ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯಪಾಲರು (Governor) ಹಾಗೂ ರಾಜ್ಯ ಸರ್ಕಾರ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ರಾಜಭವನ ಸಚಿವಾಲಯದ (Raj Bhavan secretariat) ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ ಡಿಜಿ-ಐಜಿಪಿ ಮತ್ತು ಎಡಿಜಿಪಿಗೆ ಲೋಕಾಯುಕ್ತ (Lokayukta) ಎಸ್‌ಐಟಿ ಐಜಿಪಿ ಚಂದ್ರಶೇಖರ್ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಕೇಳಿಬಂದಿರುವ ಗಣಿ ನಿಯಮ ಉಲ್ಲಂಘನೆ ಆರೋಪದ ತನಿಖೆಗೆ ಅಥವಾ ಕಾನೂನು ಕ್ರಮ ತೆಗೆದುಕೊಳ್ಳಲು ಅನುಮತಿ ಕೋರಿ ಲೋಕಾಯುಕ್ತ 2023ರ ಸೆ.24ರಂದು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಕೆ ಮಾಡಿತ್ತು. ನಿಯಮಗಳ ಪ್ರಕಾರ ನಾಲ್ಕು ತಿಂಗಳೊಳಗೆ ಕಡತ ವಿಲೇವಾರಿ ಮಾಡಬೇಕು. ಆದರೆ, ಎಂಟು ತಿಂಗಳಿನಿಂದ ಕಡತ ರಾಜ್ಯಪಾಲರ ಸಚಿವಾಲಯದಲ್ಲೇ ಬಾಕಿ ಉಳಿದಿದೆ. ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 19ರ ಪ್ರಕಾರ ಸ್ಪಷ್ಟ ಉಲ್ಲಂಘನೆಯಾಗಿದೆ.
ಇದನ್ನೂ ಓದಿ: ಮುಡಾ ಹಗರಣ ತನಿಖೆಗೆ ಸಿಬಿಐ ಎಂಟ್ರಿ ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್!
ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಕಾನೂನು ಕ್ರಮ ಅಥವಾ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ರಾಜ್ಯಪಾಲರಿಗೆ ಪತ್ರ ಬರೆದೆ ವಿಚಾರ ಆಗಸ್ಟ್ 7 ರಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಯ್ತು. ಸುದ್ದಿ ಪ್ರಸಾರವಾದ ಬಳಿಕ, ಅಗಸ್ಟ್ 20 ರಂದು ರಾಜ್ಯಪಾಲರು, ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಪತ್ರ ಬರೆದು ಮಾಹಿತಿ ಹೇಗೆ ಸೋರಿಕೆ ಆಯ್ತು ಅಂತ ವರದಿ ಕೇಳಿದ್ದರು. ಈ ಬಗ್ಗೆ ಆಂತರಿಕ ತನಿಖೆ ನಡೆಸಿದ ಲೋಕಾಯುಕ್ತ, ಸಂಸ್ಥೆಯಲ್ಲಿ ಯಾವುದೇ ಮಾಹಿತಿ ಸೋರಿಕೆ ಆಗಿಲ್ಲ. ಮಾಹಿತಿ ಸೋರಿಕೆಯಲ್ಲಿ ಎಸ್‌ಐಟಿ ಪಾತ್ರ ಇಲ್ಲ ಎಂದು ವರದಿ ನೀಡಿತ್ತು.
ಇದೀಗ, ಕಡತದ ಮಾಹಿತಿ ಹೇಗೆ ಸೋರಿಕೆ ಆಗಿದೆ ಅಂತ ತನಿಖೆ ನಡೆಸುವ ಅಗತ್ಯವಿದೆ. ಹೀಗಾಗಿ, ರಾಜಭವನ ಸಚಿವಾಲಯದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ ಲೋಕಾಯುಕ್ತ ಸ್ಪೆಷಲ್ ಎಸ್‌ಐಟಿ ಐಜಿಪಿ ಎಂ. ಚಂದ್ರಶೇಖರ್ ಅವರು ಸೆಪ್ಟೆಂಬರ್ 4 ರಂದು ಡಿಜಿ-ಐಜಿಪಿ ಅಲೋಕ್ ಮೋಹನ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:23 am, Fri, 27 September 24