ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ: ಕಾರಣ ಏನು ಗೊತ್ತೇ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮದ್ಯದ ಬೆಲೆ ಪದೇಪದೆ ಹೆಚ್ಚಿಸಿದ್ದರಿಂದ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಕಳೆದ ಆರು ತಿಂಗಳಿಂದ ಐಎಂಎಲ್ ಮತ್ತು ಬಿಯರ್ ಮಾರಾಟ ಇಳಿಕೆಯಾಗಿದೆ. ಆದರೂ, ಅಬಕಾರಿ ಸುಂಕ ಏರಿಕೆಯಿಂದ ರಾಜ್ಯ ಸರ್ಕಾರಕ್ಕೆ ಆದಾಯ ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ: ಕಾರಣ ಏನು ಗೊತ್ತೇ?
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Oct 13, 2025 | 9:07 AM

ಬೆಂಗಳೂರು, ಅಕ್ಟೋಬರ್ 13: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂರ್ನಾಲ್ಕು ಬಾರಿ ಮದ್ಯದ ಬೆಲೆ (Liquor Price) ಹೆಚ್ಚಳವಾಗಿದೆ. ಇದರ ಪರಿಣಾಮ, ಕಳೆದ ಆರು ತಿಂಗಳಿನಿಂದ ಮಾರಾಟದ (Liquor Sale) ಮೇಲೆ ಹೊಡೆತ ಬಿದ್ದಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ವರ್ಷ ವ್ಯಾಪಾರ ಕುಸಿದಿದೆ. ಅಬಕಾರಿ ಇಲಾಖೆಯ ಅರ್ಧ ವಾರ್ಷಿಕ ವಹಿವಾಟಿನ ಡೇಟಾ ಪ್ರಕಾರ, ರಾಜ್ಯದಲ್ಲಿ ಮದ್ಯ ಮಾರಾಟ ಚೇತರಿಕೆ ಕಂಡಿಲ್ಲ. 2023, 2024ಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣ ಎಂದು ಮದ್ಯ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

2023ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 352.83 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದರೆ, 2024ರ ಅದೇ ಅವಧಿಯಲ್ಲಿ 345.76 ಲಕ್ಷ ಬಾಕ್ಸ್​ಗೆ ಇಳಿಕೆಯಾಗಿತ್ತು. 2025 ರಲ್ಲಿ 342.93 ಲಕ್ಷ ಬಾಕ್ಸ್ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ 2.83 ಲಕ್ಷ ಬಾಕ್ಸ್ ವ್ಯಾಪಾರ ಇಳಿಕೆಯಾಗಿದೆ. ಈ ಬಗ್ಗೆ ಮದ್ಯ ಮಾರಾಟಗಾರರು ಪ್ರತಿಕ್ರಿಯಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ 15 ರಿಂದ 20 ರಷ್ಟು ಮದ್ಯ ಮಾರಾಟ ಕಡಿಮೆ ಆಗಿದೆ ಎಂದಿದ್ದಾರೆ.

2024ರ ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ 242.73 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು.ಆದರೆ 2025ರ ಇದೇ ಅವಧಿಯಲ್ಲಿ 195.27 ಲಕ್ಷ ಬಾಕ್ಸ್ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 47.46 ಲಕ್ಷ ಬಾಕ್ಸ್ ವ್ಯಾಪಾರ ಇಳಿಕೆ ಆಗಿದ್ದು, ಶೇ 19.55ರಷ್ಟು ಕಡಿಮೆ ಆಗಿದೆ.

ಬಿಯರ್ ಮಾರಟ ಪ್ರತಿ ತಿಂಗಳು ಕುಸಿತ

ಪ್ರತಿ ತಿಂಗಳಿನಲ್ಲೂ ಬಿಯರ್ ಮಾರಾಟದಲ್ಲಿ ಕಡಿಮೆ ಆಗುತ್ತಲೇ ಇದೆ ಎಂದು ಮದ್ಯ ಮಾರಾಟಗಾರರು ತಿಳಿಸಿದ್ದಾರೆ. ಈ ಬಗ್ಗೆ ಮಾತಾನಾಡಿದ ಬಿಯರ್ ಪ್ರಿಯರು, ಬಿಯರ್ ಮೇಲೆ ದರ ಏರಿಕೆ ಮಾಡಿರುವುದರಿಂದ ಮೂರು ಬಿಯರ್ ಕುಡಿಯುತ್ತಿದ ನಾವು, ನಮ್ಮ ಸ್ನೇಹಿತರು ಇದೀಗ ಒಂದು ಬಿಯರ್ ಕುಡಿಯುವಂತೆ ಆಗಿದೆ ಎಂದಿದ್ದಾರೆ. ಅಲ್ಲದೆ, ಈಗ 100 ರುಪಾಯಿಗೆ ಒಂದು ಬಿಯರ್ ನೀಡಬೇಕು ಎಂದು ಮದ್ಯಪ್ರಿಯ ಉಪೇಂದ್ರ ಎಂಬವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮ್ಯಾಪಲ್ಸ್ ಆ್ಯಪ್​ನಲ್ಲಿ ಸಿಗುತ್ತೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ ಮೊದಲು

ಒಟ್ಟಿನಲ್ಲಿ, ರಾಜ್ಯ ಸರ್ಕಾರ ಬಿಯರ್ ಮತ್ತು ಐಎಂಎಲ್ ಮೇಲೆ ಪದೇಪದೇ ದರ ಏರಿಕೆ ಮಾಡಿರುವುದರಿಂದ, ವ್ಯಾಪಾರ ಕಡಿಮೆ ಆಗಿದೆ. ಆದಾಗ್ಯೂ ಸುಂಕ, ದರ ಏರಿಕೆಯಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯ ಬರುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:07 am, Mon, 13 October 25