ಬೆಂಗಳೂರು: ಲಿಂಗಾಯತ ಪಂಚಮಸಾಲಿಗೆ (lingayat panchamasali reservation) 2ಸಿ, 2ಡಿ ಮೀಸಲಾತಿ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನೀಡಿದ್ದ ಮಧ್ಯಂತರ ಆದೇಶವನ್ನು ಕರ್ನಾಟಕ ಹೈಕೋರ್ಟ್(karnataka High Court) ಇಂದು(ಮಾರ್ಚ್ 23) ತೆರವುಗೊಳಿಸಿದೆ. ಹೈಕೋರ್ಟ್ ಯಥಾಸ್ಥಿತಿ ಆದೇಶ ತೆರವುಗೊಳಿಸಿದ್ದರಿಂದ ಚುನಾವಣೆ ಹೊಸ್ತಿಲಿನಲ್ಲಿ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. 2ಎ ಮೀಸಲಾತಿಯಲ್ಲಿ ಯಾವುದೇ ಪರಿವರ್ತನೆ ಮಾಡುವುದಿಲ್ಲ ಎಂದು ಹೈಕೋರ್ಟ್ಗೆ ಕೇಂದ್ರ ಸರ್ಕಾರದ ಸಾಲಿಸಿಟರ್ ಭರವಸೆ ನೀಡಿದರು. ಕೇಂದ್ರ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿ ಈಗ ಹೊಸ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರಕ್ಕೆ ಲಿಖಿತ ಹೇಳಿಕೆ ಸಲ್ಲಿಸಲು ಸೂಚನೆ ನೀಡಿದೆ. ಅಲ್ಲದೇ ಯಾವುದೇ ಕ್ರಮ ಹೈಕೋರ್ಟ್ ಅಂತಿಮ ತೀರ್ಪಿಗೆ ಬದ್ಧವಾಗಿರಬೇಕೆಂದು ಸೂಚನೆ ನೀಡಿ ಮಧ್ಯಂತರ ಆದೇಶ ತೆರವುಗೊಳಿಸಿದೆ. ಇದರೊಂದಿಗೆ ಪಂಚಮಸಾಲಿಗೆ 2ಸಿ, 2ಡಿ ಮೀಸಲಾತಿ ನೀಡಲು ಯಾವುದೇ ಅಡ್ಡಿ ಇಲ್ಲ.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಬಾರದು ಮತ್ತು ಮೀಸಲು ಪ್ರವರ್ಗ ಮಾರ್ಪಾಡು ಮಾಡುವಂತೆ ಕೋರಿ ಯಾವುದೇ ಉಪಜಾತಿ, ಸಮುದಾಯ ಬುಡಕಟ್ಟುಗಳು ಸಲ್ಲಿಸುವ ವೈಯಕ್ತಿಕ ಬೇಡಿಕೆಗಳನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸದಂತೆ ತಡೆ ನೀಡಬೇಕೆಂದು ಡಿ.ಜಿ.ರಾಘವೇಂದ್ರ ಎಂಬುವರು ಪಿಐಎಲ್ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಹಮಚಿಕೆ ಸಂಬಂಧಿಸಿದಂತೆ ಪ್ರವರ್ಗ 2ಎ ಸೇರ್ಪಡೆ ಮಾಡುವ ಅಥವಾ 2ಸಿ, 2ಡಿ ಪ್ರವರ್ಗ ಸೃಷ್ಟಿಸಲು ಸರ್ಕಾರ ಕೈಗೊಂಡಿದ್ದ ನಿರ್ಣಯದ ಮುಂದಿನ ಪ್ರಕ್ರಿಯೆಗಳಿಗೆ ತಾತ್ಕಾಲಿಕ ತಡೆ ಬಿದ್ದಿತ್ತು.
ಆದ್ರೆ, ಇದೀಗ 2ಎ ಮೀಸಲಾತಿಯಲ್ಲಿ ಯಾವುದೇ ಪರಿವರ್ತನೆ ಮಾಡುವುದಿಲ್ಲ ಎಂದು ಹೈಕೋರ್ಟ್ಗೆ ಕೇಂದ್ರ ಸರ್ಕಾರದ ಸಾಲಿಸಿಟರ್ ಭರವಸೆ ನೀಡಿದ್ದರಿಂದ ಮಧ್ಯಂತರ ಆದೇಶವನ್ನು ರದ್ದುಗೊಳಿಸಿದೆ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ 2ಸಿ, 2ಡಿ ಮೀಸಲಾತಿ ನೀಡಲು ಯಾವುದೇ ಅಡ್ಡಿ ಇಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಚಿವ ಸಂಪುಟದ ಕೊನೆಯದು ಎನ್ನಲಾಗಿರುವ ಮಹತ್ವದ ಸಭೆ ಶುಕ್ರವಾರ ನಡೆಯಲಿದ್ದು, ಸಾಕಷ್ಟು ಚರ್ಚೆಗೆ ಈಡು ಮಾಡಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ ಮುಂಬರುವ ಚುನಾವಣೆ ಗುರಿಯಾಗಿಸಿಕೊಂಡು ವಿವಿಧ ಸಮುದಾಯಗಳನ್ನು ಓಲೈಸುವ ನಿಟ್ಟಿನಲ್ಲಿ ಹಲವು ಪ್ರಮುಖ ಕೊಡುಗೆಗಳ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಮುಂದಿನ ವಾರಾಂತ್ಯದ ವೇಳೆ ಕೇಂದ್ರ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಘೋಷಣೆ ಮಾಡುವ ಸಂಭವವಿದೆ. ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಜಾರಿಗೆ ಬರಲಿರುವುದರಿಂದ ಬಹುಶಃ ಶುಕ್ರವಾರದ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವುದಕ್ಕೆ ಸೀಮಿತವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ
Published On - 11:55 am, Thu, 23 March 23