ಮದ್ದೂರು ಉದ್ವಿಗ್ನ: ಕಲ್ಲು ತೂರಿದವರ ವಿರುದ್ಧ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ ವೇಳೆ ಮತ್ತೆ ಕಲ್ಲು ತೂರಾಟ, ಲಾಠಿಚಾರ್ಜ್
ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಮಸೀದಿ ಮುಂದೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ಉಂಟಾಗಿದ್ದು, ಈ ವೇಳೆ ಕೆಲ ಕಿಡಿಗೇಡಿಗಳಿಂದ ಮತ್ತೆ ಕಲ್ಲು ತೂರಲಾಗಿದೆ.

ಮಂಡ್ಯ, ಸೆಪ್ಟೆಂಬರ್ 08: ಮದ್ದೂರಿನ (Maddur) ರಾಮ್ ರಹೀಮ್ ನಗರದಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿಯಿಂದಲೇ ಕಲ್ಲು ತೂರಾಟ (Stone Pelting) ಮಾಡಿರುವ ಆರೋಪ ಕೇಳಿಬಂದಿದೆ. ಸದ್ಯ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟ ಮಾಡಲಾಗುತ್ತಿದೆ. ಮಸೀದಿ ಮುಂದೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ಉಂಟಾಗಿದ್ದು, ಈ ವೇಳೆ ಕೆಲ ಕಿಡಿಗೇಡಿಗಳಿಂದಲೂ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ ಪೊಲೀಸರು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ಸದ್ಯ ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಭುಗಿಲೆದಿದೆ. ಒಂದ್ಕಡೆ ಪೊಲೀಸರ ಜೊತೆಗೆ ವಾಗ್ವಾದ ನಡೆದಿದ್ದರೆ, ಮತ್ತೊಂದು ಕಡೆ ಯುವಕರ ಗುಂಪು ರಸ್ತೆಯಲ್ಲೇ ಕುಳಿತು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಮಸೀದಿ ಮುಂದೆ ಡಿಜೆ ಹಾಕಿ ಗಣಪತಿ ಮೆರವಣಿಗೆ ಮಾಡಿದ್ದಾರೆ.
ಇದನ್ನೂ ಓದಿ: ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ನಾಲ್ವರು ಹೋಂಗಾರ್ಡ್ಗಳು ಸೇರಿ ಎಂಟು ಜನರಿಗೆ ಗಾಯ
ಈ ವೇಳೆ ಮಸೀದಿ ಜಾಗ ಬಿಟ್ಟು ಹೋಗುವಂತೆ ಪೊಲೀಸರು ಹೇಳಿದ್ದಾರೆ. ಹೀಗಿದ್ದರೂ ಘೋಷಣೆ ಕೂಗುತ್ತ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಎಲ್ಲರೂ ಓಡಿ ಹೋಗಿದ್ದಾರೆ.
ಹಲವರಿಗೆ ಗಾಯ, ಬೈಕ್ಗಳು ಜಖಂ
ಇನ್ನು ಪೊಲೀಸರ ಲಾಠಿಚಾರ್ಜ್ ವೇಳೆ ಓಡುವಾಗ ಕೆಳಗೆ ಬಿದ್ದ ಪ್ರತಿಭಟನಾನಿರತ ಹಲವರಿಗೆ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವು ಮಹಿಳೆಯರಿಗೂ ಗಾಯಗಳಾಗಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಹಲವು ಬೈಕ್ಗಳು ಕೂಡ ಜಖಂಗೊಂಡಿವೆ.
ಸಚಿವ ಚಲುವರಾಯಸ್ವಾಮಿ ಹೇಳಿದ್ದಿಷ್ಟು
ಟಿವಿ9ಗೆ ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ಕೇಸ್ ದಾಖಲಿಸಿದ 21 ಜನರ ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ್ರೂ ಬಿಜೆಪಿ ಮನಸ್ಥಿತಿ ಏಕೆ ಈ ರೀತಿ ಇದೆ. ಬಿಜೆಪಿ, ಅಲ್ಲಿನ ಸಂಘಟನೆಯನ್ನು ಕೋಮು ಮನಸ್ಥಿತಿ ಬಿಡಲಿ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆಗೂ ಚರ್ಚೆ ಮಾಡಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಿಎಂ ಚರ್ಚೆ ಮಾಡ್ತಿದ್ದಾರೆ ಎಂದಿದ್ದಾರೆ.
ಘಟನೆ ಹಿನ್ನಲೆ
ನಿನ್ನೆ ಸಂಜೆ 7.30ರ ಹೊತ್ತಿಗೆ ಮಂಡ್ಯದ ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ಗಣಪತಿ ವಿಸರ್ಜನೆ ಮೆರವಣಿಗೆ ನಡೆಸುತ್ತಿದ್ದರು. ಬೀದಿ ಬೀದಿಯಲ್ಲಿ ಮೆರವಣಿಗೆ ಮೂಲಕ ಬಂದ ಗಣಪ ಇನ್ನೇನು ಮಸೀದಿ ಮುಂದೆ ಹಾದುಹೋಗಬೇಕಿತ್ತು. ಈ ವೇಳೆ ದಿಢೀರ್ ಲೈಟ್ ಆಫ್ ಮಾಡಿ ಮಸೀದಿಯಿಂದ ಕಲ್ಲು ತೂರಾಟ ನಡೆಸಲಾಗಿದೆಯಂತೆ. ಅಲ್ದೇ ದೊಣ್ಣೆಗಳನ್ನ ಕೂಡ ಎಸೆದಿದ್ದಾರೆ ಅಂತಾ ಆರೋಪಿಸಲಾಗಿದೆ. ನಾಲ್ವರು ಹೋಂಗಾರ್ಡ್ಗಳು ಸೇರಿ 8 ಜನರು ಗಾಯಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:26 am, Mon, 8 September 25







