಲ್ಲ. ಹೀಗಾಗಿ ಆರ್ಥಿಕವಾಗಿ ಸಬಲತೆ ನಿಂಬೆ ಅಭಿವೃದ್ಧಿಗೆ ಸಿಗಲೇ ಇಲ್ಲ. ಅಲ್ಲದೆ ಇಂಡಿ ಪಟ್ಟಣದ ಮಿನಿ ವಿಧಾನಸಭಾ ಕಟ್ಟಡದ ಒಂದೆರಡು ಕೊಠಡಿಗೆ ಮಾತ್ರ ನಿಂಬೆ ಅಭಿವೃದ್ಧಿ ಮಂಡಳಿ ಸೀಮಿತವಾಗಿತ್ತು. ಆದರೆ ಈಗ ಲಿಂಬೆ ಅಭಿವೃದ್ಧಿ ಮಂಡಳಿ ಉತ್ತೇಜನಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ಆದಷ್ಟು ಬೇಗ ಅವುಗಳನ್ನು ಜಾರಿಗೆ ತರುವಂತೆ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ್ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಜಿಲ್ಲೆಯವರೇ ಆದ ಹಾಗೂ ಸಂಘದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವ ಅಶೋಕ ಅಲ್ಲಾಪುರ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನೇಮಕವಾದರು. ನಿಂಬೆ ಅಭಿವೃದ್ಧಿ ಮಂಡಳಿ ಚುಕ್ಕಾಣಿ ಹಿಡಿದ ಬಳಿಕ ಜಿಲ್ಲೆಯ ನಿಂಬೆ ಬೆಳೆಗಾರರಿಗೆ ಸಹಾಯಕವಾಗುವ ಕೆಲಸ ಮಾಡಲು ಮನಸ್ಸು ಮಾಡಿದರು. ಆದರೆ ಇಲ್ಲಿ ಹಣಕಾಸಿನ ತೊಂದರೆ ಅಡ್ಡಿಯಾಗಿತ್ತು. ವಾರ್ಷಿಕವಾಗಿ ಒಂದು ಕೋಟಿ ರೂಪಾಯಿಗಳನ್ನು ಮಾತ್ರ ಸರ್ಕಾರ ನೀಡುತ್ತಿದೆ. ಇದು ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಾದಂತಾಗುತ್ತದೆ. ಇದರಿಂದ ನಿಂಬೆ ಬೆಳೆಗಾರರಿಗೆ ಎಷ್ಟರ ಮಟ್ಟಿಗೆ ಸಹಾಯ ಮಾಡಬಹುದು ಎಂಬುದೇ ಮತ್ತೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ದೇಶದಲ್ಲಿಯೇ ಹೆಚ್ಚು ನಿಂಬೆ ಉತ್ಪಾದನೆ ಮಾಡುವ ರಾಜ್ಯಗಳ ಸಾಲಲ್ಲಿ ಕರ್ನಾಟಕ
ಭಾರತವು ಲಿಂಬೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ 3 ನೇ ಸ್ಥಾನ ಪಡೆದಿದ್ದು, ಮೊದಲನೆ ಸ್ಥಾನ ಚೈನಾ ಹಾಗೂ ಎರಡನೇ ಸ್ಥಾನ ಮೆಕ್ಸಿಕೊ ಪಡೆದಿರುತ್ತದೆ. ಇನ್ನು ಲಿಂಬೆ ಉತ್ಪಾದನೆಯಲ್ಲಿ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್​ ಇದ್ದು, ನಂತರದಲ್ಲಿ ಅಂದರೆ 4ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಕರ್ನಾಟಕದಲ್ಲಿ ಸುಮಾರು 21,660 ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆ ಬೆಳೆಯನ್ನು ಬೆಳೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ.

ನಿಂಬೆ ಅಭಿವೃದ್ಧಿ ಮಂಡಳಿ ಸ್ವಂತ ಕಟ್ಟಡಕ್ಕೆ ಮನವಿ
ಭಾರತದಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವಂತ ಕಟ್ಟಡ ಬೇಕು. ಕಟ್ಟಡಲ್ಲಿ ಟ್ರೈನಿಂಗ್ ಸೆಂಟರ್, ಮಾರ್ಕೆಟಿಂಗ್, ಮಣ್ಣು, ನೀರು ಪರಿಶೀಲನಾ ಲ್ಯಾಬೋರೆಟರಿ ಕೇಂದ್ರ ಸಹಿತ, ಕಟ್ಟಡ ನಿರ್ಮಾಣ ಮಾಡಲು 5 ಕೋಟಿ ಅನುದಾನ ನೀಡಬೇಕೆಂದು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ್ ಕಳೇದ ಜುಲೈ 6 ರಂದು ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವರಾದ ಆರ್. ಶಂಕರ ಅವರಿಗೆ ಬೆಂಗಳೂರನಲ್ಲಿ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕದಲ್ಲಿ ಬೆಳೆಯುವ ಲಿಂಬೆ ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ‘ಖಾಗಜಿ’ ತಳಿಯ ಲಿಂಬೆಯು ಉತ್ತರ ಭಾರತ ಹಾಗೂ ಗಲ್ಫ್ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಲಿಂಬೆ ಬೆಳೆಗಾರರು ಮಾರುಕಟ್ಟೆಯ ಅನಿಶ್ಚಿತ ದರದಿಂದ, ಮಧ್ಯವರ್ತಿಗಳ ಹಾವಳಿಯಿಂದ ಹಾಗೂ ನೀರಿನ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ನಿಂಬೆ ಬೆಳಗಾರರಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ, ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವರಾದ ಅಲ್ಲಾಪೂರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಲಿಂಬೆ ಹಣ್ಣನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಿ, ಲಿಂಬೆ ಬೆಳೆಗಾರರನ್ನು ಪ್ರೋತ್ಸಾಹಿಸಬೇಕು. ವಿಜಯಪುರ, ಇಂಡಿ, ಸಿಂದಗಿ ತಾಲೂಕುಗಳಲ್ಲಿ ಪ್ರತ್ಯೇಕವಾಗಿ ಮೂರು ಶಿಥಲ ಘಟಕಗಳನ್ನು ನಿರ್ಮಾಣ ಮಾಡಬೇಕು. ಜಿಲ್ಲೆಯ 12 ತಾಲೂಕುಗಳಲ್ಲಿ ಹಾಪ್‌ಕಾಮ್ಸ್ ಮಳಿಗೆಗಳನ್ನು ಸ್ಥಾಪಿಸಬೇಕು. ಇನ್ನು ವಿಜಯಪುರ ಇಂಡಿ, ಸಿಂದಗಿ ತಾಲೂಕಿನಲ್ಲಿ ಪ್ರೋಸೆಸಿಂಗ್ ಘಟಕಗಳನ್ನು ನಿರ್ಮಿಸಲು ತಲಾ 20 ಎಕರೆಯಂತೆ ಸರ್ಕಾರದ ಜಮೀನು ನೀಡುಬೇಕು ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ್ ಒತ್ತಾಯಿಸಿದ್ದಾರೆ.

ಜಿಲ್ಲೆಯ ನಿಂಬೆಗೆ ಸಿಗಲಿಗೆ ಜಿಐ ಟ್ಯಾಗ್
ವಿಜಯಪುರ ಜಿಲ್ಲೆಯ ಲಿಂಬೆ ಹಣ್ಣು ವಿಶೇಷ ಗುಣವನ್ನು ಹೊಂದಿದ್ದು, ಕೆಲವೇ ದಿನಗಳಲ್ಲಿ ಜಿಐ ಟ್ಯಾಗ್ ಹೊಂದಿಲಿದೆ. ನಿಂಬೆಯ ಉಪ ಉತ್ಪನ್ನಗಳ ಮೌಲ್ಯವರ್ಧಿತ ಬೆಲೆ ಸಿಗಲು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಬಿಸಿಯೂಟ, ಶಾಲಾ -ಕಾಲೇಜು, ಹಾಸ್ಟೆಲ್ ಹಾಗೂ ರಾಜ್ಯದ ರೇಷನ್ ಪಡಿತರದಾರರಾದ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಪಿಕಲ್ ಇಂಡಸ್ಟ್ರೀಸ್‌ಗಳನ್ನು ನಿರ್ಮಿಸಿ, ಇಂದಿನ ಕೊರೊನಾ ಔಷಧಿಯ ಬೂಸ್ಟರ್‌ ರೀತಿಯಲ್ಲಿ ಬಳಸಿ, ಲಿಂಬೆ ಬೆಳೆಗಾರರಿಗೆ ಲಾಭ ಸಿಗುವಂತೆ ಮಾಡಲು ಯೋಜನೆ ಮಾಡಿದ್ದು, ಅದನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರುವಂತೆ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ:
2 ಹನಿ ಲಿಂಬೆ ರಸ ಮೂಗಿನಲ್ಲಿ ಹಾಕಿದರೆ ಕೊರೊನಾ ನಿವಾರಣೆ?- ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಯ್ತು ಸತ್ಯ.. ದಯವಿಟ್ಟು ಇಂಥದ್ದು ಮಾಡ್ಬೇಡಿ ಎಂದ ವೈದ್ಯರು

ಒಂದು ತಿಂಗಳ ಕಾಲ ಸುರಿದ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿ; ನೇರಳೆ‌ ಮಚ್ಚೆ ರೋಗದಿಂದ ಕಂಗಾಲಾದ ಚಿತ್ರದುರ್ಗದ ರೈತರು