ಸರ್ಕಾರ ಅಭಿವೃದ್ಧಿ ಕೆಲಸ, ಅನಗತ್ಯ ಖರ್ಚು ನಿಲ್ಲಿಸಲಿ; ವಿಪಕ್ಷ ನಾಯಕ ಸಿದ್ದರಾಮಯ್ಯ
ವಲಸೆ ಕಾರ್ಮಿಕರು ಊರಿಗೆ ತೆರಳುತ್ತಿದ್ದಾರೆ. ಬಡವರಿಗೆ, ಕೂಲಿ ಕಾರ್ಮಿಕರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಲಾಕ್ಡೌನ್ ಮಾಡಲು ನಾನು ವಿರೋಧ ಮಾಡಲ್ಲ. ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೇಳಿದಂತೆ ಮಾಡಿ ಎಂದು ಹೇಳಿದ್ದೆ ಎಂದು ಅವರು ವಿವರಿಸಿದರು.
ಬೆಂಗಳೂರು: ಸರ್ಕಾರ ಕೊವಿಡ್ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅಭಿವೃದ್ಧಿ ಕೆಲಸ ನಿಲ್ಲಿಸಲಿ. ಅನಗತ್ಯ ಖರ್ಚಿಗೆ ಬ್ರೇಕ್ ಹಾಕಲಿ. ನಾನು 5 ವರ್ಷ ಸಿಎಂ ಆಗಿದ್ದಾಗ ಒರ್ವ ರಾಜಕೀಯ ಕಾರ್ಯದರ್ಶಿಯೂ ಇರಲಿಲ್ಲ. ಆದರೆ ಈಗ ಅನಗತ್ಯ ಹುದ್ದೆ ಸೃಷ್ಟಿ ಮಾಡಿಕೊಂಡಿದ್ದಾರೆ. ಅವುಗಳನ್ನು ರದ್ದುಪಡಿಸಬೇಕು. ತಿಂಗಳಿಗೆ ಒಬ್ಬರಿಗೆ 10 ಕೆಜಿ ಅಕ್ಕಿ ಕೊಡಬೇಕು. ಇಂತಹ ಸಮಯದಲ್ಲಿ ತೆರಿಗೆ ಹಣ ಜನರಿಗಾಗಿ ಬಳಸಬೇಕು. ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಹಣ ನೀಡಬೇಕು. ಜೇಬಿನಲ್ಲಿ ಹಣ ಇದ್ದರೆ ಅಗತ್ಯ ವಸ್ತುಗಳ ಖರೀದಿ ಮಾಡಬಹುದು. ಇಲ್ಲದಿದ್ದರೆ ಜನರು ಹೇಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಾರೆ? ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ದೇಶದಲ್ಲಿ ಕೊರೊನಾ ಲಸಿಕೆ ಕೊರತೆ ಇದೆ. ಎಲ್ಲ ವಯಸ್ಸಿನವರಿಗೂ ಕೊವಿಡ್ ಲಸಿಕೆ ಹಾಕಬೇಕು. ಲಸಿಕೆ ಹಾಕಿಸಿಕೊಂಡರೆ ರೋಗ ಹರಡುವುದು ಕಡಿಮೆಯಾಗಲಿದೆ. ಲಸಿಕೆ ನೀಡಿಕೆಯ ಬಗ್ಗೆ ಸರ್ಕಾರ ಗಮನಹರಿಸಬೇಕು. ಎಲ್ಲರಿಗೂ ಉಚಿತವಾಗಿ ಕೊವಿಡ್ ಲಸಿಕೆ ನೀಡಬೇಕು. ನಿವೃತ್ತರಾಗಿರುವ ವೈದ್ಯರನ್ನು ಕೊವಿಡ್ ಕೆಲಸಕ್ಕೆ ಬಳಸಿಕೊಳ್ಳಬೇಕು. ವಿಪಕ್ಷಗಳ ಸಲಹೆಯನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಎಲ್ಲಾ ಸಾರ್ವಜನಿಕರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.
ವಲಸೆ ಕಾರ್ಮಿಕರು ಊರಿಗೆ ತೆರಳುತ್ತಿದ್ದಾರೆ. ಬಡವರಿಗೆ, ಕೂಲಿ ಕಾರ್ಮಿಕರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಲಾಕ್ಡೌನ್ ಮಾಡಲು ನಾನು ವಿರೋಧ ಮಾಡಲ್ಲ. ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೇಳಿದಂತೆ ಮಾಡಿ ಎಂದು ಹೇಳಿದ್ದೆ ಎಂದು ಅವರು ವಿವರಿಸಿದರು.
ಶಾಸಕರುಗಳ ದೂರವಾಣಿ ಕರೆಯನ್ನು ಆರೋಗ್ಯ ಸಚಿವ ಡಾ.ಸುಧಾಕರ್ ಎತ್ತುತ್ತಿಲ್ಲ. ಸಚಿವರು ಬೆಂಗಳೂರು ಬಿಟ್ಟು ಹೊರಗೆ ಹೋಗಬೇಕಿದೆ. ಬೆಂಗಳೂರಿನಲ್ಲಿ ಇರೋದಕ್ಕೆ ಇವರಿಗೆ ಜವಾಬ್ದಾರಿ ಕೊಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ಕೊಡಬೇಕು ಎಂದು ಅವರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಅಸ್ಸಾಂ, ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ತಮಿಳುನಾಡು, ಪಾಂಡಿಚೆರಿಯಲ್ಲಿ ಕಾಂಗ್ರೆಸ್ ಒಕ್ಕೂಟಕ್ಕೆ ಜಯ ದೊರಕಲಿದೆ. ರಾಜ್ಯದ 3 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: VaccineDrive: ಲಸಿಕಾ ಅಭಿಯಾನಕ್ಕೆ 104 ದಿನ; ಇಲ್ಲಿಯವರೆಗೆ 15ಕೋಟಿಗಿಂತಲೂ ಹೆಚ್ಚು ಕೊವಿಡ್ ಲಸಿಕೆ ವಿತರಣೆ
(Let the government stop development work and stop unnecessary spending says Opposition leader Siddaramaiah )