ಒಂದು ತಿಂಗಳ ಕಾಲ ಸುರಿದ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿ; ನೇರಳೆ ಮಚ್ಚೆ ರೋಗದಿಂದ ಕಂಗಾಲಾದ ಚಿತ್ರದುರ್ಗದ ರೈತರು
ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 30ರಿಂದ 40 ಸಾವಿರ ಹೆಕ್ಟೇರ್ ಈರುಳ್ಳಿ ಬಿತ್ತನೆ ಮಾಡಲಾಗುತ್ತದೆ. ಜಿಲ್ಲೆಯ ಪ್ರಮುಖ ಬೆಳೆಯಾದ ಈರುಳ್ಳಿಯನ್ನೇ ಹೆಚ್ಚು ಜನರು ನಂಬಿಕೊಂಡಿದ್ದಾರೆ. ಆದರೆ, ಈ ಸಲ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಆರಂಭದಲ್ಲೇ ಆಘಾತ ಎದುರಾಗಿದೆ. ಈರುಳ್ಳಿಗೆ ನೇರಳೆ ಮಚ್ಚೆ ರೋಗ ಬಾಧಿಸುತ್ತಿದ್ದು, ಬೆಳೆ ಹಾನಿ ಆಗುತ್ತಿದೆ.
ಚಿತ್ರದುರ್ಗ: ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿತ್ತು. ಹೀಗಾಗಿ ಎಲ್ಲಾ ವ್ಯಾಪಾರ, ವ್ಯವಹಾರಗಳು ಬಂದ್ ಆಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಜುಲೈ 5 ರಿಂದ ಲಾಕ್ಡೌನ್ ಮುಕ್ತಾಯವಾಗಿದೆ. ಅದರಂತೆ ಎಲ್ಲಾ ಚಟುವಟಿಕೆಗಳು ಪುನರಾರಂಭವಾಗಿದ್ದು, ರೈತರು ಕೂಡ ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಅಂತೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ಪರಿಸ್ಥಿತಿ ಸುಧಾರಿಸುತ್ತಿದೆ. ಕಳೆದ ಒಂದು ತಿಂಗಳಿಂದ ಉತ್ತಮ ಮಳೆ ಕೂಡ ಸುರಿದಿದೆ. ಆದರೆ ಮಳೆ ಒಂದು ಕಡೆ ರೈತಾಪಿ ವರ್ಗದಲ್ಲಿ ಖುಷಿ ತಂದರೆ, ಮತ್ತೊಂದು ಕಡೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲೂ ಈರುಳ್ಳಿ ಬೆಳೆದ ರೈತರು ಮಳೆಯಿಂದಾಗಿ ಈರುಳ್ಳಿ ರೋಗ ಎದುರಿಸುವಂತಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 30ರಿಂದ 40 ಸಾವಿರ ಹೆಕ್ಟೇರ್ ಈರುಳ್ಳಿ ಬಿತ್ತನೆ ಮಾಡಲಾಗುತ್ತದೆ. ಜಿಲ್ಲೆಯ ಪ್ರಮುಖ ಬೆಳೆಯಾದ ಈರುಳ್ಳಿಯನ್ನೇ ಹೆಚ್ಚು ಜನರು ನಂಬಿಕೊಂಡಿದ್ದಾರೆ. ಆದರೆ, ಈ ಸಲ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಆರಂಭದಲ್ಲೇ ಆಘಾತ ಎದುರಾಗಿದೆ. ಈರುಳ್ಳಿಗೆ ನೇರಳೆ ಮಚ್ಚೆ ರೋಗ ಬಾಧಿಸುತ್ತಿದ್ದು, ಬೆಳೆ ಹಾನಿ ಆಗುತ್ತಿದೆ. ಇನ್ನು ಅಧಿಕಾರಿಗಳು ನೆಪ ಮಾತ್ರಕ್ಕೆ ಕೆಲವೆಡೆ ಭೇಟಿ ನೀಡಿದ್ದಾರೆ. ಆದರೆ ರೈತರಿಗೆ ಯಾವುದೇ ಪರಿಹಾರ ಸೂತ್ರ ತಿಳಿಸಿಲ್ಲ ಮತ್ತು ಈರುಳ್ಳಿ ಬೆಳೆ ಹಾನಿಯ ಪರಿಹಾರದ ಬಗ್ಗೆ ಭರವಸೆಯೂ ನೀಡಿಲ್ಲ ಎಂದು ರೈತ ಲಕ್ಷ್ಮೀಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ ಅವರನ್ನು ಕೇಳಿದರೆ ಈ ವರ್ಷ ಜಿಲ್ಲೆಯಲ್ಲಿ 30ಸಾವಿರ ಹೆಕ್ಟೇರ್ ಈರುಳ್ಳಿ ಬಿತ್ತನೆ ಗುರಿ ಹೊಂದಲಾಗಿದೆ. ಈವರೆಗೆ ಸುಮಾರು 8ಸಾವಿರ ಹೆಕ್ಟೇರ್ ಈರುಳ್ಳಿ ಬಿತ್ತನೆ ಆಗಿದೆ. ಆದರೆ, ಮಳೆ ಹೆಚ್ಚಿದ ಕಾರಣ ಹಲವೆಡೆ ಈರುಳ್ಳಿಗೆ ನೇರಳೆ ಮಚ್ಚೆ ರೋಗ, ಕೊಳೆ ರೋಗ ಕಾಣಿಸಿಕೊಂಡಿದೆ. ಈಗಾಗಲೇ ಈ ಬಗ್ಗೆ ವಿಜ್ಞಾನಿಗಳು ಹಾಗೂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕೊಳೆ ರೋಗ ನಿವಾರಣೆಗೆ ಸಲಹೆ ನೀಡಲಾಗಿದೆ. ಇನ್ನೂ ಮಳೆಯಿಂದ ಶೀತ ಪ್ರಮಾಣ ಹೆಚ್ಚಾಗಿ ರೋಗ ಉಲ್ಬಣಗೊಂಡು ಬೆಳೆ ಹಾನಿಯಾದರೆ, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಕರೆಗೆ 40- 50ಸಾವಿರ ರೂಪಾಯಿ ಖರ್ಚು ಮಾಡಿ ಆಸೆಗಣ್ಣಿನಿಂದ ನೋಡುತ್ತಿದ್ದ ರೈತರಿಗೆ ಆರಂಭದಲ್ಲೇ ನಿರಾಸೆ ಆಗಿದೆ. ಹೀಗಾಗಿ, ಅಧಿಕಾರಿಗಳು ಮತ್ತು ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ರೈತರ ಆಗ್ರಹವಾಗಿದೆ.
ಇದನ್ನೂ ಓದಿ: ವಿಜಯಪುರದ ನಿಂಬೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ; ಲಾಕ್ಡೌನ್ ಮುಗಿದರೂ ರೈತರ ಸಂಕಷ್ಟಕ್ಕೆ ಕೊನೆ ಇಲ್ಲ
ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ: ನೆಲ ಕಚ್ಚಿದ ಬೆಳೆ ನೋಡಿ ಕಣ್ಣೀರಿಟ್ಟ ಅನ್ನದಾತರು