ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ಗುಡ್ ನ್ಯೂಸ್: ಒಟಿಎಸ್ ನವೆಂಬರ್ 30ಕ್ಕೆ ವಿಸ್ತರಣೆ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ಮತ್ತೊಮ್ಮೆ ಶುಭ ಸುದ್ದಿ ನೀಡಿದೆ. ಎರಡನೇ ಬಾರಿಗೆ ಒನ್-ಟೈಮ್ ಸೆಟ್ಲ್‌ಮೆಂಟ್ ಗಡುವು ವಿಸ್ತರಣೆ ಮಾಡಿದೆ. ಈ ಮೂಲಕ ವಾರ್ಷಿಕ ಆದಾಯದ 5,200 ಕೋಟಿ ರೂ. ಗುರಿ ತಲುಪಲು ಬಿಬಿಎಂಪಿ ಉದ್ದೇಶಿಸಿದೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ಗುಡ್ ನ್ಯೂಸ್: ಒಟಿಎಸ್ ನವೆಂಬರ್ 30ಕ್ಕೆ ವಿಸ್ತರಣೆ
ಬಿಬಿಎಂಪಿ
Follow us
Ganapathi Sharma
|

Updated on: Sep 12, 2024 | 10:18 AM

ಬೆಂಗಳೂರು, ಸೆಪ್ಟೆಂಬರ್ 12: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಒಂದು ಬಾರಿ ಪಾವತಿ ಮಾಡಲು ನೀಡಿರುವ (ಒನ್-ಟೈಮ್ ಸೆಟ್ಲ್‌ಮೆಂಟ್ / ಒಟಿಎಸ್) ಅವಕಾಶದ ಗಡುವನ್ನು ರಾಜ್ಯ ಸರ್ಕಾರ ಎರಡನೇ ಬಾರಿ ವಿಸ್ತರಣೆ ಮಾಡಿದೆ. ಗಡುವನ್ನು ನವೆಂಬರ್ 30 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಫೆಬ್ರವರಿಯಲ್ಲಿ ಪ್ರಾರಂಭಿಸಲಾದ ಒಟಿಎಸ್ ಯೋಜನೆಯು ಬಾಕಿಯ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಮೂಲಕ ಮತ್ತು ದಂಡವನ್ನು ಶೇ 50 ರಷ್ಟು ಕಡಿಮೆ ಮಾಡುವ ಮೂಲಕ ತೆರಿಗೆ ಬಾಕಿ ಇರಿಸಿಕೊಂಡಿರುವವರಿಗೆ ರಿಲೀಫ್ ನೀಡಿದೆ. ಮೊದಲ ಬಾರಿಗೆ ಜುಲೈ ವರೆಗೆ ಒಟಿಎಸ್​ಗೆ ಅವಕಾಶ ನೀಡಲಾಗಿತ್ತು. ನಂತರ ಯೋಜನೆಯನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಯಿತು. ಇದೀಗ ನವೆಂಬರ್ 30 ಕ್ಕೆ ಗಡುವು ವಿಸ್ತರಣೆ ಮಾಡಲಾಗಿದೆ.

ಒಟಿಎಸ್ ಮೂಲಕ ಬಿಬಿಎಂಪಿ ವಾರ್ಷಿಕ ಆದಾಯದ 5,200 ಕೋಟಿ ರೂ. ಗುರಿ ತಲುಪಲು ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇಲ್ಲಿಯವರೆಗೆ, ಬಿಬಿಎಂಪಿಯು ಒಟಿಎಸ್ ಯೋಜನೆಯ ಮೂಲಕ ಸುಸ್ತಿದಾರರಿಂದ ಸರಿಸುಮಾರು 250 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಜೊತೆಗೆ ಸ್ವಯಂ ಮೌಲ್ಯಮಾಪನ ಯೋಜನೆಯಿಂದ (ಎಸ್‌ಎಎಸ್) 175 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಸುಮಾರು 1.10 ಲಕ್ಷ ತೆರಿಗೆದಾರರು ಬಾಕಿ ಪಾವತಿಸಿದ್ದಾರೆ. 2.70 ಲಕ್ಷ ಮಂದಿ ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯನಗರ: ದಕ್ಷಿಣ ಭಾರತದ ಮೊದಲ ಹವಾ ನಿಯಂತ್ರಿತ ನೆಲ ಮಾಳಿಗೆ ಹೇಗಿದೆ? ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಗ್ರಾಹಕರು ಹೇಳಿದ್ದೇನು?

ಮುಂಬರುವ ತಿಂಗಳುಗಳಲ್ಲಿ, ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯನ್ನು ವಸೂಲಿ ಮಾಡುವ ಪ್ರಯತ್ನಗಳನ್ನು ಹೆಚ್ಚಿಸಲು ಬಿಬಿಎಂಪಿ ಯೋಜಿಸಿದೆ. ಸುಸ್ತಿದಾರರನ್ನು ಗುರುತಿಸಲು ಮನೆ ಮನೆಗೆ ಭೇಟಿ ನೀಡುವುದು ಮತ್ತು ತೆರಿಗೆ ವಿಧಿಸದ ಆಸ್ತಿಗಳಿಗೆ ನೋಟಿಸ್ ನೀಡುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ