ಬೆಂಗಳೂರು ಸೆ.22: ತಮಿಳುನಾಡಿಗೆ ಮತ್ತೆ ಕಾವೇರಿ ನೀರು (Cauvery) ಹರಿಸುವಂತೆ ಸುಪ್ರೀಂಕೋರ್ಟ್ (Supreme Court) ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ತೀವ್ರಗೊಂಡಿದೆ. ಮಂಡ್ಯ (Mandya) ಜಿಲ್ಲೆಯಲ್ಲಿ ರೈತರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಅಲ್ಲದೇ ಶನಿವಾರ ಮಂಡ್ಯ ಬಂದ್ಗೆ ಕರೆ ನೀಡಿವೆ. ಈ ವಿಚಾರವಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parameshwara) ಮಾತನಾಡಿ ಪ್ರತಿಭಟನೆ ಮಾಡುವುದು ಅವರ ಹಕ್ಕು, ನಮ್ಮದು ತಕರಾರಿಲ್ಲ. ರಾಜ್ಯದ ಹಿತಾಸಕ್ತಿ ರಕ್ಷಣೆ ಮಾಡಲು ಪ್ರತಿಭಟನೆ ಮಾಡಬಹುದು. ಯಾವುದೇ ರೀತಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡುವುದಾಗಲಿ, ಕಾನೂನು ಬಾಹಿರವಾದ ಯಾವುದೇ ಚಟುವಟಿಕೆಗಳು ಮಾಡಬಾರದು ಎಂದು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಆ ರೀತಿಯ ಘಟನೆಗಳು ನಡೆದರೆ ತಡೆಯಲು ಪೊಲೀಸರು ಸಿದ್ಧರಾಗಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳು ಮಾಡಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಅಂತಹ ಘಟನೆ ಸಂಭವಿಸಿದರೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಂಡ್ಯ ನಗರದಲ್ಲಿ ರೈತರ ಪ್ರತಿಭಟನೆಗಳು ಮುಂದುವರೆದಿದ್ದು, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಧರಣಿ ನಡೆಸುತ್ತಿದ್ದಾರೆ. ಈ ಧರಣಿಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಂಸದೆ ಸುಮಲತಾ ಅಂಬರೀಶ್ ಪುತ್ರ, ನಟ ಅಭಿಷೇಕ್ ಅಂಬರೀಶ್, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ. ಮಹೇಶ್ ಜೋಶಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂ ಆದೇಶ; ಮಂಡ್ಯದಲ್ಲಿ ಬುಗಿಲೆದ್ದ ಆಕ್ರೋಶ
ಈ ವೇಳೆ ಮಾತನಾಡಿದ ಡಾ. ಮಹೇಶ್ ಜೋಶಿ ಬರಿದಾಗಿರುವ ಕಾವೇರಿಗೆ ಬರದ ಶಾಸನ ಕೊಟ್ಟಿದ್ದಾರೆ. ಮಾರಣಾಂತಿಕ ತೀರ್ಪು ಕೊಟ್ಟಿದ್ದಾರೆ. ಕಾವೇರಿ ಕೊಳ್ಳದ ಡ್ಯಾಂಗಳು ಬರಿದಾಗುತ್ತಿವೆ. ಮಳೆ ಬರದಿದ್ದರೇ ಬರ ಬರಲಿದೆ. ನಮ್ಮ ರಾಜ್ಯಕ್ಕಿಂತ ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟ ಚೆನ್ನಾಗಿ ಇದೆ. ಇಂತಹ ಪರಿಸ್ಥಿತಿ ನೀರು ಬಿಡಿ ಎನ್ನುತ್ತಿದ್ದಾರೆ. ಕರ್ನಾಟಕಕ್ಕೆ ಬಂದಿರುವ ದುಸ್ಥಿತಿ ಬೇರೆ ಯಾವ ರಾಜ್ಯಕ್ಕೂ ಇಲ್ಲ ಎಂದರು.
ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕದ ವಕೀಲರು ಸಮರ್ಪಕವಾಗಿ ವಾದ ಮಂಡನೆ ಮಾಡಿಲ್ಲ. ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮನವೊಲೀಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬರ ಪ್ರದೇಶಕ್ಕೆ ಹೆಚ್ಚಿನ ಹಣವನ್ನು ವಿನಿಯೋಗ ಮಾಡಲಿ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ