
ಬೆಂಗಳೂರು, ಮೇ 24: ನಿರಂತರ ದರ ಏರಿಕೆ (Liquor Price Hike) ಮತ್ತು ಪರವಾನಗಿ ದರ ಹೆಚ್ಚಳ ವಿರೋಧಿಸಿ ಈ ತಿಂಗಳು 29 ರಿಂದ ಕರ್ನಾಟಕದಾದ್ಯಂತ ಮದ್ಯದಂಗಂಡಿ ಬಂದ್ (Liquor Shops Bandh) ಮಾಡಲು ರಾಜ್ಯದ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಮೂರು ಬಾರಿ ಮದ್ಯದ ದರ ಏರಿಕೆ ಮಾಡಿದೆ. ಇದರಿಂದ ಹಿಂದಿನ ರೀತಿಯಲ್ಲಿ ಮದ್ಯ ಮಾರಾಟ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಮದ್ಯ ಮಾರಾಟಗಾರರ ಲೈಸೆನ್ಸ್ ಶುಲ್ಕ ದುಪ್ಪಟ್ಟು ಏರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಮದ್ಯ ಮಾರಾಟಗಾರರ ಸಂಘ ಸಭೆ ಕರೆದು ಸಮಾಲೋಚನೆ ನಡೆಸಿದೆ. ನಂತರ ಮದ್ಯ ಮಾರಾಟಗಾರರು ಈ ತಿಂಗಳು 29 ರಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಕ್ಲೋಸ್ ಮಾಡಲು ತೀರ್ಮಾನ ಮಾಡಿದ್ದಾರೆ. ಇದೇ 26 ರಂದು ಮುಖ್ಯಮಂತ್ರಿಗಳ ಜತೆ ಸಭೆ ನಡೆಯಲಿದ್ದು, ಅದು ಫಲಪ್ರದವಾಗದಿದ್ದಲ್ಲಿ ಮದ್ಯದಂಗಡಿಗಳ ಬಂದ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
CL9 ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಈ ಮೊದಲು ಲೈಸೆನ್ಸ್ ಶುಲ್ಕ 8,62,000 ರೂ. ಇತ್ತು. ಈಗ ಅದನ್ನು 15,00,000 ರೂ.ಗೆ ಹೆಚ್ಚಿಸಲಾಗಿದೆ. ಸೆಸ್ 2,25,000 ರೂ. ಸೇರಿ ಒಟ್ಟು ಒಟ್ಟು 17,25,000 ರೂ. ಆಗಲಿದೆ.
CL 6A ಸ್ಟಾರ್ ಹೋಟೆಲ್ ಲೈಸೆನ್ಸ್ ಶುಲ್ಕ 9,75,000 ರೂ. ಇದ್ದಿದ್ದು ಈಗ 20 ಲಕ್ಷ ರೂ. ಮಾಡಲಾಗಿದೆ. ಇದಕ್ಕೆ ಸೆಸ್ 3 ಲಕ್ಷ ರೂ. ಸೇರಿ ಒಟ್ಟು 23 ಲಕ್ಷ ರೂ. ಆಗಲಿದೆ.
CL 7 ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಲೈಸೆನ್ಸ್ ಶುಲ್ಕ 9,75,000 ರೂ. ಇದ್ದದ್ದು ಈಗ 17,00,000 ರೂ.ಗೆ ಏರಿಕೆಯಾಗಿದೆ. ಸೆಸ್ 2,55,000 ರೂ. ಸೇರಿ ಒಟ್ಟು 19,550,00 ರೂ. ಆಗಲಿದೆ.
26 ರಂದು ಮುಖ್ಯಮಂತ್ರಿ ಜತೆ ಸಭೆ: ಬೇಡಿಕೆ ಈಡೇರದಿದ್ದರೆ ಮದ್ಯದಂಗಡಿಗಳು ಬಂದ್
26 ರಂದು ಮದ್ಯ ಮಾರಾಟಗಾರರ ಸಂಘದ ಜೊತೆಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವೇಳೆ ಮದ್ಯ ಮಾರಾಟಗಾರರ ಬೇಡಿಕೆಗಳನ್ನು ಈಡೇರಿಸಲಿಲ್ಲ ಅಂದರೆ 29 ರಿಂದ ನಿರಂತರವಾಗಿ ಮದ್ಯದ ಅಂಗಡಿಗಳನ್ನು ಕ್ಲೋಸ್ ಮಾಡಲು ರಾಜ್ಯ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ.
ಇದನ್ನೂ ಓದಿ: ಮದ್ಯ ಬೆಲೆ ಏರಿಕೆ ಬೆನ್ನಲ್ಲೇ ಎಣ್ಣೆ ಮಾರಾಟಗಾರರಿಗೂ ಶಾಕ್ ನೀಡಿದ ಸರ್ಕಾರ: ಲೈಸೆನ್ಸ್ ಶುಲ್ಕ ಹೆಚ್ಚಳ
ಈ ಬಗ್ಗೆ ಮದ್ಯಪ್ರಿಯರು ಪ್ರತಿಕ್ರಿಯಿಸಿದ್ದು, ಮೊದಲು ಮದ್ಯ ಮತ್ತು ಲೈಸೆನ್ಸ್ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ನಿರಂತರವಾಗಿ ಮದ್ಯದ ದರ ಏರಿಕೆ ಮಾಡುವುದು ಮತ್ತು ಮದ್ಯ ಮಾರಾಟದ ಲೈಸೆನ್ಸ್ ದರ ಏರಿಕೆ ಖಂಡಿಸಿ ರಾಜ್ಯ ಮದ್ಯ ಮಾರಾಟಗಾರರು ಬಂದ್ಗೆ ಪ್ಲಾನ್ ಮಾಡುತ್ತಿದ್ದು, ಇದಕ್ಕೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 am, Sat, 24 May 25