Liquor Bandh: ಕರ್ನಾಟಕದಲ್ಲಿ ಶನಿವಾರದಿಂದ ಮದ್ಯ ಮಾರಾಟ ಬಂದ್​​; ಸರ್ಕಾರಕ್ಕೆ ಬಾರ್ ಮಾಲೀಕರ ಎಚ್ಚರಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 07, 2022 | 12:17 PM

ಮದ್ಯ ಖರೀದಿಗೆ ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ಹತ್ತಾರು ಗೊಂದಲಗಳಿವೆ. ಸಕಾಲದಲ್ಲಿ ಮದ್ಯ ಪೂರೈಕೆಯಾಗದೆ ಬಾರ್ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮದ್ಯ ಮಾರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Liquor Bandh: ಕರ್ನಾಟಕದಲ್ಲಿ ಶನಿವಾರದಿಂದ ಮದ್ಯ ಮಾರಾಟ ಬಂದ್​​; ಸರ್ಕಾರಕ್ಕೆ ಬಾರ್ ಮಾಲೀಕರ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
Follow us on

ಚಿತ್ರದುರ್ಗ: ಕರ್ನಾಟಕ ಸರ್ಕಾರವು ಮದ್ಯ ಪೂರೈಕೆ ವ್ಯವಸ್ಥೆಯಲ್ಲಿ (Liquor Supply System) ಆಗಿರುವ ಲೋಪಗಳನ್ನು 24 ಗಂಟೆಗಳ ಒಳಗೆ ಸರಿಪಡಿಸದಿದ್ದರೆ ಮುಂದಿನ ಶನಿವಾರದಿಂದ (ಜುಲೈ 9) ಮದ್ಯಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಎಚ್ಚರಿಸಿದರು. ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಖರೀದಿಗೆ ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ಹತ್ತಾರು ಗೊಂದಲಗಳಿವೆ. ಸಕಾಲದಲ್ಲಿ ಮದ್ಯ ಪೂರೈಕೆಯಾಗದೆ ಬಾರ್ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ. ನಮ್ಮನ್ನು ಏಕೆ ಹೀಗೆ ಗೋಳು ತೆಗೆಯುತ್ತಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ಮೊದಲು ಕೆಎಸ್​ಬಿಸಿಎಲ್ (Karnataka State Beverages Corporation Limited – KSBCL) ಅಕೌಂಟ್​ಗೆ ಹಣ ಹಾಕಿದರೆ ನಮಗೆ ಬೇಕಾದ ಮದ್ಯ ಸುಲಭವಾಗಿ ಸಿಗುತ್ತಿತ್ತು. ಬಿಲಿಂಗ್ ವ್ಯವಸ್ಥೆ ಮ್ಯಾನ್ಯುವಲ್ ಆಗಿ ಇತ್ತು. ಆದರೆ ಏಪ್ರಿಲ್ 4ರಿಂದ ಹೊಸ ಪದ್ಧತಿ ಆರಂಭವಾಯಿತು ಎಂದು ಅವರು ವಿವರಿಸಿದರು. ವೆಬ್ ಇಂಡೆಂಟಿಂಗ್ ವ್ಯವಸ್ಥೆ ಜಾರಿಯಾದ ನಂತರ ಎಲ್ಲವನ್ನೂ ಹಿಂದಿನ ದಿನವೇ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದರು.

ಸಗಟು ಮದ್ಯ ಖರೀದಿದಾರರ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಅವರು, ಮೊದಲು ವೆಬ್​ಸೈಟ್​ಗೆ ಲಾಗಿನ್ ಆಗಿ ನಮ್ಮಲ್ಲಿ ಬೇಡಿಕೆಯಿರುವ ಬ್ರಾಂಡ್​ಗಳ ಮದ್ಯ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಲಾಗಿನ್ ಆಗುವ ಅವಧಿಯನ್ನು ಮೊದಲು ಬೆಳಿಗ್ಗೆ 9 ಗಂಟೆಗೆ ನಿಗದಿಪಡಿಸಿದ್ದರು. ನಂತರ ಸಂಜೆ 5ರಿಂದ 6 ಗಂಟೆಗೆ ಅವಕಾಶ ಮಾಡಿಕೊಟ್ಟರು ಎಂದು ಹೇಳಿದರು. ಈಗಂತೂ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಜುಲೈ 1ರಿಂದ ರಾಜ್ಯದಲ್ಲಿ ಎಲ್ಲಿಯೂ ಸಮರ್ಪಕ ರೀತಿಯಲ್ಲಿ ಮದ್ಯ ಖರೀದಿ ಸಾಧ್ಯವಾಗುತ್ತಿಲ್ಲ. ಒಂದೆಡೆ ಲೈಸೆನ್ಸ್​ಗಳು ನವೀಕರಣಗೊಂಡಿವೆ. ಇನ್ನೊಂದೆಡೆ ಸರ್ವ್ ವ್ಯವಸ್ಥೆ ಹಾಳಾಗಿದೆ. ಇಂದು (ಜುಲೈ 7) ಮುಂಜಾನೆಯಿಂದ ಇಡೀ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ವಿಷಾದಿಸಿದರು.

ಮದ್ಯ ಮಾರಾಟಗಾರರ ಪರಿಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದೇವೆ. ಆರ್ಥಿಕ ಇಲಾಖೆ, ಅಬಕಾರಿ ಇಲಾಖೆ, ಕೆಎಸ್​ಬಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಇ-ಆಡಳಿತದ ಅಧಿಕಾರಿಗಳು ಎಲ್ಲರಿಗೂ ಮನವಿ ಮಾಡಿದ್ದೇವೆ. ಆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ಪರಿಸ್ಥಿತಿ ಕಷ್ಟವಾಗುತ್ತದೆ. ಮುಂದಿನ 24 ಗಂಟೆಗಳ ಒಳಗೆ ಮದ್ಯ ಖರೀದಿ ಇಂಡೆಂಟಿಂಗ್ ವ್ಯವಸ್ಥೆಯನ್ನು ಗಂಟೆಯೊಳಗೆ ಸರಿಪಡಿಸಬೇಕು. ಇಲ್ಲದಿದ್ದರೆ ಮದ್ಯ ಮಾರಾಟವನ್ನು ನಿಲ್ಲಿಸಿ ಉಗ್ರ ಹೋರಾಟ ಮಾಡುತ್ತೇವೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಆಗ್ರಹಿಸಿದರು.

ಸರ್ಕಾರವು ಮದ್ಯ ಮಾರಾಟಗಾರರ ತಾಳ್ಮೆ ಪರಿಶೀಲಿಸುವುದು ಸರಿಯಲ್ಲ. ಪರಿಸ್ಥಿತಿ ಸುಧಾರಿಸದಿದ್ದರೆ ಮದ್ಯ ಮಾರಾಟದ ಬಂದ್ ಸೇರಿದಂತೆ ಹಲವು ರೀತಿಯ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಶನಿವಾರದಿಂದ (ಜುಲೈ 9) ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು. ಈಗಾಗಲೇ ರಾಜ್ಯದ ಕೆಲವೆಡೆ ಅನಿವಾರ್ಯವಾಗಿ ಕೆಲವು ಮದ್ಯದ ಅಂಗಡಿಗಳಿಗೆ ಮ್ಯಾನ್ಯುವಲ್ ಆಗಿಯೇ ಮದ್ಯ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಅವರು ಬೇಡಿಕೆ ಇಟ್ಟ ಮದ್ಯದ ಬ್ರಾಂಡ್​ಗಳು ಸಿಗುತ್ತಿಲ್ಲ. ಒಟ್ಟಾರೆ ಇಂಡೆಂಟಿಂಗ್ ವ್ಯವಸ್ಥೆಯೇ ಹಾಳಾಗಿದೆ. ಏನಾಗಿದೆ ಎಂಬುದನ್ನು ಪರಿಶೀಲಿಸಿ ಸರಿಪಡಿಸಬೇಕಿದೆ ಎಂದು ವಿನಂತಿಸಿದರು.