ಬೆಂಗಳೂರು, ಮಾರ್ಚ್ 21: ಲೋಕಸಭೆ ಚುನಾವಣೆ (Lok Sabha Elections) ನೀತಿ ಸಂಹಿತೆ (Model Code of Conduct) ಜಾರಿಯಾದ ಬೆನ್ನಲ್ಲೇ ರಾಜ್ಯದಾದ್ಯಂತ ಅಲ್ಲಲ್ಲಿ ಅಕ್ರಮ ನಗದು ಸಾಗಾಟ, ಮತದಾರರಿಗೆ ಆಮಿಷವೊಡ್ಡಲು ಕುಕ್ಕರ್, ಸೀರೆ ಇತ್ಯಾದಿ ವಸ್ತುಗಳನ್ನು ಸಾಗಿಸುತ್ತಿರುವುದು ಕಂಡುಬರುತ್ತಿದೆ. ಕಾರಿನ ಡಿಕ್ಕಿ ತುಂಬ ನೂರಾರು ಸೀರೆಗಳ ಬ್ಯಾಗ್ಗಳು, ಬೆಳ್ಳಿಯ ಗಟ್ಟಿಗಳು, ಬೈಕ್-ಕಾರುಗಳಲ್ಲಿ ಲಕ್ಷಾಂತರ, ಕೋಟ್ಯಂತರ ರೂಪಾಯಿ ಹಣ ಸಾಗಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದ ಹಲವು ಕಡೆ ಪೊಲೀಸರು, ಚುನಾವಣಾ ಅಧಿಕಾರಿಗಳು ಈಗಾಗಲೇ ಕೋಟ್ಯಂತರ ರೂಪಾಯಿ ನಗದು, ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ದಿನ 23,62,750 ರೂಪಾಯಿ ಅಕ್ರಮ ಹಣವನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಕಡೂರು ತಾಲೂಕಿನಿಂದ ಹಾಸನದ ಅರಸೀಕೆರೆಗೆ ಸಾಗಿಸುತ್ತಿದ್ದ ಬರೋಬ್ಬರಿ 20 ಲಕ್ಷ ಹಣವನ್ನು ಸೀಜ್ ಮಾಡಲಾಗಿದೆ. ಚೌಡಿಪಾಳ್ಯ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ KA13 B7602 ಮಾರುತಿ ಓಮ್ನಿಯಲ್ಲಿ ದಾಖಲೆ ಇಲ್ಲದ ಹಣ ಸಿಕ್ಕಿದ್ದು, ಪೊಲೀಸರು ಹಣವನ್ನ ಸೀಜ್ ಮಾಡಿದ್ದಾರೆ. ಇನ್ನು ಮೂಡಿಗೆರೆ ತಾಲೂಕಿನ ಕಸ್ಕೇಬೈಲು ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3,62,750 ರೂಪಾಯಿ ಹಣವನ್ನ ವಶಕ್ಕೆ ಪಡೆಯಲಾಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಹಕ್ಕಿಪಿಕ್ಕಿ ಕಾಲೋನಿ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,50,250 ರೂಪಾಯಿ ಹಣ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಶಿಡ್ಲಘಟ್ಟ ಮೂಲದ ಗೋಪಾಲ ಎಂಬುವರಿಗೆ ಸೇರಿದ ಹಣ ಹಾಗೂ ದ್ವಿಚಕ್ರ ವಾಹನವನ್ನು ಮದನಪಲ್ಲಿಯಿಂದ ಶಿಡ್ಲಘಟ್ಟದ ಬುಡಗವಾರಪಲ್ಲಿಗೆ ತಗೊಂಡು ಹೋಗುವಾಗ ವಶಕ್ಕೆ ಪಡೆಯಲಾಗಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೇ ಸಾಗಿಸ್ತಿದ್ದ 4.5 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದ ರೋಶನ ಗಜಾನನ ಎಂಬಾತ ವಿಜಯಪುರಕ್ಕೆ ಹಣ ತರುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ 22ನೇ ವಾರ್ಡ್ನ ಮಲ್ಲಿಪಾಳ್ಯದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಜೆಡಿಎಸ್ ಕಾರ್ಯಕರ್ತರ ಮಾಹಿತಿ ಮೇರೆಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಟ್ಟಸ್ವಾಮಿ ಎಂಬಾತನಿಗೆ ಸೇರಿದ ಗೋದಾಮಿನಲ್ಲಿಟ್ಟಿದ್ದ 80ಕ್ಕೂ ಹೆಚ್ಚು ಕುಕ್ಕರ್ ಗಳನ್ನು ವಶಕ್ಕೆ ಪಡೆಯಲಾಗಿದೆ.. ಈ ಕುಕ್ಕರ್ಗಳ ಮೇಲೆ ಸಿಎಂ, ಡಿಸಿಎಂ ಡಿಕೆ, ಸಂಸದ ಡಿ.ಕೆ ಸುರೇಶ್, ಶಾಸಕ ಡಾ.ರಂಗನಾಥ್ ಭಾವಚಿತ್ರ ಅಂಟಿಸಲಾಗಿತ್ತು. ಸದ್ಯ ಈ ಬಗ್ಗೆ ತನಿಖೆ ನಡೆಸಲಾಗ್ತಿದೆ.
ಇದನ್ನೂ ಓದಿ: ತುಮಕೂರು: ಚುನಾವಣಾ ಅಧಿಕಾರಿಗಳಿಂದ ದಾಳಿ; ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಕುಕ್ಕರ್ ವಶಕ್ಕೆ
ಚಿತ್ರದುರ್ಗ ನಗರದ ಜೆ ಎಂಐಟಿ ಬಳಿಯ ಚೆಕ್ ಪೋಸ್ಟ್ ಬಳಿ ಬ್ಯಾಗ್ ಗಳಲ್ಲಿ ಸಾಗಿಸುತ್ತಿದ್ದ 108ಕ್ಕೂ ಹೆಚ್ಚು ಸೀರೆಗಳನ್ನ ವಶಕ್ಕೆ ಪಡೆಯಲಾಗಿದೆ.. ಸೀರೆಗಳು ಸಾಗಿಸುತ್ತಿದ್ದವರ ಬಳಿ ಯಾವುದೇ ದಾಖಲೆ ಇರದ ಕಾರಣ ಸೀರೆ ಹಾಗೂ ಕಾರು ಎರಡನ್ನೂ ಕೂಡ ಚುನಾವಣಾಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಬಳ್ಳಾರಿಯಿಂದ ಆಂಧ್ರದ ಅದೋನಿ ಕಡೆ ಸಾಗಿಸುತ್ತಿದ್ದ ದಾಖಲೆ ರಹಿತ 26 ಕೆಜಿ ಬೆಳ್ಳಿ, 3 ಲಕ್ಷ 55 ಸಾವಿರ ನಗದು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿಕೊಂಡಿ ಈ ಬೆಳ್ಳಿ 10ಲಕ್ಷ ಮೌಲ್ಯದ್ದು ಅಂತಾ ಅಂದಾಜಿಸಲಾಗಿದೆ. AP 21 AX 9388 ನಂಬರಿನ ಕಾರಿನಲ್ಲಿ ಸಾಗಿಸ್ತಿದ್ದಾಗ ಸೀಜ್ ಮಾಡಲಾಗಿದ್ದು, ಮೋಕಾ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಬ್ಯೂರೋ ರಿಪೋರ್ಟ್ ಟವಿ 9 ಬೆಂಗಳೂರು)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ