ಬೆಂಗಳೂರು, ಮಾರ್ಚ್ 10: ಜಾಗತಿಕವಾಗಿ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಅನೇಕ ಕಾರ್ಪೋರೇಟ್ ಬ್ಯಾಂಕ್‌ಗಳೇ ತತ್ತರಿಸಿ ಹೋದವು. ಆದರೆ ಅಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನೂ ಸಮರ್ಥವಾಗಿ ಎದುರಿಸಿ ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ (Malleswaram Co- Operative Bank) ನೂರು ವರ್ಷ ಪೂರೈಸಿರುವುದು ಅಪ್ರತಿಮ ಸಾಧನೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ 103 ವರ್ಷಗಳನ್ನು ಪೂರೈಸಿರುವ ‘ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್‌ನ ಶತಮಾನೋತ್ಸವ’ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೂರು ವರ್ಷ ಪೂರೈಸುವುದು ಸುಲಭ ಸಾಧ್ಯವಲ್ಲ. ಆದರೆ ಬದ್ಧತೆ ಮತ್ತು ಪ್ರಾಮಾಣಿಕತೆಯ ಮೂಲಕ ಮಲ್ಲೇಶ್ವರಂ ಬ್ಯಾಂಕ್ ಅದನ್ನು ಸಾಕಾರಗೊಳಿಸಿದೆ ಎಂದಿದ್ದಾರೆ.
ಇಂದು ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್‌ನ ಎಲ್ಲಾ ಸದಸ್ಯರು ಸೇರಿರುವುದು ಕಣ್ಣಿಗೆ ಹಬ್ಬದಂತಿದೆ. ಈ ರೀತಿ ಸದಸ್ಯರ ಪಾಲ್ಗೊಳ್ಳುವಿಕೆಯೇ ಸಹಕಾರಿ ಬ್ಯಾಂಕ್‌ನ ಅಪಾರ ಜನಪ್ರಿಯತೆಯನ್ನು ಒತ್ತಿಹೇಳುತ್ತದೆ. ಬ್ಯಾಂಕ್ ನೂರು ವರ್ಷಗಳಿಂದ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಈ ಕ್ಷಣ ಸಾಕ್ಷಿಯಾಗಿದೆ. ಬ್ಯಾಂಕ್‌ನ ಈ ಯಶಸ್ಸನ್ನು ನಾನು ಅಭಿನಂದಿಸುತ್ತೇನೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಸಹ ನಮ್ಮ ಸಹಕಾರಿ ಬ್ಯಾಂಕ್‌ಗಳು ಬಹಳಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದರು.
ಇದನ್ನೂ ಓದಿ: ಬೆಂಗಳೂರಿಗೆ ಜಲಕ್ಷಾಮದ ಮಧ್ಯೆ ಕಲುಷಿತ ನೀರಿನ ಸಂಕಷ್ಟ; ಮಣ್ಣು, ತ್ಯಾಜ್ಯಮಿಶ್ರಿತ ನೀರಿನಿಂದ ಶಾಂತಿಲಾಲ್ ಲೇಔಟ್ ಜನರು ಹೈರಾಣು
2009 ರಲ್ಲಿ, ಜಾಗತಿಕ ಆರ್ಥಿಕ ಕುಸಿತದಿಂದ ಹೆಚ್ಚಾಗಿ ಬಾಧಿತವಾಗದ ಭಾರತವು ತನ್ನ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚು ಋಣಿಯಾಗಿದೆ ಎಂದು ಜಾಗತಿಕ ಅರ್ಥಶಾಸ್ತ್ರಜ್ಞರು ಒಪ್ಪಿಕೊಂಡಿದ್ದರು. ಅದೇ ರೀತಿಯಾಗಿ ಭಾರತದಲ್ಲಿನ ಬಲವಾದ ಕೌಟುಂಬಿಕ ಹಣಕಾಸು ಉಳಿತಾಯ ಅಭ್ಯಾಸಗಳೇ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಸಹಕಾರಿ ಬ್ಯಾಂಕ್ ಎಂಬುದು ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾಗಿರುವುದು. ಸಮಾಜಕ್ಕೆ ಸಮಾನವಾಗಿ ಸಂಪನ್ಮೂಲ ಒದಗಬೇಕು ಎಂಬ ನಿಟ್ಟಿನಲ್ಲಿ ಆರಂಭವಾದ ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ ಇಂದು ಅದರ ಗುರಿ ಉದ್ದೇಶಗಳನ್ನು ಸಾಧಿಸಿದೆ ಎಂಬುದಕ್ಕೆ ಈ ಸುಸಂದರ್ಭವೇ ಸಾಕ್ಷಿ. ಒಂದು ಸಣ್ಣ ಕೊಠಡಿಯಲ್ಲಿ ಆರಂಭವಾದ ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ ಇಂದು ಕೇಂದ್ರ ಕಚೇರಿ ಸೇರಿದಂತೆ 5 ಶಾಖೆಗಳನ್ನು ಹೊಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲೇ ಮಾದರಿ ಬ್ಯಾಂಕ್ ಎಂದರೆ ತಪ್ಪಾಗಲಾರದು. ಅನೇಕ ಸವಾಲುಗಳ ನಡುವೆಯೂ ಸಹಕಾರಿ ಬ್ಯಾಂಕ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಇಂದು ಮಲ್ಲೇಶ್ವರಂನಂತಹ ಸಹಕಾರಿ ಬ್ಯಾಂಕ್‌ಗಳು ಅಭಿವೃದ್ಧಿ ಹೊಂದುತ್ತಿವೆ. ಯಾವುದೇ ಸದಸ್ಯರಿಗೆ ಅನ್ಯಾಯವಾಗದ ರೀತಿಯಲ್ಲಿ ಕಾರ್ಯಕ್ರಮ ನಿರ್ವಹಿಸುತ್ತಿರುವ ಹೆಗ್ಗಳಿಕೆಗೆ ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ ಪಾತ್ರವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ ಮತ್ತು ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್‌ಗೆ ಸಂಬಂಧಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ: ನೀರು ಸರಬರಾಜು ಮಂಡಳಿ ಅಧ್ಯಕ್ಷರು ಹೇಳಿದ್ದೇನು?
ಇದೇ ವೇಳೆ ಬ್ಯಾಂಕಿನ ಅಧ್ಯಕ್ಷ ಬಿ ರಮೇಶ್ ಅವರು ಮಾತನಾಡಿ, ಈ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಗಳ ಕೊರತೆಯನ್ನು ನೀಗಿಸಲು 1920 ಜೂನ್ 20ರಂದು ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ ಅನ್ನು ಮಹತ್ವಾಕಾಂಕ್ಷೆಯ ಯುವಕರ ಗುಂಪೊಂದು ಸ್ಥಾಪಿಸಿತು. ಆರಂಭದಲ್ಲಿ ಮಲ್ಲೇಶ್ವರಂನ 7ನೇ ಕ್ರಾಸ್‌ನ ಸಾಧಾರಣ ಕೊಠಡಿಯೊಂದರಲ್ಲಿ ಕಾರ್ಯನಿರ್ವಹಣೆ ಆರಂಭಿಸಿದ ಬ್ಯಾಂಕ್ ಬಳಿಕ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬಂತು. ತನ್ನ ಗ್ರಾಹಕ ಸ್ನೇಹಿ ವರ್ತನೆಯಿಂದ ಬ್ಯಾಂಕ್ ಒಂದು ಸಣ್ಣ ಕೊಠಡಿಯಿಂದ ವಿಶಾಲವಾದ ಕಟ್ಟಡಕ್ಕೆ ಸ್ಥಳಾಂತರವಾಯಿತು. ಇದು ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್‌ನ ನಿರಂತರ ಪ್ರಗತಿಯನ್ನು ಸೂಚಿಸುತ್ತದೆ ಎಂದರು.
ಅಸಾಧಾರಣ ಗ್ರಾಹಕ ಸೇವೆ ಮತ್ತು ತಾಂತ್ರಿಕ ಆವಿಷ್ಕಾರದಿಂದ ಬ್ಯಾಂಕ್ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಿದ್ದು, ಮಲ್ಲೇಶ್ವರಂ (ಮುಖ್ಯ ಕಚೇರಿ), ರಾಜಾಜಿನಗರ, ವೈಯಾಲಿಕಾವಲ್, ಯಶವಂತಪುರ, ಗಂಗಾನಗರ ಮತ್ತು ಆರ್‌ಪಿಸಿ ಲೇಔಟ್‌ನಂತಹ ಪ್ರಮುಖ ಸ್ಥಳಗಳಲ್ಲಿ ಶಾಖೆಗಳನ್ನು ಸ್ಥಾಪಿಸಿದೆ. ಈ ಪ್ರಗತಿಯು ಬ್ಯಾಂಕಿನ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಬ್ಯಾಂಕ್‌ನ ಉಪಾಧ್ಯಕ್ಷ ಡಾ.ಶಂಕರ್ ವಿ, ಬ್ಯಾಂಕ್‌ನ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ.ಸುರೇಶ್, ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಗೌಡ, ಬ್ಯಾಂಕ್ ನಿರ್ದೇಶಕರಾದ ಅನಂತನ್ ಎ.ಆರ್ ಮತ್ತು ಬ್ಯಾಂಕ್‌ನ ಎಲ್ಲಾ ನಿರ್ದೇಶಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.