
ಬೆಂಗಳೂರು, ಜನವರಿ 29: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಕನ್ನಡಿಗರು ಕೂಡ ಕಣ್ಣೀರು ಹಾಕುವಂತಾಗಿದೆ. ಪುಣ್ಯಸ್ನಾನಕ್ಕೆ ಅಂತಾ ಹೋದವರ ಪಾಡು ಹೇಳತೀರದಾಗಿದೆ. ಬೆಳಗಾವಿಯಿಂದ ಖಾಸಗಿ ಬಸ್ನಲ್ಲಿ ಮೂವತ್ತು ಜನರ ತಂಡ ಪ್ರಯಾಗರಾಜ್ಗೆ ಹೋಗಿತ್ತು. ಈ ಪೈಕಿ ಕಾಲ್ತುಳಿತದ ಬಳಿಕ ಐವರು ನಾಪತ್ತೆ ಆಗಿದ್ದಾರೆ. ಬೆಳಗ್ಗೆಯಿಂದಲೂ ಸಂಪರ್ಕಕ್ಕೆ ಸಿಗದ ಕಾರಣ ಸಂಬಂಧಿಕರಲ್ಲಿ ಆತಂಕ ಮನೆ ಮಾಡಿದೆ.
ಬೆಳಗಾವಿ ನಗರದ ಶೆಟ್ಟಿಗಲ್ಲಿಯ ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಚದುರಿ ಹೋಗಿದ್ದ ಇಬ್ಬರಿಗೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಬೆಳಗಾವಿಯಲ್ಲಿರುವ ದಂಪತಿಯ ಪುತ್ರ ಕಂಗಲಾಗಿಬಿಟ್ಟಿದ್ದಾರೆ.
ಇದನ್ನೂ ಓದಿ: ಕುಂಭಮೇಳ ಕಾಲ್ತುಳಿತ: ಬೆಳಗಾವಿಯ ದಂಪತಿಗೆ ಗಾಯ, ಕರ್ನಾಟಕದ ಕೆಲವರು ಗಾಯಗೊಂಡಿರುವ ಶಂಕೆ
ಈ ಫೋಟೋದಲ್ಲಿ ಕೈ ಮುಗಿದು ನಿಂತಿರೋ ಆರು ಮಂದಿ ಪೈಕಿ, ಐವರು ಕನ್ನಡಿಗರು. ತ್ರಿವಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗಬೇಕೆಂದು ಮಹಾ ಕುಂಭಮೇಳಕ್ಕೆ ಹೋಗಿದ್ದರು. ಆದರೆ ದಿಢೀರ್ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಕೂದಲೆಳೆ ಅಂತರದಿಂದ ಪಾರಾಗಿ ಚಿಕ್ಕಬಳ್ಳಾಪುರದ ನಾಲ್ವರು, ನೆಲಮಂಗಲದ ಓರ್ವ ನಿಟ್ಟುಸಿರು ಬಿಟ್ಟಿದ್ದಾರೆ.
ಕಾಲ್ತುಳಿತದ ಭೀಕರತೆಯನ್ನು ಕನ್ನಡತಿ ಸರೋಜಿನಿ ಎಂಬಾಕೆ ಬಿಚ್ಚಿಟ್ಟಿದ್ದು ಕಣ್ಣೀರಿಟ್ಟಿದ್ದಾರೆ. 2 ಬಸ್ನಲ್ಲಿ 60 ಜನ ಬಂದಿದ್ದೆವು. 9 ಜನ ಸ್ನಾನ ಮಾಡುವುದಕ್ಕೆ ಹೋದಾಗ ಕಾಲ್ತುಳಿತ ಸಂಭವಿಸಿತು. ತಪ್ಪಿಸಿಕೊಳ್ಳಲು ನಮಗೆ ಯಾವುದೇ ದಾರಿಯೇ ಸಿಕ್ಕಿಲ್ಲ ಎಂದು ಸರೋಜಿನಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಈ ಮಧ್ಯೆ, ಮಹಾಕುಂಬಮೇಳದಲ್ಲಿ ಅವ್ಯವಸ್ಥೆ ತಾಂಡವ ಆಡುತ್ತಿದೆ ಎಂದು ಕನ್ನಡಿಗರು ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರಿನ ಉಮೇಶ್ ಈ ಬಗ್ಗೆ ಮಾತನಾಡಿದ್ದು, ಗಾಯ ಆಗಿದೆ, ಆಸ್ಪತ್ರೆಗೆ ಹೋಗಿ ಬಂದಿದ್ದೇನೆ. 22 ಕಿ.ಮೀ ನಡೆದುಕೊಂಡು ಹೋಗಿದ್ದೇನೆ. ಭಕ್ತರಿಗೆ ಯಾವುದೇ ವಾಹನದ ವ್ಯವಸ್ಥೆ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಯಲಕಪಳ್ಳಿ ಗ್ರಾಮಸ್ಥರು ಪ್ರಯಾಗರಾಜ್ನಲ್ಲಿ ಸುರಕ್ಷಿತರಾಗಿದ್ದಾರೆ. ಯಲಕಪಳ್ಳಿ ಗ್ರಾಮಸ್ಥರು ಅಮೃತ ಸ್ನಾನ ಮಾಡಿದ ಸ್ಥಳದಿಂದ 5 ಕಿಮೀ ದೂರ ಕಾಲ್ತುಳಿತ ಸಂಭವಿಸಿದೆ.
ಮಾಹಿತಿ: ಭಿಮಪ್ಪ ಪಾಟೀಲ್, ಸಹದೇವ ಮಾನೆ, ದತ್ತಾತ್ರೇಯ ಪಾಟೀಲ್ ‘ಟಿವಿ9’
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ