ಲೋಕಾಯುಕ್ತ ದಾಳಿ: ಹಿರಿಯೂರು ವೈದ್ಯಾಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣ, ಚಿನ್ನ ಪತ್ತೆ

ಲೋಕಾಯುಕ್ತ ಅಧಿಕಾರಿಗಳು ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಚಿತ್ರದುರ್ಗದ ವೈದ್ಯಾಧಿಕಾರಿ ಮತ್ತು ಬಿಬಿಎಂಪಿ ಅಧಿಕಾರಿಗಳ ಮನೆಗಳಲ್ಲಿ ಚಿನ್ನ, ಭೂಮಿ ಮತ್ತು ಇತರ ಆಸ್ತಿಗಳು ಪತ್ತೆಯಾಗಿವೆ. ಬಿಡಿಎ ಅಧಿಕಾರಿಯ ಮನೆಯಲ್ಲೂ ದಾಳಿ ನಡೆದಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆಯ ಆರೋಪವಿದೆ.

ಲೋಕಾಯುಕ್ತ ದಾಳಿ: ಹಿರಿಯೂರು ವೈದ್ಯಾಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣ, ಚಿನ್ನ ಪತ್ತೆ
ಚಿನ್ನಾಭರಣ, ಹಣ ಪತ್ತೆ
Edited By:

Updated on: Jul 29, 2025 | 8:51 PM

ಬೆಂಗಳೂರು, ಜುಲೈ 29: ಲೋಕಾಯುಕ್ತ (Lokayuktha) ಅಧಿಕಾರಿಗಳು ಮಂಗಳವಾರ (ಜುಲೈ 29) ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ (Government Officers) ಸೇರಿದ ಮನೆ, ಕಚೇರಿ ಹಾಗೂ ಇತರ ಆಸ್ತಿಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದರು. ಲೋಕಾಯುಕ್ತ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್​ಗೆ ಸೇರಿದ ಮನೆ, ಕ್ಲಿನಿಕ್ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಹಿರಿಯೂರು ತಾಲೂಕಿನ ಆದಿವಾಲ ಗ್ರಾಮ ಮೂಲದ ಡಾ.ವೆಂಕಟೇಶ್ ಗ್ರಾಮದಲ್ಲಿ ಒಂದು ಕ್ಲಿನಿಕ್ ತೆರೆದಿದ್ದಾರೆ. ಆರು ತಿಂಗಳ ಹಿಂದಷ್ಟೇ ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯಲ್ಲಿ ದೊಡ್ಡ ಮನೆ ಕಟ್ಟಿಸಿದ್ದಾರೆ.

ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮನೆ, ಕ್ಲಿನಿಕ್ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಅರ್ಧ ಕೆಜಿ ಚಿನ್ನ, 7 ನಿವೇಶನ ಪತ್ರ, ಎರಡು ಕಡೆ ಜಮೀನು ಖರೀದಿ ಮಾಡಿರುವ ಪತ್ರಗಳು ಅಧಿಕಾರಿಗಳ ಕೈ ಸೇರಿವೆ. ಸುಮಾರು 3 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ ಆಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳ ಮೂಲದಿಂದ ತಿಳಿದುಬಂದಿದೆ.

ಹಿರಿಯೂರಿನ ಯರಗುಂಟೇಶ್ವರ ಬಡಾವಣೆಯಲ್ಲಿನ ಬೃಹತ್ ಮನೆ ಯಾವ ರಾಜಕಾರಣಿಯ ಮನೆಗೂ ಕಡಿಮೆಯೇನಿಲ್ಲ. ಹೋಂ ಥೇಟರ್ ಒಳಗೊಂಡಿರುವ ಕಟ್ಟಡ ಇದಾಗಿದ್ದು ಮನೆ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. 40X60 ಅಡಿಯ ಏಳು ಸೈಟ್ಗಳಾಗಿವೆ. ಸುಮಾರು 8 ಎಕರೆಗೂ ಅಧಿಕ ಜಮೀನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ: ಚಿನ್ನದ ಬಿಸ್ಕತ್, ಚಿನ್ನಾಭರಣ ರಾಶಿ, ಕಂತೆ ಕಂತೆ ನಗದು, ಲಕ್ಷಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ

ರಾಜ್ಯಾದ್ಯಂತ ಒಟ್ಟು ಐದು ಅಧಿಕಾರಿಗಳಿಗೆ ಸೇರಿದ್ದ 25 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದರು. ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾ, ಬೆಳ್ಳಿ, ನಗದು, ಆಸ್ತಿ ಪತ್ತೆಯಾಗಿದೆ.

1. ಕೆ. ಓಂಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಬಿ.ಡಿ., ಬೆಂಗಳೂರು

  • ಸ್ಥಿರ ಆಸ್ತಿಯ ಮೌಲ್ಯ– ₹4,78,20,000
  • ಚರ ಆಸ್ತಿಯ ಮೌಲ್ಯ– ₹1,47,96,365
  • ಚರಾಸ್ತಿ ಹಾಗೂ ಸ್ತಿರಾಸ್ತಿ ಸೇರಿ ಒಟ್ಟು ಆಸ್ತಿ ಮೌಲ್ಯ ₹6,26,16,365

2. ಎನ್. ವೆಂಕಟೇಶ್, ತೆರಿಗೆ ಮೌಲ್ಯಮಾಪಕ, ಶೆಟ್ಟಿಹಳ್ಳಿ ಉಪವಿಭಾಗ, ಬಿಬಿಎಂಪಿ

  • ಸ್ಥಿರ ಆಸ್ತಿಯ ಮೌಲ್ಯ– ₹2,25,05,000/-
  • ಚರ ಆಸ್ತಿಯ ಅಂದಾಜು ಮೌಲ್ಯ ₹32,50,264
  • ಚರಾಸ್ತಿ ಹಾಗೂ ಸ್ತಿರಾಸ್ತಿ ಸೇರಿ ಒಟ್ಟು ಆಸ್ತಿ ಮೌಲ್ಯ ₹2,57,55,264

3. ಡಾ. ವೆಂಕಟೇಶ್ ಜಿ, ತಾಲ್ಲೂಕು ವೈಧ್ಯಾಧಿಕಾರಿ, ಹಿರಿಯೂರು, ಚಿತ್ರದುರ್ಗ

  • ಸ್ಥಿರ ಆಸ್ತಿಯ ಅಂದಾಜು ಮೌಲ್ಯ– ₹2,87,36,000
  • ಚರ ಆಸ್ತಿಯ ಅಂದಾಜು ಮೌಲ್ಯ ₹67,49,750/
  • ಒಟು ಆಸ್ತಿ ಮೌಲ್ಯ– ₹3,54,85,750

4. ಜಯಣ್ಣ. ಆರ್, ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ವಿಭಾಗ,

  • ಸ್ಥಿರ ಆಸ್ತಿಯ ಅಂದಾಜು ಮೌಲ್ಯ ₹5,59,59,749
  • ಚರ ಆಸ್ತಿಯ ಅಂದಾಜು ಮೌಲ್ಯ ₹69,35,600
  • ಒಟ್ಟು ಆಸ್ತಿ ಮೌಲ್ಯ– ₹6,28,95,349

5. ಆಂಜನೇಯ ಮೂರ್ತಿ. ಎಂ, ಕಿರಿಯ ಅಭಿಯಂತರರು, ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ, ಗೌರಿಬಿದನೂರು, ಚಿಕ್ಕಬಳ್ಳಾಪುರ

  • ಸ್ಥಿರ ಆಸ್ತಿಯ ಅಂದಾಜು ಮೌಲ್ಯ-₹4,83,46,000
  • ಚರ ಆಸ್ತಿಯ ಅಂದಾಜು ಮೌಲ್ಯ– ₹93,65,000/-
  • ಒಟ್ಟು ಆಸ್ತಿ ಮೌಲ್ಯ– ₹5,77,11,000

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Tue, 29 July 25