ಮಹಾರಾಷ್ಟ್ರದಲ್ಲಿ ಮತ್ತೆ ಸದ್ದು ಮಾಡಿದ ಬೆಳಗಾವಿ ಗಡಿ ವಿವಾದ: ಡಿಸಿಎಂ ಶಿಂಧೆ ವಿರುದ್ಧ ರಾವುತ್ ಕಿಡಿ

|

Updated on: Dec 09, 2024 | 1:53 PM

ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ವಿಚಾರವಾಗಿ ಶಿವಸೇನಾ ಠಾಕ್ರೆ ಬಣದ ನಾಯಕ ಸಂಜಯ್ ರಾವುತ್ ಮಾತನಾಡಿದ್ದಾರೆ. ಇದರೊಂದಿಗೆ, ಗಡಿ ವಿವಾದ ಮತ್ತೆ ಭುಗಿಲೇಳುವ ಸಾಧ್ಯತೆ ಕಂಡುಬಂದಿದೆ. ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಂಜಯ್ ರಾವುತ್, ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ವಿವರಗಳಿಗೆ ಮುಂದೆ ಓದಿ.

ಮಹಾರಾಷ್ಟ್ರದಲ್ಲಿ ಮತ್ತೆ ಸದ್ದು ಮಾಡಿದ ಬೆಳಗಾವಿ ಗಡಿ ವಿವಾದ: ಡಿಸಿಎಂ ಶಿಂಧೆ ವಿರುದ್ಧ ರಾವುತ್ ಕಿಡಿ
ಸಂಜಯ್ ರಾವುತ್
Follow us on

ಬೆಂಗಳೂರು, ಡಿಸೆಂಬರ್ 9: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಸಭೆ ಚಳಿಗಾಲದ ಅಧಿವೇಶನ ಆರಂಭವಾಗಿರುವ ಹೊತ್ತಿನಲ್ಲೇ, ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆ ಮತ್ತೆ ಭುಗಿಲೇಳುವ ಸಾಧ್ಯತೆ ಗೋಚರಿಸಿದೆ. ಬೆಳಗಾವಿ ವಿಚಾರವಾಗಿ ಶಿವಸೇನಾ (ಠಾಕ್ರೆ ಬಣ) ನಾಯಕ, ಸಂಸದ ಸಂಜಯ್ ರಾವುತ್ ಮಾತನಾಡಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಸಚಿವರಾಗಿದ್ದಾಗ ಮತ್ತು ಚಂದ್ರಕಾಂತ ಪಾಟೀಲ ಅವರು ಸಚಿವರಾಗಿದ್ದಾಗ ಗಡಿ ಭಾಗದ ವಿಶೇಷ ಉಸ್ತುವಾರಿಯನ್ನು ಹೊಂದಿದ್ದರು. ಆದರೆ ಏಕನಾಥ ಶಿಂಧೆ ಬೆಳಗಾವಿಗೆ ಹೋಗಲೇ ಇಲ್ಲ. ಆದರೆ, ನಾನು ಅಲ್ಲಿಗೆ ಹೋಗಿದ್ದೆ. ಅಲ್ಲಿ ನನ್ನನ್ನು ಬಂಧಿಸಲಾಯಿತು. ನಮ್ಮ ಸರ್ಕಾರದ ಅವಧಿಯಲ್ಲಿ ಆಗಾಗ ಅಲ್ಲಿಗೆ ಹೋಗುತ್ತಿದ್ದೆ. ನಂತರ ನನ್ನನ್ನು ಬಂಧಿಸಿ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು. ಆದರೆ ನಾನು ಹೆದರಲಿಲ್ಲ ಎಂದು ರಾವುತ್ ಹೇಳಿದ್ದಾರೆ.

ಅಲ್ಲಿಗೆ (ಬೆಳಗಾವಿ ಗಡಿ ಪ್ರದೇಶಕ್ಕೆ) ಹೋದರೆ ಪೊಲೀಸರು ಬಂಧಿಸುತ್ತಾರೆ. ಅಷ್ಟೇ ಅಲ್ಲದೆ, ಪೊಲೀಸರ ಲಾಠಿ ಏಟು ತಿನ್ನಬೇಕಾಗುತ್ತದೆ. ಹಾಗಾಗಿ ಅವರು ಅಲ್ಲಿಗೆ ಹೋಗಲಿಲ್ಲ. ಬಂಧನ ಭೀತಿಯಿಂದ ಅಲ್ಲಿಗೆ ಹೋಗಿಲ್ಲ ಎಂದು ಶಿಂಧೆ ವಿರುದ್ಧ ಸಂಜಯ್ ರಾವುತ್ ವಾಗ್ದಾಳಿ ನಡೆಸಿದ್ದಾರೆ.

ಶಿಂಧೆ ಹೇಳಿಕೆಯು ಈಗಾಗಲೇ ಬೆಳಗಾವಿಯಲ್ಲಿ ಉದ್ಧಟತನ ತೋರುತ್ತಿರುವ ಎಂಇಎಸ್ ಪುಂಡರ ಮೇಲೆ ಪ್ರಬಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಳಗಾವಿಯ ಸಂಭಾಜಿ ಮಹಾರಾಜ್ ಚೌಕ್‌ನಲ್ಲಿ ಸಭೆ ಸೇರಿ ಪ್ರತಿಭಟನೆ ನಡೆಸುವುದಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಎಚ್ಚರಿಕೆ ನೀಡಿದ್ದರಿಂದ ಕರ್ನಾಟಕ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಸಂಭಾಜಿ ಮಹಾರಾಜ ಚೌಕದಲ್ಲಿ ಕರ್ನಾಟಕ ಪೊಲೀಸರ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 100 ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನದ ವಿರುದ್ಧ ಪ್ರತಿಭಟನೆ: ಎಂಇಎಸ್ ಮುಖಂಡರು, ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮತ್ತೊಂದೆಡೆ, ಸಂಭಾಜಿ ವೃತ್ತಕ್ಕೆ ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ