ಬೆಂಗಳೂರು, (ಏಪ್ರಿಲ್ 26): ದೇಶದಲ್ಲಿ ಎರಡನೇ ಹಂತದ ಹಾಗೂ ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ((Karnataka Lok Sabha Election 2024)) ಮತದಾನ ಮುಕ್ತಾಯಗೊಂಡಿದೆ. ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡ ಮತದಾನ ಪಕ್ರಿಯೆ ಸಂಜೆ 6 ಗಂಟೆಗೆ ಸರಿಯಾಗಿ ಅಂತ್ಯಗೊಂಡಿದೆ. ನಿಗದಿತ ಸಮಯವಾಗುತ್ತಿದ್ದಂತೆ ಅಧಿಕಾರಿಗಳು ಮತಗಟ್ಟೆಯ ಪ್ರಮುಖ ದ್ವಾರಗಳನ್ನು ಮುಚ್ಚಿದರು. ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಧ್ವಂಸ ಮಾಡಿರುವುದು ಬಿಟ್ಟರೆ ಇನ್ನುಳಿದಂತೆ ಸಣ್ಣ-ಪುಟ್ಟ ಗಲಾಟೆಯೊಂದಿಗೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಒಟ್ಟು 69.23ರಷ್ಟು ಮತದಾನವಾಗಿದೆ. ಇನ್ನು 14 ಕ್ಷೇತ್ರಗಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡಿದರೆ ಮಂಡ್ಯದಲ್ಲಿ (Mandya) ಗರಿಷ್ಠ ಮತದಾನವಾಗಿದೆ.
ಸಿಲಿಕಾನ್ ಸಿಟಿ, ಸರ್ಕಾರದ ಖಜಾನೆ ತುಂಬಿಸೋ ನಗರಿ. ಐಟಿ ಬಿಟಿ ಕಂಪನಿಗಳ ನೆಲೆ.. ವಿದ್ಯಾವಂತರೇ ತುಂಬಿರೋ ಮಯಾನಗರಿ ಬೆಂಗಳೂರು.. ಆದ್ರೆ, ಬೆಂಗಳೂರಿನಲ್ಲಿ ಈ ಬಾರಿಯೂ ಮತದಾನ ಕಡಿಮೆಯಾಗಿದೆ. ಮನೆ ಬಿಟ್ಟು ಬಾರದವರು, ವೀಕೆಂಡ್ ಎಂದು ಊರು ಖಾಲಿ ಮಾಡಿದವರು ಮತಗಟ್ಟೆಯಿಂದ ದೂರ ಉಳಿದಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನ ಅಂದ್ರೆ, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮತಗಟ್ಟೆಗಳಲ್ಲಿ ಪ್ರತಿ ಗಂಟೆಗೆ ಐದು ಜನ ಮಾತ್ರ ಮತದಾನ ಮಾಡಿದ್ದು ಕಂಡು ಬಂತು.
ಇದನ್ನೂ ಓದಿ: ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಹೇಗಾಯ್ತು? ಕಾನೂನು ಸುವ್ಯವಸ್ಥೆ ಎಡಿಜಿಪಿ ಹೇಳಿದ್ದಿಷ್ಟು
ಸಂಜೆ 7.30ರವರೆಗಿನ ಮತ ಲೆಕ್ಕಾಚಾರದಲ್ಲಿ ರಾಜ್ಯದ 14 ಕ್ಷೇತ್ರದಲ್ಲಿ ಶೇಕಡಾ 65ರಷ್ಟು ಮತದಾನವಾಗಿದೆ. ಇದರಲ್ಲಿ ಅತಿ ಕಡಿಮೆ ಬೆಂಗಳೂರು ಸೆಂಟ್ರಲ್‌ನಲ್ಲಿ 52.81 ಪರ್ಸೆಂಟ್ ವೋಟಿಂಗ್ ಆಗಿದೆ. ಬೆಂಗಳೂರು ಉತ್ತರದಲ್ಲಿ 54.42 ಪರ್ಸೆಂಟ್, ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 67.29ರಷ್ಟು ಮತದಾನವಾಗಿದೆ. ಇನ್ನೂ ಬೆಂಗಳೂರು ದಕ್ಷಿಣದಲ್ಲಿ 77.43ರಷ್ಟು ವೋಟಿಂಗ್ ಆಗಿದೆ. ಚಾಮರಾಜನಗರದಲ್ಲಿ 76.59, ಚಿಕ್ಕಬಳ್ಳಾಪುರದಲ್ಲಿ 76.82, ಚಿತ್ರದುರ್ಗದಲ್ಲಿ 73.11, ದಕ್ಷಿಣ ಕನ್ನಡದಲ್ಲಿ 77.43ರಷ್ಟು, ಹಾಸನದಲ್ಲಿ77.51, ಕೋಲಾರದಲ್ಲಿ 78.07ರಷ್ಟು ಮತದಾನವಾಗಿದೆ. ಇನ್ನೂ ಮಂಡ್ಯದಲ್ಲಿ ಅತಿ ಹೆಚ್ಚು ಅಂದ್ರೆ, 81.48ರಷ್ಟು ವೋಟಿಂಗ್ ಆಗಿದೆ. ಮೈಸೂರಲ್ಲಿ 70.45, ತುಮಕೂರು 77.70, ಮತ್ತು ಚಿಕ್ಕಮಗಳೂರಲ್ಲಿ 76.06ಷ್ಟು ಮತದಾನವಾಗಿದೆ.
ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಗೇಟ್ ಮುಚ್ಚಿದ್ದರು. ಈ ವೇಳೆ ಮೊದಲೇ ಬಂದು ಸರತಿಯಲ್ಲಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಲಾಯಿತು. ಕೆಲವರು ಅ ಬಳಿಕ ಬಂದರೂ ಅವರಿಗೆ ಅವಕಾಶ ನೀಡಲು ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಎಲ್ಲರೂ ಮತ ಚಲಾವಣೆ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದರು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮತ ಯಂತ್ರಗಳನ್ನು ಪ್ಯಾಕ್ ಮಾಡಿದರು. ಈ ಮತಪೆಟ್ಟಿಗಳು ಇನ್ನು ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್ಗೆ ರವಾನೆಯಾಗಿದ್ದು,ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ.
ಮೂಲ ಸೌಕರ್ಯ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಹಲವೆಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆಯಿತು.ಸಮಾಧಾನ ಮಾಡಲು ಬಂದ ಅಧಿಕಾರಿಗಳ ಮೇಲೆಯೆ ಗ್ರಾಮಸ್ಥರು ಮುಗಿಬಿದ್ದ ಕಾರಣ ಪೊಲೀಸರ ಲಾಠಿ ಏಟು ತಿನ್ನಬೇಕಾದ ಪ್ರಸಂಗವೂ ಅವರಿಗೆ ಎದುರಾಯಿತು.
ಇನ್ನೂ ದೇಶಾದ್ಯಂತ ನಡೆದ ಎರಡನೇ ಹಂತದ ಮತದಾನದಲ್ಲಿ ತ್ರಿಪುರಾದಲ್ಲಿ 77ರಷ್ಟು ಮತದಾನವಾಗಿದೆ. ಮಣಿಪುರದಲ್ಲಿ 76, ಮಹಾರಾಷ್ಟ್ರದಲ್ಲಿ 53ರಷ್ಟು ವೋಟಿಂಗ್ ಆಗಿದೆ. ಇನ್ನೂ ಮಧ್ಯಪ್ರದೇಶದಲ್ಲಿ 55, ಉತ್ತರ ಪ್ರದೇಶದಲ್ಲಿ 52, ಪಶ್ಚಿಮ ಬಂಗಾಳದಲ್ಲಿ 71ರಷ್ಟು ಮತದಾನವಾಗಿದೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:09 pm, Fri, 26 April 24