ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂ ಆದೇಶ; ಮಂಡ್ಯದಲ್ಲಿ ಬುಗಿಲೆದ್ದ ಆಕ್ರೋಶ
ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ತೀವ್ರಗೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ರೈತರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಅಲ್ಲದೇ ಶನಿವಾರ ಮಂಡ್ಯ ಬಂದ್‌ಗೆ ಕರೆ ನೀಡಿವೆ.
ಮಂಡ್ಯ ಸೆ.22: ತಮಿಳುನಾಡಿಗೆ (Tamil Nadu) ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ (Supreme Court) ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಕಾವೇರಿ (Cauvery) ನೀರಿಗಾಗಿ ಹೋರಾಟ ತೀವ್ರಗೊಂಡಿದೆ. ಶುಕ್ರವಾರ ಟಿ.ಕೆ.ಹಳ್ಳಿ ಪಂಪ್ಹೌಸ್ ಬಳಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಬೆಂಗಳೂರಿಗೆ ನೀರು ಸರಬರಾಜು ಮಾಡುವ ಟಿ.ಕೆ.ಹಳ್ಳಿ ಪಂಪ್ಹೌಸ್ಗೆ ಮುತ್ತಿಗೆ ಹಾಕಲು ಯತ್ನಿಸಿದರು. ರಾಜಧಾನಿಗೆ ನೀರು ನಿಲ್ಲಿಸಿ ರೈತರ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಗೇಟ್ ಬಳಿ ತಡೆದರು. ಪ್ರತಿಭಟನಾಕಾರರು ಒಳ ನುಗ್ಗದಂತೆ ಬಂದೋಬಸ್ತ್ ಮಾಡಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿರೊ ಅಭಿಷೇಶ್ ಅಂಬರೀಶ್, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಇನ್ನು ಸುಪ್ರೀಂಕೋರ್ಟ್ ಆದೇಶ ಖಂಡಿಸಿ ನಾಳೆ (ಸೆ.23) ರಂದು ಮಂಡ್ಯ ನಗರ ಬಂದ್‌ಗೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ಕೊಟ್ಟಿದೆ.
ಬರಿದಾಗಿರುವ ಕಾವೇರಿಗೆ ಬರದ ಶಾಸನ: ಮಹೇಶ್ ಜೋಶಿ
ಬರಿದಾಗಿರುವ ಕಾವೇರಿಗೆ ಬರದ ಶಾಸನ ಕೊಟ್ಟಿದ್ದಾರೆ. ಮಾರಣಾಂತಿಕ ತೀರ್ಪು ಕೊಟ್ಟಿದ್ದಾರೆ. ಕಾವೇರಿ ಕೊಳ್ಳದ ಡ್ಯಾಂಗಳು ಬರಿದಾಗುತ್ತಿವೆ. ಮಳೆ ಬರದಿದ್ದರೇ ಬರ ಬರಲಿದೆ. ನಮ್ಮ ರಾಜ್ಯಕ್ಕಿಂತ ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟ ಚೆನ್ನಾಗಿ ಇದೆ. ಇಂತಹ ಪರಿಸ್ಥಿತಿ ನೀರು ಬಿಡಿ ಎನ್ನುತ್ತಿದ್ದಾರೆ. ಕರ್ನಾಟಕಕ್ಕೆ ಬಂದಿರುವ ದುಸ್ಥಿತಿ ಬೇರೆ ಯಾವ ರಾಜ್ಯಕ್ಕೂ ಇಲ್ಲ. ಸುಪ್ರೀಂ ಕೋರ್ಟ್ನಲ್ಲಿ ಸಮರ್ಪಕವಾಗಿ ವಾದ ಮಂಡನೆ ಆಗಿಲ್ಲ. ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮನವೊಲೀಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬರ ಪ್ರದೇಶಕ್ಕೆ ಹೆಚ್ಚಿನ ಹಣವನ್ನು ವಿನಿಯೋಗ ಮಾಡಲಿ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದರು.
ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
ಕೆಆರ್‌ಎಸ್ ಡ್ಯಾಂನಲ್ಲಿ ಇಂದಿನ ನೀರಿನ ಮಟ್ಟ 97.02 ಅಡಿ ಇದೆ. ಜಲಾಶಯದ ಗರಿಷ್ಠಮಟ್ಟ 124.80 ಅಡಿ, ಒಳಹರಿವು 5845 ಕ್ಯೂಸೆಕ್, ನಾಲೆ, ನದಿಗೂ ಸೇರಿ 5734 ಕ್ಯೂಸೆಕ್ ಹೊರಹರಿವು ಇದೆ.
ಕೆಆರ್‌ಎಸ್ ಡ್ಯಾಂನಲ್ಲಿ ಬಳಕೆಗೆ ಇರುವ 131 ಗೇಟ್‌ಗಳು ನಾಲ್ಕು ಹಂತಗಳಲ್ಲಿ ನಿರ್ಮಾಣವಾಗಿವೆ. 114 ಅಡಿಯಲ್ಲಿ 48 ಗೇಟ್‌ಗಳು. ಈ ಗೇಟ್‌ಗಳಲ್ಲಿ 124.80 ಅಡಿಯಿಂದ 114 ಅಡಿವರೆಗೆ ನೀರು ಸಂಗ್ರಹಿಸಬಹುದು. 106 ಅಡಿಯಲ್ಲಿ 32 ಗೇಟ್‌ಗಳಿವೆ. ಈ 32 ಅಡಿಯಲ್ಲಿ 114 ರಿಂದ 106 ಅಡಿವರೆಗೆ ನೀರು ಸಂಗ್ರ ಬಿಡಬಹುದು.
ಇದನ್ನೂ ಓದಿ: ಬೆಂಗಳೂರಿಗೆ ಎದುರಾಗಲಿದೆಯಾ ಜಲಕ್ಷಾಮ? ಸಿಲಿಕಾನ್ ಸಿಟಿಗೆ ಪ್ರತಿ ತಿಂಗಳು ಎಷ್ಟು ನೀರು ಬೇಕು?
103 ಅಡಿಯಲ್ಲಿ 48 ಗೇಟ್‌ಗಳಿದ್ದು, ಈ 48 ಗೇಟ್‌ಗಳಲ್ಲಿ 106 ರಿಂದ 103 ಅಡಿಯವರೆಗೆ ನೀರು ಬಿಡಬಹುದು. 60 ಅಡಿಯಲ್ಲಿ 03 ಗೇಟ್‌ಗಳಿದ್ದು, ಈ 03 ಗೇಟ್‌ಗಳಲ್ಲಿ 103ರಿಂದ 65 ಅಡಿಯವರೆಗೆ ನೀರು ಬಿಡಬಹುದು. 65 ಅಡಿಯಿಂದ ಕೆಳಗೆ ಬಂಡೆ ಇರುವ ಕಾರಣವಾಗಿ ಡ್ಯಾಂನಿಂದ ನೀರು ಹರಿಸಲು ಸಾಧ್ಯವಿಲ್ಲ. 65 ಅಡಿಯ ಕೆಳಗೆ ಇರುವ ನೀರನ್ನು ಸ್ವಲ್ಪ ಮಾತ್ರ ಕುಡಿಯಲು ಬಳಸಬಹುದು. ಉಳಿಯುವ 5 ಟಿಎಂಸಿ ನೀರನ್ನು ಬಳಕೆ ಮಾಡಲು ಸಾಧ್ಯವಿಲ್ಲ, ಇದು ಡೆಡ್ ಸ್ಟೋರೇಜ್ ಆಗಿರುತ್ತೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Fri, 22 September 23