ಸುಮಲತಾ ಅಂಬರೀಶ್ ನನ್ನ ಸ್ನೇಹಿತನ ಅಗಲುವಿಕೆಯನ್ನು ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ: ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿ

ನನ್ನ ಹೇಳಿಕೆಯನ್ನು ಅವರು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಎಷ್ಟು ದಿನಗಳ ತನಕ ಅನುಕಂಪ ವರ್ಕೌಟ್​ ಆಗಲಿದೆ ಎಂದು ನೋಡಬೇಕಿದೆ. ನಾನೊಬ್ಬ ಹೆಣ್ಣುಮಗಳು ಎಂದು ಪದೇಪದೆ ಹೇಳುತ್ತಾರೆ. ನೀವೀಗ ಕೇವಲ ಹೆಣ್ಣುಮಗಳಲ್ಲ, ಮಂಡ್ಯ ಕ್ಷೇತ್ರದ ಸಂಸದೆ. ಹೆಣ್ಣು ಅಥವಾ ಗಂಡು ಯಾರೇ ಆದರೂ ಸಂಸದರು ಒಂದೇ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಸುಮಲತಾ ಅಂಬರೀಶ್ ನನ್ನ ಸ್ನೇಹಿತನ ಅಗಲುವಿಕೆಯನ್ನು ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ: ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್
Follow us
TV9 Web
| Updated By: guruganesh bhat

Updated on:Jul 05, 2021 | 3:53 PM

ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್ ವಿರುದ್ದ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಕೆಆರ್​ಎಸ್ ಆಣೆಕಟ್ಟಿನ ಬಾಗಿಲಿಗೆ ಸುಮಲತಾರನ್ನ ಮಲಗಿಸಿ ಎಂದು ‘ಕೆಆರ್​ಎಸ್​ ಡ್ಯಾಂ ಕಾವಲಿಗೆ ಇರಿಸಿ‘ ಎಂಬರ್ಥದಲ್ಲಿ ಹೇಳಿದ್ದೆ ಎಂದು ಜೆಡಿಎಸ್ ವರಿಷ್ಠರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ದಿಶಾ ಮೀಟಿಂಗ್​ನಲ್ಲಿ ಏಕೆ ಕೆಆರ್​ಎಸ್​ ಡ್ಯಾಂ ಬಗ್ಗೆ ಚರ್ಚೆ ನಡೆಸಿದ್ದಾರೋ ತಿಳಿದಿಲ್ಲ. ಸಂಸದರ ಜವಾಬ್ದಾರಿ ಏನೆಂದು ಅವರು ಅರಿತುಕೊಳ್ಳಬೇಕು. ಮಂಡ್ಯ ಸಂಸದರಾಗಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಒಂದೇ ವಿಚಾರ ಪ್ರಸ್ತಾಪಿಸುವುದು ಬೇಡ. ಹಾಗಾಗಿ ಕೆಆರ್​ಎಸ್ ರಕ್ಷಣೆಗೆ ಅವರನ್ನೇ ಕಳುಹಿಸಿ ಎಂದಿದ್ದೆ. ಅವರು ಏನು ಮಾಡಿದ್ದಾರೆ ಎಂಬುದನ್ನು ಚುನಾವಣೆ ಸಮಯದಲ್ಲಿ ಜನರ ಮುಂದೆ ಇಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಸುಮಲತಾರಿಂದ ನಾನು ಸಂಸ್ಕೃತಿ ಬಗ್ಗೆ ಕಲಿಯಬೇಕಾಗಿಲ್ಲ. ಅವರ ಸಂಸ್ಕೃತಿ ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಅವರ ಪತಿ​ ನಿಧನರಾದಾಗ ಹೇಗೆ ನಡೆದುಕೊಂಡರೆಂದು ಗೊತ್ತಿದೆ. ಅನುಕಂಪದಿಂದ ಗೆದ್ದಿದ್ದಾರೆ, ಅನುಕಂಪ ಹೆಚ್ಚು ದಿನ ಉಳಿಯಲ್ಲ. ನನ್ನ ಹೇಳಿಕೆಯಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಜನರನ್ನು ಹೆಚ್ಚು ದಿನ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಮಂಡ್ಯ ಕ್ಷೇತ್ರದ ಸ್ವಾಭಿಮಾನದ ಮತ ಏನು ಮಾಡುತ್ತಿದ್ದಾರೆ. ಅವರು ಯಾವಾಗ ಯಾರ ಜತೆ ಏನೇನು ನಡೆಸಿದ್ದಾರೆ ಗೊತ್ತಿದೆ. ಚುನಾವಣೆ ಬಂದಾಗ ಎಲ್ಲವನ್ನೂ ಜನರ ಮುಂದೆ ಇಡುತ್ತೇನೆ. ನನ್ನ ಸ್ನೇಹಿತನ ಅಗಲಿಕೆ ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ ಎಂದು ಅವರು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ.

ನನ್ನ ಹೇಳಿಕೆಯನ್ನು ಅವರು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಎಷ್ಟು ದಿನಗಳ ತನಕ ಅನುಕಂಪ ವರ್ಕೌಟ್​ ಆಗಲಿದೆ ಎಂದು ನೋಡಬೇಕಿದೆ. ನಾನೊಬ್ಬ ಹೆಣ್ಣುಮಗಳು ಎಂದು ಪದೇಪದೆ ಹೇಳುತ್ತಾರೆ. ನೀವೀಗ ಕೇವಲ ಹೆಣ್ಣುಮಗಳಲ್ಲ, ಮಂಡ್ಯ ಕ್ಷೇತ್ರದ ಸಂಸದೆ. ಹೆಣ್ಣು ಅಥವಾ ಗಂಡು ಯಾರೇ ಆದರೂ ಸಂಸದರು ಒಂದೇ. ಚುನಾವಣೆ ವೇಳೆ ಸ್ವಾಭಿಮಾನದ ಹೆಸರಿನಲ್ಲಿ ಮತಯಾಚನೆ ಮಾಡಿದ್ದೀರಿ. ‘ಸ್ವಾಭಿಮಾನದ ಭಿಕ್ಷೆ ನೀಡಿ’ ಎಂದು ಸೆರಗೊಡ್ಡಿ ಕೇಳಿದ್ದೀರಿ. ಗೆದ್ದ ಮೇಲೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನೀವು ನೀಡಿದ ಕೊಡುಗೆ ಏನು? ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಟೀಕಾಬಾಣ ಪ್ರಯೋಗಿಸಿದ್ದಾರೆ.

ಅಧಿಕಾರ ಯಾರಿಗೂ ಶಾಶ್ವತವಲ್ಲ, ಅವಕಾಶ ಬಳಸಿಕೊಳ್ಳಿ. ನಿಮ್ಮನ್ನು ಗೆಲ್ಲಿಸಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡಿ. ಚುನಾವಣೆ ಸಂದರ್ಭದಲ್ಲಿ ಜನರ ಮುಗ್ಧತೆ, ಸ್ವಾಭಿಮಾನಕ್ಕೆ ಎಲ್ಲಿ ಧಕ್ಕೆ ಆಗಿದೆ ಎಂಬುದನ್ನು ಜನರ ಮುಂದಿಡುವೆ. ಯಾರ ಜತೆ ಏನೆಲ್ಲ ಮಾಡಿದ್ದಾರೆಂದು ದಾಖಲೆ ಮುಂದಿಡುವೆ. ನನ್ನ ಸ್ನೇಹಿತ ತೀರಿಕೊಂಡಾಗ ಸರ್ಕಾರದ ವತಿಯಿಂದ ಗೌರವ ಸಲ್ಲಿಸಲಾಗಿತ್ತು. ಬೇರೆ ಯಾರೇ ಆಗಿದ್ದರೂ ಅಷ್ಟು ಗೌರವ ಸಿಗುತ್ತಿರಲಿಲ್ಲ. ಮಂಡ್ಯ ಜಿಲ್ಲೆಯ ಮೇಲಿನ ಅಭಿಮಾನದಿಂದ ಗೌರವ ಸಲ್ಲಿಸಿದ್ದೆ. ಸಂಸದರಾಗಿ ಹೇಗೆ ಕೆಲಸ ಮಾಡಬೇಕೆಂದು ಕಲಿತುಕೊಳ್ಳಬೇಕು. ಚುನಾವಣೆ ಅಂದ್ಮೇಲೆ ಸೋಲು ಗೆಲುವು ಸಹಜ ಪ್ರಕ್ರಿಯೆ. ದೇವೇಗೌಡರು, ಅಂಬರೀಶ್, ನಾನು ಎಲ್ಲರೂ ಸೋತಿದ್ದೇವೆ. ಇವರ ಪ್ರಶ್ನೆಗಳಿಗೆ ಚುನಾವಣೆ ಸಂದರ್ಭದಲ್ಲೇ ಉತ್ತರಿಸುವೆ. ಯಾವುದೇ ದಾಖಲೆಗಳಿಲ್ಲದೆ ನಾನು ಮಾತನಾಡುವುದಿಲ್ಲ. ಚುನಾವಣೆ ಬರಲಿ ಎಲ್ಲಾ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಟಿವಿ9 ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

 ಕೆಆರ್​ಎಸ್ ಸೋರುತ್ತಿದ್ದರೆ ಅದರ ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ನಾನು ಮಂಡ್ಯ ಕ್ಷೇತ್ರದ ಜನರಿಗೆ ಉತ್ತರದಾಯಿ, ಕುಮಾರಸ್ವಾಮಿಗಲ್ಲ: ಕುಮಾರಸ್ವಾಮಿ ಲೆವೆಲ್​ಗೆ ಇಳಿದು ಮಾತನಾಡೊಲ್ಲ- ಸುಮಲತಾ

(Former CM HD Kumaraswamy reacts Sumalatha Ambarish used my frieds deaths to become MP)

Published On - 3:44 pm, Mon, 5 July 21