ಬೆಂಗಳೂರು, ಮಾ.8: ಸಾಮಾನ್ಯ ದಿನಗಳಂದು ಹಗಲಿನಲ್ಲಿ ಶಿವನಿಗೆ ಪೂಜೆ (Shiv Pooja) ನಡೆಯುತ್ತದೆ. ಆದರೆ, ಶಿವರಾತ್ರಿಯ (Shivratri) ದಿನದಂದು ಮಾತ್ರ ರಾತ್ರಿ ವೇಳೆ ಪೂಜೆ ನಡೆಯುತ್ತದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಈ ಶಿವರಾತ್ರಿ ಹಬ್ಬ ಇಂದು ಬಂದೇ ಬಿಡ್ತು. ಇಡೀ ದೇಶದಲ್ಲಿ ಕೋಟ್ಯಂತರ ಹಿಂದೂಗಳು ಆಚರಣೆ ಮಾಡುತ್ತಿದ್ದು, ಕರ್ನಾಟಕದ (Karnataka) ಹಲವೆಡೆ ಇಂದು ಬೆಳಗ್ಗೆಯಿಂದಲೇ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಇಂದು ವಿಶೇಷ ಪೂಜೆ ನೆರವೇರಲಿದೆ. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಕೈಲಾಸ ನಾಥ ಶಿವನನ್ನು ಆರಾಧಿಸುವುದು ಸಂಪ್ರದಾಯವಾಗಿದೆ.
ಬೆಂಗಳೂರಿನಲ್ಲಿ ಶಿವನ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ಆರಂಭಗೊಂಡಿವೆ. ನಗರದ ಕಾಡುಮಲ್ಲೇಶ್ವರ, ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 3 ಗಂಟೆಯಿಂದಲೇ ಪೂಜೆ ಆರಂಭಗೊಂಡಿದ್ದು, ಮಲ್ಲಿಕಾರ್ಜುನನಿಗೆ ಪಂಚಾಭಿಷೇಕ ಬಳಿಕ ಅಂದರೆ, ಬೆಳಗ್ಗೆ 5.30 ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ: ಶಿವರಾತ್ರಿ ದಿನದಂದೆ ಉದ್ಘಾಟನೆಯಾಗಲಿದೆ ನವೀಕೃತಗೊಂಡ 770 ಲಿಂಗಗಳ ದೇವಸ್ಥಾನ; ಇಲ್ಲಿದೆ ಅದರ ವಿಶೇಷ
ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಲಿರುವ ಭಕ್ತಾದಿಗಳು ಆಗಮಿಸಲಿದ್ದು, ರಾತ್ರಿ 10 ಗಂಟೆವರೆಗೂ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳನ್ನು ನಿಯಂತ್ರಿಸಲು ದೇವಸ್ಥಾನದ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದಾರೆ.
ಗವಿಗಂಗಾಧರ ದೇವಸ್ಥಾನದಲ್ಲಿ ನಸುಕಿನ ಜಾವದಿಂದಲೇ ವಿಶೇಷ ಪೂಜೆ ಆರಂಭಗೊಂಡಿದ್ದು, ಅರ್ಚಕರು ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತರು ಭೋಲೆ ನಾಥನ ದರ್ಶನಕ್ಕೆ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದಾರೆ.
ಮೈಸೂರು ಅರಮನೆಯಲ್ಲೂ ಶಿವರಾತ್ರಿ ಸಂಭ್ರಮ ಕಳೆಗಟ್ಟಿದೆ. ಅರಮನೆಯ ತ್ರಿನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಶಿವಲಿಂಗಕ್ಕೆ ಸುಮಾರು 11 ಕೆಜಿ ತೂಕದ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತಿದೆ. ಜಯಚಾಮರಾಜೇಂದ್ರರು ಕಾಣಿಕೆ ರೂಪದಲ್ಲಿ ನೀಡಿದ್ದ ಚಿನ್ನದ ಮುಖವಾಡವನ್ನು ಶಿವಲಿಂಗಕ್ಕೆ ವರ್ಷದಲ್ಲಿ ಒಂದು ಬಾರಿ ಮಾತ್ರ ಧಾರಣೆ ಮಾಡಲಾಗುತ್ತದೆ.
ಇದನ್ನೂ ಓದಿ: Maha Shivratri: ಶಿವರಾತ್ರಿಯಂದು ಜಾಗರಣೆ ಮಾಡುವುದೇಕೆ? ಅದರ ಮಹತ್ವವೇನು?
ಮುಜರಾಯಿ ಇಲಾಖೆ ವಶದಲ್ಲಿರುವ ಚಿನ್ನದ ಮುಖವಾಡ ವರ್ಷ ಪೂರ್ತಿ ಮೈಸೂರು ಜಿಲ್ಲಾ ಖಜಾನೆಯಲ್ಲೇ ಇರಿಸಲಾಗಿರುತ್ತದೆ. ಈ ಬಾರಿ ಇಂದಿನಿಂದ 3 ದಿನ ಚಿನ್ನದ ಮುಖವಾಡ ನೋಡಲು ಅವಕಾಶ ಇದ್ದು, ಸೋಮವಾರ ಎಂದಿನಂತೆ ಜಿಲ್ಲಾ ಖಜಾನೆಗೆ ಚಿನ್ನದ ಮುಖವಾಡ ರವಾನೆಯಾಗಲಿದೆ.
ಶಿವರಾತ್ರಿ ಹಿನ್ನೆಲೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಬಳಿಯಿರುವ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಅವಕಾಶ ನೀಡಲಾಗಿದ್ದು, ಕಲಬುರಗಿ ನಗರದಿಂದ ಆಳಂದ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀರಾಮ ಸೇನೆಯ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಆಳಂದ ಚಲೋ ನಡೆಯಲಿದೆ. ಮಧ್ಯಾಹ್ನ 12.30 ರಿಂದ 3.30 ರ ವರೆಗೆ ಮುಸ್ಲಿಂ ಸಮುದಾಯದ 15 ಮಂದಿ ಪ್ರಾರ್ಥನೆ ಸಲ್ಲಿಸಲು ಹೈಕೋರ್ಟ್ ಅವಕಾಶ ನೀಡಿದ್ದು, ಅದೇ ರೀತಿ, ಸಂಜೆ 4 ಗಂಟೆಯಿಂದ ಮಧ್ಯರಾತ್ರಿವರೆಗೆ ಪೂಜೆಗೆ 15 ಮಂದಿ ಹಿಂದೂಗಳಿಗೆ ಅವಕಾಶ ನೀಡಿ ಆದೇಶಿಸಿದೆ. ನ್ಯಾಯಲಯಕ್ಕೆ ಸಲ್ಲಿಸಲಾದ ಪಟ್ಟಿಯಲ್ಲಿದ್ದರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
ಇಂದು ಶ್ರೀರಾಘವ ಚೈತನ್ಯ ಶಿವಲಿಂಗಕ್ಕೆ ಮಹಾ ಪೂಜೆ ಹಿನ್ನೆಲೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಮಾ.7 ರ ರಾತ್ರಿ 11 ರಿಂದ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದು, ಮಾ.9 ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ