ಮಸೀದಿ ಕಡೆಯಿಂದ ಕಲ್ಲೆಸೆತ ಮಾಡಲಾಗಿದೆ, 21 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ: ಸಚಿವ ಚಲುವರಾಯಸ್ವಾಮಿ

ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಘಟನೆಯಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡರೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿವೆ ಎಂದು ಆರೋಪಿಸಿದ್ದಾರೆ. ಮಸೀದಿ ಕಡೆಯಿಂದ ಕಲ್ಲು ತೂರಾಟ ನಡೆದಿದ್ದು, ಮುಸ್ಲಿಮರನ್ನು ಬಂಧಿಸಿದ ಬಗ್ಗೆ ಅವರು ನೀಡಿದ ವಿವರ ಇಲ್ಲಿದೆ.

ಮಸೀದಿ ಕಡೆಯಿಂದ ಕಲ್ಲೆಸೆತ ಮಾಡಲಾಗಿದೆ, 21 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ: ಸಚಿವ ಚಲುವರಾಯಸ್ವಾಮಿ
ಸಚಿವ ಚಲುವರಾಯಸ್ವಾಮಿ

Updated on: Sep 08, 2025 | 12:56 PM

ಬೆಂಗಳೂರು, ಸೆಪ್ಟೆಂಬರ್ 8: ಮಂಡ್ಯದ (Mandya) ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಭಾನುವಾರ ರಾತ್ರಿ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ 21 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ. ಮಸೀದಿ ಕಡೆಯಿಂದ 2 ಕಲ್ಲುಗಳನ್ನು ಎಸೆದ ಬಗ್ಗೆ ಮಾಹಿತಿ ಇದೆ. ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಹಾಗಿದ್ದರೂ ಬಿಜೆಪಿ (BJP) ಹಾಗೂ ಜೆಡಿಎಸ್​​​ನವರು ಪ್ರತಿಭಟನೆ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Chaluvaraya Swamy)
ಆರೋಪಿಸಿದರು. ಮದ್ದೂರು ಘಟನೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ತಕ್ಷಣ ಎಫ್‌ಐಆರ್ ದಾಖಲಿಸಿಕೊಂಡು 21 ಜನ ಮುಸ್ಲಿಮರನ್ನು ಬಂಧಿಸಲಾಗಿದೆ. ಅದರಲ್ಲಿ ಹೊರಗಡೆಯ ಒಂದಿಬ್ಬರು ಮೂರು ಜನ ಇರಬಹುದು ಎನ್ನಲಾಗಿದೆ. ಹಿಂದೂಗಳ ಮೇಲೆ ಯಾವುದೇ ಕೇಸ್ ಹಾಕಿಲ್ಲ, ಯಾರನ್ನೂ ಬಂಧಿಸಿಲ್ಲ ಎಂದರು.

ಬಹುಶಃ ಇಷ್ಟು ಬೇಗ ಯಾವುದೇ ಪ್ರಕರಣದಲ್ಲಿ ಕ್ರಮ ಆಗಿಲ್ಲ. ಕಲ್ಲೆಸಸತ ಮಾಡಿದವರ ಮೇಲೆ ಕ್ರಮ ಜರುಗಿಸಿದ ಮೇಲೆ ಅವರು (ಬಿಜೆಪಿ, ಜೆಡಿಎಸ್) ಕೇಳುವುದಾದರೆ ಹೆಚ್ಚುವರಿ ತನಿಖೆ ಕೇಳಬಹುದಿತ್ತು. ಇನ್ನೂ ಹೆಚ್ಚಿನ ಕ್ರಮ ತಗೆದುಕೊಳ್ಳಿ ಎನ್ನಬಹುದಿತ್ತು. ಅದು ಬಿಟ್ಟು ಪ್ರತಿಭಟನೆ ನೆಪದಲ್ಲಿ ಕೋಮುಗಲಭೆ ಮಾಡುವಂತ ಪ್ರಯತ್ನ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ಸಚಿವರು ಹೇಳಿದರು.

ನಮ್ಮ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಪ್ರತಿಪಕ್ಷಗಳನ್ನು ಕಟ್ಟಿಹಾಕಿವೆ. ಈಗ ವಿಧಾನಸಭೆಯಲ್ಲಿ ಅವರು ವಿಫಲರಾಗಿದ್ದಾರೆ. ಅವರಿಗೆ ಯಾವ ವಿಚಾರವೂ ಸಿಗದೇ ಇದ್ದಾಗ ಕೋಮುಗಲಭೆ ಒಂದೇ ಪ್ರಮುಖವಾಗಿ ಕಂಡಿದೆ. ಅವರಿಗೆ ಪಕ್ಷ ಸಂಘಟನೆ ಮಾಡಲು ಉಳಿದಿರುವ ಅಸ್ತ್ರ ಇದೊಂದೇ ಆಗಿದೆ. ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗಲೀ, ಜನತಾ ದಳದ ನಾಯಕರಾಗಲೀ ಅಥವಾ ಯಾವುದೇ ಸಂಘಟನೆ ಅವರಾಗಲೀ ಅವರಿಗೆ ರಾಜಕೀಯ ಇಚ್ಛಾಶಕ್ತಿ ಇದ್ದರೆ ಜನಪರ ವಿಚಾರ ಎತ್ತಿಕೊಂಡು ಮಾತನಾಡಲಿ ಎಂದರು.

ಇದನ್ನೂ ಓದಿ
ಮದ್ದೂರು ಕಲ್ಲು ತೂರಾಟ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ HDK ಆಗ್ರಹ​
ನಾವೇನು ಪಾಕಿಸ್ತಾನದಲ್ಲಿದ್ದೇವಾ? ಮದ್ದೂರು ಗಲಭೆ ಬಗ್ಗೆ ಅಶೋಕ್ ವಾಗ್ದಾಳಿ
ಮಂಡ್ಯ ಮದ್ದೂರಿನಲ್ಲಿ ಮತ್ತೆ ಕಲ್ಲು ತೂರಾಟ: ಲಾಠಿಚಾರ್ಜ್
ಕಲ್ಲು ತೂರಿದವರ ವಿರುದ್ಧ ಆಕ್ರೋಶ, ಪ್ರತಿಭಟನೆ ವೇಳೆ ಮತ್ತೆ ಕಲ್ಲು ತೂರಾಟ!

ಚಲುವರಾಯಸ್ವಾಮಿ ಹೇಳಿಕೆಯ ವಿಡಿಯೋ

ಈ ತರ ಘಟನೆಗಳು ನಡೆದಾಗ ಅವರಿಗೆ ಪ್ರಶ್ನೆ ಮಾಡುವ ಹಕ್ಕಿದೆ. ಆದರೆ, ಇಲ್ಲಿ ಕ್ರಮ ಆಗಿದೆ. 21 ಜನರ ಬಂಧನವಾಗಿದೆ, ಎಫ್‌ಐಆರ್ ಆಗಿದೆ. ಇನ್ನು ಏನಾದರೂ ಹೆಚ್ಚುವರಿ ಕ್ರಮ ಆಗಬೇಕಿದ್ದರೆ ಒಂದು ಮನವಿ ಸಲ್ಲಿಸಲಿ ಅಥವಾ ಜಿಲ್ಲಾಡಳಿತಕ್ಕೆ ಹೇಳಲಿ. ಅದನ್ನು ಬಿಟ್ಟು ಮೆರವಣಿಗೆ, ಪ್ರತಿಭಟನೆ ಹೆಸರಲ್ಲಿ ಕೋಮುಗಲಭೆಗೆ ಪ್ರಚೋದನೆ ಕೊಡಬಾರದು ಎಂದರು.

ಇದನ್ನೂ ಓದಿ: ಮದ್ದೂರು ಕಲ್ಲು ತೂರಾಟ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಿ: ಮಂಡ್ಯ ಎಸ್​ಪಿಗೆ ಹೆಚ್​ಡಿಕೆ ಸೂಚನೆ

ಮದ್ದೂರಿನಲ್ಲಿ ಭಾನುವಾರ ರಾತ್ರಿ ನಡೆದ ಕಲ್ಲು ತೂರಾಟದಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದಿದೆ. ಸದ್ಯ ಪರಿಸ್ಥಿತಿ ಉದ್ವಿಗ್ನ ಇದ್ದು, ಮಂಗಳವಾರ ಬೆಳಗ್ಗೆ ವರೆಗೆ ನಿಷೇಧಾಜ್ಞೆ ಹೇರಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:50 pm, Mon, 8 September 25