ಮಂಗಳೂರು: ತೋಟಕ್ಕೆ ಹೋದವರ ಮೇಲೆ ಚಿರತೆ ದಾಳಿ ನಡೆದ ಘಟನೆ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ನಡೆದಿದೆ. ಗಾಯಾಳುಗಳು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕಡಬ ತಾಲೂಕಿನ ಕೈಕಂಬ ಗ್ರಾಮದ ಮನೆಯೊಂದರಲ್ಲಿ ನಾಯಿಯೊಂದಿಗೆ ಶೌಚಾಲಯ ಪ್ರವೇಶಿಸಿದ್ದ ಚಿರತೆಯನ್ನು ಮನೆ ಮಾಲೀಕರು ಅಲ್ಲಿಯೇ ಚಿಲಕ ಹಾಕಿ ಕೂಡಿಟ್ಟಿದ್ದರು. ಅರಣ್ಯ ಇಲಾಖೆಯ ಬಲೆಗೆ ಸಿಗದ ಚಿರತೆ ತಪ್ಪಿಸಿಕೊಂಡು ಕಾಡು ಸೇರಿತ್ತು.
ಇದೇ ಚಿರತೆ ತೋಟದಲ್ಲಿ ಇದೀಗ ಇಬ್ಬರ ಮೇಲೆ ದಾಳಿ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಸದ್ಯ ಅರಣ್ಯ ಇಲಾಖೆಯು ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ಚಿರತೆ ಮನೆಗೆ ನುಗ್ಗಿತ್ತು. ಆದರೆ ಅದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿಫಲರಾಗಿದ್ದರು. ಇದೀಗ ಮತ್ತೆ ಅದೇ ಚಿರತೆಯಿಂದ ನಸುಕಿನ ಜಾವ ಅಡಿಕೆ ತೋಟಕ್ಕೆ ನೀರು ಬಿಡಲು ಹೋಗಿದ್ದ ಇಬ್ಬರ ಮೇಲೆ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಶೇಖರ್ ಕಾಮತ್ ಮತ್ತು ಸೌಮ್ಯಾ ಕಾಮತ್ ಚಿರತೆ ದಾಳಿಗೊಳದವರು ಎಂದು ತಿಳಿದುಬಂದಿದೆ. ಚಿರತೆ ದಾಳಿಯಿಂದ ಇಬ್ಬರಿಗೂ ತರಚಿದ ಗಾಯಗಳಾಗಿದ್ದು, ಸದ್ಯ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಗದೆ ಪರಾರಿಯಾಯ್ತು ನಾಯಿ ಜೊತೆ ಬಂಧಿಯಾಗಿದ್ದ ಚಿರತೆ