ಬಿಜೆಪಿಯವರಿಗೆ ದುಡ್ಡಿನದ್ದೇ ಚಿಂತೆ, ಬಿಜೆಪಿ ನಾಯಕರ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ
ದೇವಾಸ್ಥಾನಕ್ಕೆ ಹಣ ಹಾಕುವುದು ಬಿಡಿ. ನಾವು ನಿಮ್ಮ ಮನೆಯ ಹೆಣ್ಣು ಮಕ್ಕಳನ್ನ ಕಾಪಾಡುತ್ತೇವೆ. ತನು ಮನು ಧನವನ್ನ ನಮಗೆ ನೀಡಿ. ಕವಲೆಂದೆಯಲ್ಲಿ ಆದ ರೀತಿ ಇಲ್ಲಿ ಆಗೋಕೆ ಬಿಡುವುದಿಲ್ಲ. ಬಾಲ ಮುಚ್ಕೊಂಡಿರಬೇಕು ಇಲ್ಲದಿದ್ರೆ ಹೊಸಕಿ ಹಾಕ್ತೇವೆ ಎಂದರು.
ಮಂಡ್ಯ: ಬಿಜೆಪಿಯವರಿಗೆ ದುಡ್ಡಿನದ್ದೇ ಚಿಂತೆ. ಹಣದಿಂದ ಈಗ ಬಿಜೆಪಿಯವರ ಕಣ್ಣು ಮಂಜಾಗಿದೆ. ಬರೀ 2 ಸಾವಿರ ರೂ. ನೋಟೇ ಕಾಣುತ್ತಿದೆ. ಇರೋ ದುಡ್ಡನ್ನು ಎಲ್ಲಿಡೋದು ಅನ್ನೋದೇ ಅವರ ಚಿಂತೆಯಾಗಿದೆ ಎಂದು ಮಂಡ್ಯದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. BJP ಸರ್ಕಾರ ಇದ್ರೂ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗುತ್ತಿದೆ. ಬಿಜೆಪಿಯವರನ್ನು ಆಯ್ಕೆ ಮಾಡಿಕೊಟ್ಟಿರೋದು ನಾವು. ಹಿಂದುತ್ವ, ಗೋಮಾತೆ, ಮತಾಂತರ ಅವರಿಗೆ ಕಾಣ್ತಿಲ್ಲ. ಎಂಎಲ್ಎ (MLA) ಎಂಪಿ (MP) ಮಂತ್ರಿ ಆಗೋದು ಹೇಗೆ ಅನ್ನೋದೇ ಅವರ ಚಿಂತೆಯಾಗಿದೆ. ದೇಶ, ಧರ್ಮಕ್ಕೋಸ್ಕರ ನಿಮ್ಮನ್ನು ಆರಿಸಿ ಕಳಿಸಿದ್ದು, ಬೆವರು, ರಕ್ತ ಸುರಿಸಿದ ಕಾರ್ಯಕರ್ತರು ನೆನಪಾಗ್ತಿಲ್ವಾ ಎಂದು ಗುಡುಗಿದ್ದಾರೆ.
ಬಿಜೆಪಿ ಸರ್ಕಾರ ಹಿಂದೂ ಸಂಘಟನೆಗಳಿಂದ ಗದ್ದುಗೆ ಏರಿದೆ. ಬಿಜೆಪಿ ಸರ್ಕಾರ ಆ ಹಿಂದುತ್ವವನ್ನು ಮರೆಯಬಾರದು. ಬರೀ ದುಡ್ಡು ದುಡ್ಡು ಎಂದು ಸಾಯಬೇಡಿ. ನಮ್ಮ ಧರ್ಮ ಉಳಿಸಲು ಸ್ವಲ್ಪ ಗಮನ ಕೊಡಿ. ನಿಮ್ಮ ಕೈಯಲ್ಲಿ ಆಗಲ್ಲ ಅಂದರೆ ಹೇಳಿ ನಾವು ಮಾಡುತ್ತೇವೆ. ಆದ್ರೆ ನಮಗೆ ತೊಂದ್ರೆ ಕೊಟ್ಟರೆ ನಿಮ್ಮ ಬುಡ ಅಲ್ಲಾಡುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಹಾಕಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮುಸ್ಲಿಮರನ್ನ ತಲೆ ಮೇಲೆ ಇಟ್ಕೊಂಡಿವೆ. ಕವಲಂದೆ ಗ್ರಾಮದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ. ಪಾಕ್ ಪರ ಹೇಳಿಕೆ ನೀಡಿರುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಹೇಳಿದರು. ದೇವಾಸ್ಥಾನಕ್ಕೆ ಹಣ ಹಾಕುವುದು ಬಿಡಿ. ನಾವು ನಿಮ್ಮ ಮನೆಯ ಹೆಣ್ಣು ಮಕ್ಕಳನ್ನ ಕಾಪಾಡುತ್ತೇವೆ. ತನು ಮನು ಧನವನ್ನ ನಮಗೆ ನೀಡಿ. ಕವಲೆಂದೆಯಲ್ಲಿ ಆದ ರೀತಿ ಇಲ್ಲಿ ಆಗೋಕೆ ಬಿಡುವುದಿಲ್ಲ. ಬಾಲ ಮುಚ್ಕೊಂಡಿರಬೇಕು ಇಲ್ಲದಿದ್ರೆ ಹೊಸಕಿ ಹಾಕ್ತೇವೆ ಎಂದರು.
ನಾಳೆಯಿಂದ ಮಸೀದಿಗಳ ಬಳಿಯ ದೇಗುಲಗಳಲ್ಲಿ ಹನುಮಾನ್ ಚಾಲೀಸಾ
ಕಲಬುರಗಿ: ಮಸೀದಿಗಳಲ್ಲಿ ಸೌಡ್ ಸ್ಪೀಕರ್ ಬಳಸಿ ಆಜಾನ್ ಕೂಗುವ ಪದ್ಧತಿಯನ್ನು ವಿರೋಧಿಸುತ್ತಿರುವ ಶ್ರೀರಾಮಸೇನೆಯು ಮೇ 9ರಿಂದ ಮಸೀದಿಗಳ ಸಮೀಪದ ದೇಗುಲಗಳಲ್ಲಿ ಹನುಮಾನ್ ಚಾಲೀಸ ಮತ್ತು ಭಜನೆಗಳನ್ನು ಲೌಡ್ಸ್ಪೀಕರ್ಗಳಲ್ಲಿ ಮೊಳಗಿಸುವುದಾಗಿ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಆಟೊ ನಿಲ್ದಾಣ ಬಳಿಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಹಾಕಲಾಗುವುದು. ಮಧ್ಯಾಹ್ನ 12ರಿಂದ 2 ಗಂಟೆಯವರಗೆ ಭಜನೆ, ಹನುಮಾನ ಚಾಲಿಸಾ ಪಠಿಸಲಾಗುವುದು. ಮಸೀದಿ ಮೇಲಿನ ಧ್ವನಿವರ್ಧಕ ತೆರವುಗೊಳಿಸದೇ ಇರುವುದರಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಏನಾದರೂ ಅನಾಹುತವಾದರೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಸಿದ್ದಲಿಂಗ ಸ್ವಾಮಿಜಿ ಎಚ್ಚರಿಕೆ ನೀಡಿದರು.
ಮಸೀದಿಗಳಲ್ಲಿ ಆಜಾನ್ ಮೊಳಗಿಸಲು ಲೌಡ್ಸ್ಪೀಕರ್ ಬಳಸುವುದನ್ನು ವಿರೋಧಿಸುತ್ತಿರುವ ಶ್ರೀರಾಮಸೇನೆ, ಸುಪ್ರೀಂಕೋರ್ಟ್ ತೀರ್ಪು ಜಾರಿ ಮಾಡಲು ನೀಡಿದ್ದ ಗಡುವಿಗೆ ಇನ್ನೊಂದು ದಿನ ಮಾತ್ರ ಬಾಕಿಯಿದೆ. ನಾಳೆಯಿಂದ ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿ ರಾಮಮಂತ್ರ, ಹನುಮಾನ್ ಚಾಲೀಸದ ಜೊತೆಗೆ ವೇದಮಂತ್ರಗಳನ್ನು ಮೊಳಗಿಸಲು ಶ್ರೀರಾಮಸೇನೆ ಮತ್ತು ಇತರ ಹಿಂದುತ್ವಪರ ಸಂಘಟನೆಗಳು ಮುಂದಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಪೂರ್ವನಿಗದಿಯಂತೆ 9ರಿಂದ ದೇವಸ್ಥಾನಗಳಲ್ಲೂ ಲೌಡ್ ಸ್ಪೀಕರ್ ಅಳವಡಿಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.