ಪ್ರೀತಂ ಗೌಡರನ್ನು ಪಾದಯಾತ್ರೆಯಿಂದ ದೂರವಿಡುತ್ತೇವೆ, ಮೈತ್ರಿಗೂ ಅವರಿಗೂ ಸಂಬಂಧವಿಲ್ಲ: ಪುಟ್ಟರಾಜು

| Updated By: Ganapathi Sharma

Updated on: Aug 08, 2024 | 12:58 PM

ಸಿಎಂ ಸಿದ್ದರಾಮಯ್ಯ ವಿರುದ್ಧ ರಣಕಹಳೆ ಊದಿರುವ ಬಿಜೆಪಿ ಜೆಡಿಎಸ್ ನಾಯಕರ ಮಧ್ಯೆಯೇ ಸಂಘರ್ಷ ಏರ್ಪಟ್ಟಿದೆ. ಅದ್ಧೂರಿಯಾಗಿ ಸಾಗುತ್ತಿರುವ ಪಾದಯಾತ್ರೆಯಲ್ಲಿ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಎಂಟ್ರಿಯಿಂದ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಈ ಬಗ್ಗೆ ಜೆಡಿಎಸ್ ಮಾಜಿ ಶಾಸಕ ಸಿಎಸ್ ಪುಟ್ಟರಾಜು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

ಪ್ರೀತಂ ಗೌಡರನ್ನು ಪಾದಯಾತ್ರೆಯಿಂದ ದೂರವಿಡುತ್ತೇವೆ, ಮೈತ್ರಿಗೂ ಅವರಿಗೂ ಸಂಬಂಧವಿಲ್ಲ: ಪುಟ್ಟರಾಜು
ಪುಟ್ಟರಾಜು & ಪ್ರೀತಂ ಗೌಡ
Follow us on

ಮಂಡ್ಯ, ಆಗಸ್ಟ್ 8: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ ಮಂಡ್ಯ ತಲುಪುತ್ತಿದ್ದಂತೆ ಸಂಘರ್ಷಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಪಾದಯಾತ್ರೆಗೆ ಆಗಮಿಸಿರುವುದು ಬಿಜೆಪಿ ಜೆಡಿಎಸ್ ಕಾರ್ಯಕರ್ತರ ನಡುವಣ ಸಂಘರ್ಷಕ್ಕೆ ಕಾರಣವಾಗಿದೆ. ಬುಧವಾರ ಉಭಯ ಪಕ್ಷಗಳ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದರು. ಇದೀಗ ಗುರುವಾರ ಬೆಳಗ್ಗೆ ಪ್ರೀತಂ ಗೌಡ ಫ್ಲೆಕ್ಸ್​ಗೆ ಬೆಂಕಿ ಹಚ್ಚಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಪ್ರೀತಂ ಗೌಡರನ್ನು ಪಾದಯಾತ್ರೆಯಿಂದ ದೂರವಿಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಮಾಜಿ ಶಾಸಕ ಸಿಎಸ್ ಪುಟ್ಟರಾಜು ತಿಳಿಸಿದ್ದಾರೆ.

ಮಂಡ್ಯದಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ಪುಟ್ಟರಾಜು, ಪ್ರೀತಂ ಗೌಡರಿಗೂ ಬಿಜೆಪಿ ಜೆಡಿಎಸ್ ಮೈತ್ರಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಅಭಿಪ್ರಾಯವನ್ನು ಬಿಜೆಪಿ ನಾಯಕರಿಗೆ ತಿಳಿಸಿದ್ದೇವೆ. ಯಾವುದೇ ರೀತಿಯಲ್ಲೂ ಮೈತ್ರಿಗೆ ಭಂಗವಿಲ್ಲ. ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಸಮಾವೇಶ ಮಾಡುತ್ತೇವೆ ಎಂದು ತಿಳಿಸಿದರು.

ನಿನ್ನೆ ‘ಗೌಡರ’ ಗದ್ದಲ; ಇಂದು ‘ಬೆಂಕಿ’ ರಾಜಕೀಯ

ನಬಿಜೆಪಿ ಜೆಡಿಎಸ್ ಪಾದಯಾತ್ರೆ ಐದು ದಿನ ಮುಗಿಸಿ ಆರನೇ ದಿನಕ್ಕೆ ಕಾಲಿಟ್ಟಿದ್ದು, ನಾಳೆ ಮೈಸೂರಿಗೆ ಎಂಟ್ರಿ ಕೊಟ್ಟು ಸರ್ಕಾರದ ವಿರುದ್ಧ ಗರ್ಜಿಸಲು ಕಮಲ ದಳ ನಾಯಕರು ಸಜ್ಜಾಗಿದ್ದಾರೆ. ಆದರೆ, ಇದೇ ಹೊತ್ತಲ್ಲಿ ಪಾದಯಾತ್ರೆಗೆ ಪ್ರೀತಂಗೌಡ ಆಗಮಿಸಿರುವುದು, ದೋಸ್ತಿಗಳ ಮಧ್ಯೆ ಕಲಹ ಸೃಷ್ಟಿಸಿದೆ. ಬುಧವಾರ ಮಂಡ್ಯದಲ್ಲಿ ಪ್ರೀತಂಗೌಡ ಪಾದಯಾತ್ರೆಗೆ ಬಂದಾಗ ಬಿಜೆಪಿ ಕಾರ್ಯಕರ್ತರು, ಪ್ರೀಂತಗೌಡರನ್ನ ಮೇಲೆ ಹೊತ್ತುಕೊಂಡು, ಅವರ ಪರ ಘೋಷಣೆ ಕೂಗಿದ್ದರು. ಹೀಗೆ ಪ್ರೀತಂ ಪರ ಘೋಷಣೆ ಮೊಳಗಿದ್ದೇ ತಡ, ಜೆಡಿಎಸ್​ ಕಾರ್ಯಕರ್ತರು ಅವರನ್ನ ತಡೆಯಲು ಮುಂದಾದರು. ಆಗ ದೊಡ್ಡ ವಾಗ್ವಾದವೇ ನಡೆಯಿತು. ಅಷ್ಟೇ ಅಲ್ಲ, ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟವೂ ನಡೆಯಿತು.

ಇದನ್ನೂ ಓದಿ: ಮೈಸೂರು-ಬೆಂಗಳೂರು ಹೆದ್ದಾರಿ ಅಂಡರ್ ಪಾಸ್​ನಲ್ಲಿ ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್​ಗಳಿಗೆ ಬೆಂಕಿ

ಈ ಮಧ್ಯೆ, ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಸಮೀಪ ಪ್ರೀತಂ ಗೌಡ ಭಾವಚಿತ್ರವಿದ್ದ ಫ್ಲೆಕ್ಸ್‌ಗಳಿಗೆ ಬೆಂಕಿ ಹಾಕಲಾಗಿದೆ. ಪೆಟ್ರೋಲ್ ಹಾಕಿ ಫ್ಲೆಕ್ಸ್‌ಗಳನ್ನ ಸುಟ್ಟು ಹಾಕಲಾಗಿದೆ. ಪಾದಯಾತ್ರೆಗೆ ನಾಯಕರನ್ನ ಸ್ವಾಗತಿಸಲು ಫ್ಲೆಕ್ಸ್ ಹಾಕಲಾಗಿತ್ತು. ಈ ಫ್ಲೆಕ್ಸ್‌ನಲ್ಲಿ ಪ್ರೀತಂಗೌಡ ಭಾವಚಿತ್ರ ಹಾಕಿದ್ದಕ್ಕೆ ಬೆಂಕಿ ಹಾಕಲಾಗಿದೆ.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಪುಟ್ಟರಾಜು ಪ್ರತಿಕ್ರಿಯೆ ನೀಡಿದ್ದು, ಪಾದಯಾತ್ರೆ ಬಗ್ಗೆ ಇದ್ದ ಅನುಮಾನಗಳನ್ನು ಹೋಗಲಾಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ