Mandya violence: ನಾಗಮಂಗಲದಲ್ಲಿ ಕೋಮು ಗಲಭೆಯಾಗಿಲ್ಲ, ಆಕಸ್ಮಿಕ ಘಟನೆ: ಗೃಹ ಸಚಿವ ಪರಮೇಶ್ವರ್

|

Updated on: Sep 12, 2024 | 10:58 AM

ನಾಗಮಂಗಲದಲ್ಲಿ ಸಂಭವಿಸಿದ ಹಿಂಸಾಚಾರದ ಬಗ್ಗೆ ಕರ್ನಾಟಕದ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ. ನಾಗಮಂಗಲದಲ್ಲಿ ಕೋಮು ಗಲಭೆ ಸಂಭವಿಸಿಲ್ಲ, ಅದು ಆಕಸ್ಮಿಕ ಘಟನೆ ಎಂದ ಅವರು, ರಾಜಕೀಯ ಮಾಡಬೇಡಿ ಎಂದು ಪ್ರತಿಪಕ್ಷ ಬಿಜೆಪಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 12: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಗಲಭೆ ಪ್ರಕರಣದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ಅಲ್ಲಿ ಕೋಮು ಗಲಭೆಯಾಗಿಲ್ಲ ಆಕಸ್ಮಿಕ ಘಟನೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಅದು ಕೋಮು ಗಲಭೆ ಅಲ್ಲ, ಆಕಸ್ಮಿಕವಾಗಿ ನಡೆದಿರುವ ಘಟನೆ. ಒಬ್ಬರಿಗೊಬ್ಬರು ಘರ್ಷಣೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಗಲಾಟೆ ವೇಳೆ ಬೈಕ್​ಗಳು, ಅಂಗಡಿಗೆ ಬೆಂಕಿ ಹಾಕಿದ್ದಾರೆ. ಗಣೇಶ ವಿಸರ್ಜನೆ ವೇಳೆ ಯಾರೋ ಕಲ್ಲು ತೂರಾಟ ಮಾಡಿದ್ದಾರೆ. ಅದಕ್ಕೆ ಈ ಕಡೆಯಿಂದಲೂ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಸದ್ಯ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ನಾಗಮಂಗಲ ಘಟನೆ ಸಂಬಂಧ ಸುಮಾರು 52 ಜನರನ್ನು ಬಂಧಿಸಲಾಗಿದೆ. ಕಲ್ಲು ತೂರಾಟ ವೇಳೆ ಒಬ್ಬ ಎಎಸ್​ಐಗೂ ಗಾಯವಾಗಿದೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

ರಾಜಕೀಯ ಮಾಡಬೇಡಿ: ಬಿಜೆಪಿ ನಾಯಕರಿಗೆ ಮನವಿ

ಗಣೇಶ ವಿಸರ್ಜನೆ ವೇಳೆ ಗಲಭೆ ಪ್ರಕರಣ ಸಂಬಂಧ ನಾಗಮಂಗಲಕ್ಕೆ ಬಿಜೆಪಿ ನಾಯಕರ ನಿಯೋಗ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ. ರಾಜಕೀಯ ಮಾಡಬೇಡಿ ಎಂದು ನಾನು ಬಿಜೆಪಿ ನಾಯಕರಲ್ಲಿ ಮನವಿ ಮಾಡುತ್ತೇನೆ. ಅವರು ಕಾನೂನಾತ್ಮಕವಾಗಿ ಸಲಹೆ ಕೊಡಲಿ. ಎಡಿಜಿಪಿ ಹೋಗಿದ್ದಾರೆ, ಅವಶ್ಯಕತೆ ಇದ್ದರೆ ನಾನು ಹೋಗುತ್ತೇನೆ ಎಂದರು.

ಇದನ್ನೂ ಓದಿ: ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದಿದ್ದೇನು? ಇಲ್ಲಿದೆ ಸಮಗ್ರ ಮಾಹಿತಿ

ಈ ಮಧ್ಯೆ, ನಾಗಮಂಗಲಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಭೇಟಿ ನೀಡಿದ್ದಾರೆ. ಡಿಸಿ ಡಾ. ಕುಮಾರ್, ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಜೊತೆ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರತ್ಯೇಕ್ಷ ಕೊಠಡಿಯಲ್ಲಿ ಮಾತುಕತೆ ನಡೆಸಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ನಂತರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:56 am, Thu, 12 September 24