ಮಂಡ್ಯ: ಕೆಆರ್‌ಎಸ್ ಭರ್ತಿಯಾಗಲು ಕೇವಲ 1 ಅಡಿ ಮಾತ್ರ ಬಾಕಿ ಉಳಿದಿದೆ. ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ 11 ವರ್ಷಗಳ ಬಳಿಕ ಅಕ್ಟೋಬರ್‌ನಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ತುಂಬಿ ತುಳುಕುತ್ತಿದ್ದು ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗಲು ಕೇವಲ 1 ಅಡಿ ಮಾತ್ರ ಬಾಕಿ ಇದೆ. ಈ ಹಿಂದೆ 2010ರಲ್ಲಿ ಅಕ್ಟೋಬರ್‌ನಲ್ಲಿ ಕೆಆರ್‌ಎಸ್ ಭರ್ತಿಯಾಗಿತ್ತು. ಅಂದು ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಬಾಗಿನ ಅರ್ಪಿಸಿದ್ದರು.
ಸಾಮಾನ್ಯವಾಗಿ ಜುಲೈ, ಆಗಸ್ಟ್ ತಿಂಗಳಲ್ಲಿ ಸಂಪೂರ್ಣವಾಗಿ ಭರ್ತಿಯಾಗುತ್ತಿದ್ದ ಕೆಆರ್ಎಸ್ ಡ್ಯಾಂ, ಮಳೆಯ ಕೊರತೆ ಮತ್ತು ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಈ ಬಾರಿ 3 ತಿಂಗಳು ತಡವಾಗಿ ಭರ್ತಿಯಾಗುತ್ತಿದೆ. ಕೆಆರ್ಎಸ್ ಅಣೆಕಟ್ಟು ಪೂರ್ಣ ಮಟ್ಟ ತಲುಪಲು ಇನ್ನು 1 ಅಡಿ ಬಾಕಿ ಇದ್ದು ಯಾವ ಕ್ಷಣದಲ್ಲಿ ಬೇಕಾದರೂ ಡ್ಯಾಮ್ ತುಂಬಿ ಹರಿಯಬಹುದು.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟ 123.40 ಅಡಿ ತಲುಪಿದೆ. 19,341 ಕ್ಯೂಸೆಕ್ ಒಳ ಹರಿವು ಹಾಗೂ 3535 ಕ್ಯೂಸೆಕ್ ಹೊರ ಹರಿವು ಇದೆ. ಸಾಮಾನ್ಯವಾಗಿ ಜುಲೈನಿಂದ ಆಗಸ್ಟ್ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗುತ್ತವೆ. ಒಮ್ಮೊಮ್ಮೆ ಸೆಪ್ಟೆಂಬರ್ನಲ್ಲಿ ಅಪರೂಪವೆಂಬಂತೆ ಅಕ್ಟೋಬರ್‌ನಲ್ಲಿ ಪೂರ್ಣ ಮಟ್ಟ ತಲುಪುತ್ತೆ.
ಶುಕ್ರವಾರ ಸಿಎಂರಿಂದ ಬಾಗಿನ ಸಮರ್ಪಣೆ
ಮಂಡ್ಯ ಜಿಲ್ಲೆಯ ರೈತರ ಜೀವನಾಡಿ, ಬೆಂಗಳೂರು, ಮೈಸೂರು ನಗರಗಳ ಜನರಿಗೆ ಕುಡಿಯುವ ನೀರು ಪೂರೈಸುತ್ತಿರುವ ಕೆಆರ್ಎಸ್ ಡ್ಯಾಂ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಭರ್ತಿಯಾಗಿದೆ. ಆ ಮೂಲಕ ಬರೋಬ್ಬರಿ 10 ವರ್ಷಗಳ ನಂತರ ಅಕ್ಟೋಬರ್ ತಿಂಗಳಲ್ಲಿ ಭರ್ತಿಯಾಯ್ತು ಎಂಬ ಖ್ಯಾತಿಗೂ ಒಳಗಾಗಿದೆ. ಸಾಮಾನ್ಯವಾಗಿ ಕೆಆರ್ಎಸ್ ಮುಂಗಾರು ಮಳೆಯ ಆರಂಭದ ತಿಂಗಳುಗಳಾ ಜುಲೈ, ಆಗಸ್ಟ್ ನಲ್ಲೇ ಭರ್ತಿಯಾಗುವುದು ವಾಡಿಗೆ ಅಪರೂಪಕ್ಕೊಮ್ಮೆ ಸೆಪ್ಟಂಬರ್ ತಿಂಗಳಲ್ಲೂ ಡ್ಯಾಂ ಭರ್ತಿಯಾಗಿರೊ ಉದಾಹರಣೆ ಇದೆ. ಆದರೆ ಅಕ್ಟೋಬರ್ ತಿಂಗಳಲ್ಲಿ ಭರ್ತಿಯಾಗಿರುವುದು ಅಪರೂಪ 2010 ರ ಅಕ್ಟೋಬರ್ ತಿಂಗಳಲ್ಲಿ ಡ್ಯಾಂ ಭರ್ತಿಯಾಗಿತ್ತು. ಆಗ ರಾಜ್ಯದ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಡ್ಯಾಂಗೆ ಆಗಮಿಸಿ ಕಾವೇರಿ ಮಾತೆಯ ಪೂಜೆ ಸಲ್ಲಿಸಿ ಬಾಗಿನ (bagina) ಸಮರ್ಪಿಸಿದ್ದರು. ಸದ್ಯ ರಾಜ್ಯದ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರಿದ್ದು ಈ ವರ್ಷ ಬಾಗಿನ ಸಮರ್ಪಿಸೊ ಭಾಗ್ಯ ಅವರದ್ದಾಗಿದೆ. ಇದೇ ಶುಕ್ರವಾರ ಅಂದರೆ 29 ರಂದು ಬಾಗಿನ ಸಮರ್ಪಿಸಲಿದ್ದಾರೆ.
ಆಗಸ್ಟ್ ತಿಂಗಳ 11 ರಂದು ಡ್ಯಾಂನಲ್ಲಿ 121 ಗರಿಷ್ಠ ಮಟ್ಟವನ್ನ ಮುಟ್ಟಿತ್ತು. ಆ ವೇಳೆಗೆ ಡ್ಯಾಂ ಇನ್ನೇನು ಭರ್ತಿಯಾಗುತ್ತೆ ಎಂಬ ನಿರೀಕ್ಷೆ ಇತ್ತಾದರೂ ಆ ವೇಳೆಗೆ ಕೊಡಗಿನ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ನದಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲೂ ಕಡಿಮೆಯಾಯ್ತು. ಈ ನಡುವೆ ಆಗಸ್ಟ್ 31 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪಾಲಿನ ಪೈಕಿ ಬಾಕಿ ಉಳಿಸಿಕೊಂಡಿರೊ 30 ಟಿಎಂಸಿ ನೀರು ಹರಿಸುವಂತೆ ಸೂಚಿಸಿತ್ತು. ಪ್ರಾಧಿಕಾರದ ಸೂಚನೆಯಂತೆ ಡ್ಯಾಂನಿಂದ ಪ್ರತೀ ನಿತ್ಯ 10 ಸಾವಿರ ಕ್ಯೂಸೆಕ್ ನೀರನ್ನ ಹರಿಯಬಿಡಲಾಯ್ತು. ಹೀಗಾಗಿಯೇ ಸದ್ಯ ಡ್ಯಾಂನಲ್ಲಿ ನೀರಿನ ಮಟ್ಟ 113 ಅಡಿಗೆ ಕುಸಿದು ಹೋಗಿತ್ತು. ಈ ವರ್ಷ ಡ್ಯಾಂ ಭರ್ತಿಯಾಗೊ ಸಾಧ್ಯತೆ ಕಡಿಮೆ ಎಂದು ಕೊಳ್ಳುತ್ತಿರುವಾಗಲೇ ಇದೇ ತಿಂಗಳ 7 ರಂದು ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರು ಡ್ಯಾಂನ ಕಾವೇರಿ ಪ್ರತಿಮೆ ಬಳಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಜಪ ಹೋಮಗಳನ್ನ ನೆರವೇರಿಸಿದ್ದರು. ಇದಾದ ನಂತರ ಮಳೆ ಆರಂಭವಾಗಿ ಡ್ಯಾಂ ಇಂದು ಭರ್ತಿಯತ್ತ ಸಾಗಿದೆ. ಡ್ಯಾಂ ನಿಂದ ಹೆಚ್ಚಿನ ಪ್ರಮಾಣ ನೀರನ್ನ ಹೊರ ಬಿಡೊ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಫಲಿಸಿದ ಪೂಜೆ; 120 ಅಡಿ ಸನಿಹಕ್ಕೆ ತಲುಪಿದ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ
Published On - 9:46 am, Tue, 26 October 21