ಸರ್ಕಾರಿ ಗೌರವಗಳೊಂದಿಗೆ ಮಂಡ್ಯ ಮಾಜಿ ಸಂಸದ ಜಿ ಮಾದೇಗೌಡ ಅಂತ್ಯಸಂಸ್ಕಾರ

ಮದ್ದೂರು ತಾಲ್ಲೂಕು ಹನುಮಂತನಗರದ ಆತ್ಮಲಿಂಗೇಶ್ವರ ದೇವಸ್ಥಾನ ಬಳಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.

ಸರ್ಕಾರಿ ಗೌರವಗಳೊಂದಿಗೆ ಮಂಡ್ಯ ಮಾಜಿ ಸಂಸದ ಜಿ ಮಾದೇಗೌಡ ಅಂತ್ಯಸಂಸ್ಕಾರ
ಮಾದೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನವ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು.
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 18, 2021 | 5:56 PM

ಮಂಡ್ಯ: ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಸಂಸದ ಜಿ.ಮಾದೇಗೌಡ (92) ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಭಾನುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದರು. ಮದ್ದೂರು ತಾಲ್ಲೂಕು ಹನುಮಂತನಗರದ ಆತ್ಮಲಿಂಗೇಶ್ವರ ದೇವಸ್ಥಾನ ಬಳಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.

ಜಿ.ಮಾದೇಗೌಡರ ಪತ್ನಿ ಪದ್ಮಾರವರಿಗೆ ತ್ರಿವರ್ಣ ಧ್ವಜವನ್ನು ಅರ್ಪಿಸಲಾಯಿತು. ಮಾದೇಗೌಡರ ಚಿತೆಗೆ ಪುತ್ರ ಡಾ.ಪ್ರಕಾಶ್ ಅಗ್ನಿಸ್ಪರ್ಶ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾಧಿಕಾರಿ ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಸಂತಾಪ ಮಾಜಿ ಸಂಸದ ಜಿ.ಮಾದೇಗೌಡ ನಿಧನಕ್ಕೆ ಕೆ.ಎಂ.ದೊಡ್ಡಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮಾದೇಗೌಡರ ಕಾವೇರಿ ಹೋರಾಟವನ್ನು ಎಲ್ಲರೂ ನೆನೆಯಬೇಕು. ಅವರ ಹೋರಾಟದ ಮಾದರಿ ಎಲ್ಲರಿಗೂ ಸ್ಫೂರ್ತಿಯಾಗಬೇಕು. ಮಂಡ್ಯದ ಅಭಿವೃದ್ಧಿ ವಿಚಾರದಲ್ಲಿ ಮಾದೇಗೌಡರ ಶ್ರಮ ಇದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ ಎಂದು ಸಿದ್ದರಾಮಯ್ಯ ಹೇಳಿದರು.

ಮಾದೇಗೌಡರ ಅಧ್ಯಾತ್ಮ ಒಲವು ನೆನೆದ ನಿರ್ಮಲಾನಂದ ನಾಥ ಸ್ವಾಮೀಜಿ ಜಿ.ಮಾದೇಗೌಡರಿಗೆ ಆಧ್ಯಾತ್ಮಿಕ ಒಲವು ಇತ್ತು. ಮಾದೇಗೌಡರು ನಮ್ಮ ಶ್ರೀಮಠಕ್ಕೂ ಬರುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ ಎಂದು ಹೇಳಿದರು.

ಅಂತಿಮ ದರ್ಶನ ಪಡೆದ ಜೋಗಿ, ಮುನಿಯಪ್ಪ ಜಿ.ಮಾದೇಗೌಡರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಗುರುದೇವರಹಳ್ಳಿಯ ಜನರು ಜಿ.ಮಾದೇಗೌಡರ ಪಾರ್ಥಿವ ಶರೀರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅಂತಿಮ ಗೌರವ ಸಮರ್ಪಿಸಿದರು. ಹಾಲು ಉತ್ಪಾದಕರ ಸಂಘದ ಕಚೇರಿ ಆವರಣದಲ್ಲಿ ಸರತಿ ಸಾಲಿನಲ್ಲಿ ಬಂದ ಗ್ರಾಮಸ್ಥರು ಅಂತಿಮ ದರ್ಶನ ಪಡೆದರು.

ನಟ, ನಿರ್ದೇಶಕ ಪ್ರೇಮ್​ ಮತ್ತು ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಸಹ ಮಾದೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದರು.

(Madegowda Cremation with government honors in Maddur)

ಇದನ್ನೂ ಓದಿ: G Madegowda Death: ಮಾಜಿ ಸಂಸದ, ಹಿರಿಯ ರೈತ ಹೋರಾಟಗಾರ ಜಿ. ಮಾದೇಗೌಡ ವಿಧಿವಶ

ಇದನ್ನೂ ಓದಿ: G Madegowda ಹುಟ್ಟೂರಲ್ಲಿ ಮಾಜಿ ಸಂಸದ ಜಿ.ಮಾದೇಗೌಡ ಅಂತಿಮ ದರ್ಶನ, ಕಂಬನಿ ಮಿಡಿದ ಗಣ್ಯರು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada