ಹುಬ್ಬಳ್ಳಿ, ಜೂನ್.26: ಇತ್ತೀಚೆಗೆ ಬಾಂಬ್ ಬೆದರಿಕೆಯ ಇ-ಮೇಲ್ (EMail) ಸಂದೇಶಗಳು ಹೆಚ್ಚಾಗಿವೆ. ಎರಡು ದಿನದ ಹಿಂದೆಯಷ್ಟೇ ಕಲಬುರಗಿ ವಿಮಾನ ನಿಲ್ದಾಣಕ್ಕೆ (Kalaburagi Airport) ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣ (Hubli Airport) ನಿರ್ದೇಶಕರಿಗೆ ಜೀವ ಬೆದರಿಕೆಯ ಇ-ಮೇಲ್ ಬಂದಿದೆ. ವಿಮಾನ ನಿಲ್ದಾಣ ನಿರ್ದೇಶಕ ರೂಪೇಶ್ ಕುಮಾರ್ಗೆ ವ್ಯಕ್ತಿಯೊಬ್ಬನಿಂದ ಇ-ಮೇಲ್ ಮೂಲಕ ಜೀವಬೆದರಿಕೆ ಸಂದೇಶ ಬಂದಿದೆ.
ಲಾಂಗ್ ಲೀವ್ ಪ್ಯಾಲೆಸ್ತೇನ್ ಎಂಬ ಹೆಸರಿನ ಮೇಲ್ ಐಡಿಯಿಂದ ನಿರ್ದೇಶಕರ ಕಚೇರಿಯ ಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿದೆ. ನಾವು ನಿಮ್ಮನ್ನು ನಾಶ ಮಾಡುತ್ತೇವೆ. ನೀವು ಮಾಡಿದ ಎಲ್ಲ ಕೆಟ್ಟ ಕೆಲಸಗಳಿಗೆ ಉತ್ತರವಿಲ್ಲ ಎಂದು ಭಾವಿಸಿದ್ದೀರ. ಬೆಂಕಿಯಲ್ಲಿ ಎಸೆಯುತ್ತೇವೆ, ಉಸಿರುಗಟ್ಟಿ ಸಾಯುತ್ತೀರ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಇ-ಮೇಲ್ ಸಂದೇಶ ಬಂದ ತಕ್ಷಣವೇ ರೂಪೇಶ್ ಅವರು ಈ ವಿಚಾರವನ್ನು ಟರ್ಮಿನಲ್ ಉಸ್ತುವಾರಿ ಪ್ರತಾಪ್ ಅವರ ಗಮನಕ್ಕೆ ತಂದಿದ್ದಾರೆ. ನಂತರ ಸಿಎಎಸ್‌ಒ, ಐಬಿ, ಬಿಡಿಡಿಎಸ್ ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ರವಾನಿಸಿದ್ದು ವಾಯುಯಾನ ಭದ್ರತಾ ನಿಯಮದ ಪ್ರಕಾರ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರೈಲಿನಲ್ಲಿ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆ, 8 ವರ್ಷದ ಬಳಿಕ ರೈಲ್ವೆ ಇಲಾಖೆಯಿಂದ ಪರಿಹಾರ
ಎರಡು ದಿನಗಳ ಹಿಂದೆ ಕಲಬುರಗಿ ವಿಮಾನ ನಿಲ್ದಾಣದ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ್ ಅವರಿಗೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ತಕ್ಷಣವೇ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ, ಶ್ವಾನದಳ ತಪಾಸಣೆ ನಡೆಸಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ತಿಳಿಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:37 am, Wed, 26 June 24