ಸದಾಶಿವ ವರದಿ ಜಾರಿ ವಿಚಾರ: ಡಿ ಕೆ ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದ ಮಾದಿಗ ಮಹಾಸಭಾ ಕಾರ್ಯಕರ್ತರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 18, 2021 | 7:16 PM

ಶೀಘ್ರದಲ್ಲೇ ವರದಿ ಜಾರಿಮಾಡುತ್ತೇವೆಂದು ಹೇಳಿ ಮತ ಹಾಕಿಸಿಕೊಂಡವರು ಆ ಕೆಲಸ ಮಾಡಲಿ. ನಾವು ಅಧಿಕಾರಕ್ಕೆ ಬಂದರೆ ಯಾವುದೇ ಸಮುದಾಯಕ್ಕೆ ನೋವಾಗದಂತೆ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಭರವಸೆ ನೀಡಿದರು.

ಸದಾಶಿವ ವರದಿ ಜಾರಿ ವಿಚಾರ: ಡಿ ಕೆ ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದ ಮಾದಿಗ ಮಹಾಸಭಾ ಕಾರ್ಯಕರ್ತರು
ಬಾಗಲಕೋಟೆ ಜಿಲ್ಲೆ ರಬಕವಿಯಲ್ಲಿ ಮಾದಿಗ ಮಹಾಸಭಾ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು.
Follow us on

ಬಾಗಲಕೋಟೆ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ವಿರೋಧಿಸಿ ಮಾದಿಗ ಮಹಾಸಭಾ ಕಾರ್ಯಕರ್ತರು ಘೋಷಣೆ ಕೂಗಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಹಿಂದೆ ಎಸ್​.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚಿಸಿದ್ದರು. ನಮಗೆ ಎಲ್ಲ ವರ್ಗದವರನ್ನು ಒಟ್ಟಿಗೆ ಕೊಂಡೊಯ್ಯುವುದು ಗೊತ್ತು. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಶೀಘ್ರದಲ್ಲೇ ವರದಿ ಜಾರಿಮಾಡುತ್ತೇವೆಂದು ಹೇಳಿ ಮತ ಹಾಕಿಸಿಕೊಂಡವರು ಆ ಕೆಲಸ ಮಾಡಲಿ. ನಾವು ಅಧಿಕಾರಕ್ಕೆ ಬಂದರೆ ಯಾವುದೇ ಸಮುದಾಯಕ್ಕೆ ನೋವಾಗದಂತೆ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಭರವಸೆ ನೀಡಿದರು.

‘ವರದಿ ಜಾರಿಗೆ ಕಾಂಗ್ರೆಸ್ ಪಕ್ಷದ ವಿರೋಧವಿದೆಯೇ’ ಎಂದು ಕೇಳಿದಾಗ ನಮಗೆ ಯಾವ ಸಮುದಾಯಕ್ಕೂ ನೋವು ಆಗಬಾರದು ಆ ರೀತಿ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಹೇಳಿದರು. ಹೀಗೆ ಹೇಳುವ ಮೂಲಕ ‘ಸದಾಶಿವ ಆಯೋಗ ವರದಿ ಜಾರಿಗೆ ಸಮ್ಮತಿ ಇಲ್ಲ’ ಎಂದು ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ಹಲವರು ಅರ್ಥೈಸಿಕೊಂಡರು.

ಡಿಕೆಶಿ ವಿರುದ್ಧ ಧಿಕ್ಕಾರ
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರದು ದ್ವಂದ್ವ ನಿಲುವು ಎಂದು ಆರೋಪಿಸಿ ಕರ್ನಾಟಕ ಮಾದಿಗ ಮಹಾಸಭಾ ಕಾರ್ಯಕರ್ತರು ಮುಧೋಳದದಲ್ಲಿ ಡಿಕೆಶಿ ಇದ್ದ ಕಾರು ತಡೆದು ಧಿಕ್ಕಾರ ಘೋಷಣೆಗಳನ್ನು ಕೂಗಿದರು. ವರದಿ ಜಾರಿ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಯಾವುದೇ ಸ್ಪಷ್ಟ ಅಭಿಪ್ರಾಯ ಪ್ರಕಟಿಸುತ್ತಿಲ್ಲ ಎಂದು ದೂರಿದರು.

ಕಾರು ನಿಲ್ಲಿಸಿ ಮಾತನಾಡಿದ ಡಿ.ಕೆ.ಶಿ​ವಕುಮಾರ್​, ಸದಾಶಿವ ಆಯೋಗ ಜಾರಿಗೆ ತರಲು ಮೊದಲು ಹೇಳಿದ್ದೇ ನಾವು ಎಂದು ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಂಡರು. ಪ್ರತಿಭಟನಾಕಾರರನ್ನ ನಿಯಂತ್ರಿಸಲು ಮುಧೋಳ ಪೊಲೀಸರು ಹರಸಾಹಸಪಟ್ಟರು. ಒಂದೇ ವರ್ಗವನ್ನ ಓಲೈಕೆ ಮಾಡುತ್ತಿದ್ದೀರಿ ಎಂದು ಪ್ರತಿಭಟನಾಕಾರರು ದೂರಿದರು. ಸ್ಥಳದಲ್ಲಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಳಪಾದ್ ಡಿಕೆಶಿ ಪರವಾಗಿ ಜಯಕಾರ ಕೂಗುವಂತೆ ಮನವಿ ಮಾಡಿದರು.

(Madiga Mahasabha Cadres Slogans Against Congress Chief D K Shivakumar)

ಇದನ್ನೂ ಓದಿ: ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ; ಸುಳಿವು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಇದನ್ನೂ ಓದಿ: ‘ಅವಾ ಯಾವನೊ ಡಿಕೆ ಪಾಕೆ ಅಂತೆಲ್ಲ ಹೇಳ್ತಾನೆ, ನನ್ ಹಾಳ್ ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ’: ಅಭಿಮಾನಿಗಳ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ

Published On - 7:07 pm, Sun, 18 July 21