ನಾಲ್ಕನೆಯದ್ದೂ ಹೆಣ್ಣು ಮಗು ಆಯಿತೆಂದು ಸ್ನೇಹಿತರಿಗೆ ಮಾರಾಟ ಮಾಡಲು ಮುಂದಾದ ತಂದೆ; ಸುಳ್ಳು ಆರೋಪ ಎಂದು ಸ್ಪಷ್ಟನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 05, 2021 | 1:41 PM

ಘಟನೆ ನಡೆದಿದ್ದು ಸತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆಯಾದರೂ ಇಲ್ಲಿ ನಡೆದಿರುವುದು ಮಾರಾಟ ಪ್ರಕ್ರಿಯೆ ಅಲ್ಲ. ಬದಲಾಗಿ ಸ್ನೇಹಿತರ ನಡುವೆ ವಿಶ್ವಾಸದ ಮೇರೆಗೆ ಇದು ನಡೆದಿದೆ ಎಂದು ನಗರಸಭೆ ಸದಸ್ಯ ಜಾಕೀರ್ ಪಾಷಾ ಹೇಳಿದ್ದಾರೆ.

ನಾಲ್ಕನೆಯದ್ದೂ ಹೆಣ್ಣು ಮಗು ಆಯಿತೆಂದು ಸ್ನೇಹಿತರಿಗೆ ಮಾರಾಟ ಮಾಡಲು ಮುಂದಾದ ತಂದೆ; ಸುಳ್ಳು ಆರೋಪ ಎಂದು ಸ್ಪಷ್ಟನೆ
ವಾಸಿಂ ಪಾಷಾ, ಮಗುವಿನ ತಂದೆ
Follow us on

ಆತ ಗಾರೆ ಕೆಲಸ ಮಾಡ್ತಾ, ಬಡತನದಲ್ಲೇ ಬದುಕು ಸಾಗಿಸುತ್ತಿದ್ದ ವ್ಯಕ್ತಿ. ಆತನಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಒಂದು ವಿಡಿಯೋ ವೈರಲ್ ಅಗಿತ್ತು. ವಿಡಿಯೋ ವೈರಲ್ ಆದ ಬಳಿಕ ಆ ವ್ಯಕ್ತಿ ವಿಲನ್ ಆಗ್ಬಿಟ್ಟಿದ್ದ. ತನ್ನ ಸ್ವಂತ ಮಗುವನ್ನೇ ಮಾರಲು ಯತ್ನಿಸಿದ್ದ ಆರೋಪಕ್ಕೆ ಸಿಲುಕಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಆತನ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದಿದ್ದರು. ಆದರೆ, ಈಗ ಹಿರಿಯರ ಮಧ್ಯಸ್ಥಿಕೆಯಿಂದ ಗೊಂದಲ ತಿಳಿಯಾಗಿದ್ದು, ಸದ್ಯ ಎಲ್ಲವೂ ಸರಿಯಾದಂತೆ ಕಾಣುತ್ತಿದೆ.

ಮಂಡ್ಯ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕ ಮಂಡ್ಯದ ಬೀಡಿ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದ್ದು, ಅಲ್ಲಿನ ನಿವಾಸಿ ವಾಸಿಂ ಪಾಷ ಎಂಬಾತ ತನ್ನ ಹೆಣ್ಣು ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಅನುಮಾನ ಹುಟ್ಟಿದೆ. ಈ ಅನುಮಾನಕ್ಕೆಲ್ಲಾ ಕಾರಣವಾಗಿದ್ದು ಅದೊಂದು ವೈರಲ್ ವಿಡಿಯೋ. ಗಾರೆ ಕೆಲಸ ಮಾಡಿಕೊಂಡು ಬೀಡಿ ಕಾಲೋನಿಯಲ್ಲಿ ವಾಸವಾಗಿದ್ದ ವಾಸಿಂ ಪಾಷ 8 ವರ್ಷಗಳ ಹಿಂದೆ ಮೈಸೂರು ಮೂಲದ ಯುವತಿಯೊಂದಿಗೆ ಮದುವೆ ಆಗಿದ್ದರು. ಈ ದಂಪತಿಗೆ ಈಗಾಗಲೇ 7 ವರ್ಷ, 5 ವರ್ಷ ಹಾಗೂ 3 ವರ್ಷದ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ಕೆಲ ತಿಂಗಳ ಹಿಂದೆ ಆತನ ಪತ್ನಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಾಲ್ಕನೆಯದ್ದೂ ಹೆಣ್ಣು ಮಗುವಾಯ್ತಲ್ಲ ಅಂತಾ ಯೋಚಿಸಿದ್ದ ವಾಸಿಂ ಪಾಷಾ ಮಗುವನ್ನ ಮಕ್ಕಳೇ ಇಲ್ಲದ ಸ್ನೇಹಿತರೊಬ್ಬರಿಗೆ ಮಾರಾಟ ಮಾಡಲು ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ವಾರದ ಹಿಂದೆ ಮಗುವಿನ ಮಾರಾಟ ಪ್ರಕ್ರಿಯೆ ನಡೆದಿದೆ ಎನ್ನುವ ವಿಡಿಯೋ ವೈರಲ್​ ಆಗಿದ್ದು, ವಿಡಿಯೋದಲ್ಲಿ ವಾಸಿಂ ಪಾಷಾ ವ್ಯಕ್ತಿಯೊಬ್ಬರಿಂದ ಹಣ ಪಡೆದು ಎಣಿಸಿಕೊಳ್ತಿರೋ ವಿಡಿಯೋ ವೈರಲ್ ಆಗಿತ್ತು.

ಮಗು ಹುಟ್ಟುವ ಮುನ್ನವೇ ವಾಸಿಂ ಪಾಷಾ ಈ ಬಗ್ಗೆ ಸ್ನೇಹಿತರ ಜೊತೆ ಚರ್ಚಿಸಿದ್ದರು, ಹುಟ್ಟುವ ಮಗು ಹೆಣ್ಣಾದರೆ ಮಕ್ಕಳೇ ಇಲ್ಲದ ಸ್ನೇಹಿತ ದಂಪತಿಗೆ ಮಗುವನ್ನ ಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಅದರಂತೆ ತಿಂಗಳ ಹಿಂದೆ ಪತ್ನಿ ಮಗುವಿಗೆ ಜನ್ಮನೀಡಿದ ಬಳಿಕ ಮಗುವನ್ನ ಪಡೆದುಕೊಳ್ಳಲು ಬಂದ ಸ್ನೇಹಿತ ದಂಪತಿ ಆ ವೇಳೆಗೆ ತಾವು ಪಡೆದುಕೊಳ್ಳುತ್ತಿರೋ ಮಗುವಿನ ಹೆತ್ತವರಿಗೆ ಒಂದಷ್ಟು ಹಣ ನೀಡಲು ಮುಂದಾಗಿದ್ದರಂತೆ. ಆಗ ಮಗುವಿನ ತಾಯಿ ಏನೇ ಆದರೂ ಮಗುವನ್ನ ಕೊಡೋದಿಲ್ಲ ಅಂತಾ ಜಗಳ ತೆಗೆದಿದ್ದರಂತೆ. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ್ದ ಕಾಲೋನಿಯ ಮುಖಂಡರು ಮಗುವನ್ನ ಯಾರಿಗೂ ಕೊಡುವುದು ಬೇಡ ನಿಮಗೆ ಮಕ್ಕಳನ್ನ ಸಾಕಲು ತೊಂದರೆಯಾದರೆ ನಾವು ನೆರವು ನೀಡುತ್ತೇವೆ ಎಂದು ಹೇಳಿ ಸಮಾಧಾನ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಸದ್ಯ ಕಾಲೋನಿಯ ಮುಖಂಡರ ಮಧ್ಯಪ್ರವೇಶದಿಂದಾಗಿ ಇಲ್ಲಿ ಹೆಣ್ಣು ಮಗುವಿನ ಮಾರಾಟ ನಡೆಯುವುದು ತಪ್ಪಿದೆ. ಮಗು ಈಗ ತಂದೆ ಬಳಿಯೇ ಇದೆಯಾದರೂ ಮುಂದೆ ಏನಾಗುತ್ತೆ ಅಂತಾ ಹೇಳಲು ಆಗೋದಿಲ್ಲ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸುವುದು ಸೂಕ್ತ ಎಂದು ಕೆಲ ಸ್ಥಳೀಯರು ಆಗ್ರಹಿಸಿದ್ದಾರೆ.

ಜಾಕೀರ್ ಪಾಷಾ, ನಗರಸಭೆ ಸದಸ್ಯ

ಹಣ ಸಹಾಯ ಬೇಕಿದ್ದರೆ ಮಸೀದಿ ವತಿಯಿಂದ ಮಾಡುತ್ತೇವೆ
ಘಟನೆ ನಡೆದಿದ್ದು ಸತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆಯಾದರೂ ಇಲ್ಲಿ ನಡೆದಿರುವುದು ಮಾರಾಟ ಪ್ರಕ್ರಿಯೆ ಅಲ್ಲ. ಬದಲಾಗಿ ಸ್ನೇಹಿತರ ನಡುವೆ ವಿಶ್ವಾಸದ ಮೇರೆಗೆ ಇದು ನಡೆದಿದೆ. ಮಕ್ಕಳಿಲ್ಲದ ಸ್ನೇಹಿತರಿಗೆ ಮಕ್ಕಳನ್ನು ಕೊಡುವುದಾಗಿ ಮಾತು ಕೊಟ್ಟಿದ್ದನ್ನು ಅಪಪ್ರಚಾರ ಮಾಡಲಾಗಿದೆ. ಒಂದು ವೇಳೆ ಏನಾದರೂ ವ್ಯವಹಾರ ಆಗಿದ್ದರೆ ಒಪ್ಪಿಕೊಳ್ಳಿ. ಯಾವ ಕಾರಣಕ್ಕೂ ತಾಯಿ-ಮಗುವನ್ನು ಬೇರೆ ಮಾಡುವುದು ಬೇಡ. ಹಾಗೇನಾದರೂ ಆದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆಂದು ನೇರವಾಗಿ ಎಚ್ಚರಿಸಿದ್ದೇವೆ. ಅಲ್ಲದೇ, ಹಣದ ಸಹಾಯ ಬೇಕಿದ್ದರೆ ಮಸೀದಿ ವತಿಯಿಂದ ಮಾಡುತ್ತೇವೆ ಎಂದು ಭರವಸೆಯನ್ನೂ ನೀಡಿದ್ದೇವೆ ಎಂದು ನಗರಸಭೆ ಸದಸ್ಯ ಜಾಕೀರ್ ಪಾಷಾ ಹೇಳಿದ್ದಾರೆ.

ವ್ಯವಹಾರ ನಡೆದಿದೆ ಎನ್ನುವುದು ತಪ್ಪು ಮಾಹಿತಿ
ಸ್ನೇಹಿತನೊಬ್ಬನಿಗೆ ಮಾತು ಕೊಟ್ಟಿದ್ದೆ. ಅದರ ಹೊರತಾಗಿ ಯಾವ ವ್ಯವಹಾರವನ್ನೂ ಮಾಡಿಲ್ಲ. ಈಗಾಗಲೇ ಐದು ಲಕ್ಷ ಸಾಲ ಮಾಡಿದ್ದು, ಮಕ್ಕಳನ್ನು ಸಾಕೋಕೆ ಇನ್ನೂ ಐದು ಲಕ್ಷ ಸಾಲ ಮಾಡುವುದಾದರೂ ಸರಿ. ಮಕ್ಕಳನ್ನು ಮಾರಾಟ ಮಾಡೋಕೆ ಇದು ಸಂತೆಯಲ್ಲ. ನಿಮಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಮಗುವಿನ ತಂದೆ ವಾಸಿಂ ಪಾಷಾ ತಿಳಿಸಿದರು.

(ವರದಿ: ಕೆ.ರವಿ)

ಇದನ್ನೂ ಓದಿ: Child Sale | ಪಡೆದ ಸಾಲ ವಾಪಸ್ ನೀಡದಿದಕ್ಕೆ ವೈದ್ಯ ದಂಪತಿಗೆ ಗಂಡು ಮಗು ಮಾರಾಟ.. 6 ಮಂದಿ ಅರೆಸ್ಟ್

ಇದನ್ನೂ ಓದಿ: ಗಂಡು ಮಗುವನ್ನು ಮಾರಾಟ ಮಾಡಲು ಮುಂದಾದ ತಂದೆ .. ಮಗು ಕೊಡಲು ಒಲ್ಲೆ ಎಂದ ಪತ್ನಿಗೆ ರಸ್ತೆಯಲ್ಲಿ ಜುಟ್ಟು ಹಿಡಿದು ಎಳೆದಾಡಿದ ಪತಿ