Hijab: ನಾನು ಮತ್ತೆ ಕಾಲೇಜಿಗೆ ಹೋಗುತ್ತೇನೆ, ಹಿಜಾಬ್ ವಿಚಾರಕ್ಕೆ ಸಿಎಂಗೆ ಧನ್ಯವಾದ ತಿಳಿಸಿದ ವಿದ್ಯಾರ್ಥಿನಿ ಮುಸ್ಕಾನ್
ಹಿಜಾಬ್ ಸಂಬಂಧ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಮುಸ್ಲಿಂ ವಿದ್ಯಾರ್ಥಿನಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮಂಡ್ಯ ಮೂಲದ ಬಿ.ಬಿ. ಮುಸ್ಕಾನ್ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮ್ಮದ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಮಂಡ್ಯ, ಡಿ23: ಕೆಲ ವರ್ಷದ ಹಿಂದೆ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಈ ಹಿಜಾಬ್ (Hijab) ಪ್ರಕರಣ ಈಗ ಮತ್ತೆ ಸದ್ದು ಮಾಡುತ್ತಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಹೊಸ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah), ಹಿಜಾಬ್ ಆದೇಶವನ್ನು ಹಿಂಪಡೆಯಲು ಹೇಳಿದ್ದೇನೆ. ಇನ್ನು ಮುಂದೆ ಎಲ್ಲರೂ ಹಿಜಾಬ್ ಹಾಕಿಕೊಂಡು ಹೋಗಬಹುದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಈ ಮಾತು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ವಿಪಕ್ಷ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಮತ್ತೊಂದೆಡೆ ಹಿಜಾಬ್ ನಿಷೇಧದಿಂದಾಗಿ ಕಾಲೇಜು ಬಿಟ್ಟಿದ್ದ ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿದ್ದು ಸಿಎಂ ಸಿದ್ದರಾಮಯ್ಯರಿಗೆ ಧನ್ಯವಾದ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಹೇರುತ್ತಿದ್ದಂತೆ ಅದೆಷ್ಟೂ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿದ್ದರು. ಹಿಜಾಬ್ ಇಲ್ಲದೆ ಆಚೆ ಕಾಲಿಡಬೇಡ ಎಂದು ಅದೆಷ್ಟೋ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದ್ದರು. ಸದ್ಯ ಈಗ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಮುಸ್ಲಿಂ ವಿದ್ಯಾರ್ಥಿನಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮಂಡ್ಯ ಮೂಲದ ಬಿ.ಬಿ. ಮುಸ್ಕಾನ್ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮ್ಮದ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಮತ್ತೆ ನಾನು ಕಾಲೇಜ್ಗೆ ಹೋಗುತ್ತೇನೆ. ನನ್ನ ಓದು ಅರ್ಧಕ್ಕೆ ನಿಂತಿತ್ತು. ಹಿಜಾಬ್ ವಾಪಸ್ ತೆಗೆದುಕೊಂಡಿದ್ದಕ್ಕೆ ತುಂಬಾ ಖುಷಿ ಆಯಿತು. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಜಮೀರ್ ಅಹಮ್ಮದ್ಗೆ ಧನ್ಯವಾದ. ನನಗೆ ಈ ಬಗ್ಗೆ ಭರವಸೆ ಇತ್ತು. ಮತ್ತೆ ನಾನು ಓದನ್ನ ಮುಂದುವರೆಸುವೆ. ಕೋರ್ಟ್ನಲ್ಲಿ ನನಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇದೆ. ಹಿಜಾಬ್ ನಿಷೇಧದಿಂದಾಗಿ ಯಾರೆಲ್ಲ ವಿದ್ಯಾಭ್ಯಾಸ ಅರ್ಥಕ್ಕೆ ಬಿಟ್ಟಿದ್ದಾರೆ. ಅವರು ವಾಪಸ್ ಕಾಲೇಜ್ಗಳಿಗೆ ಬನ್ನಿ. ನಾನು ಕೂಡ ಕಾಲೇಜ್ಗೆ ಹೋಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಧರ್ಮದ ಆಧಾರದಲ್ಲಿ ಯುವ ಜನರನ್ನು ವಿಭಜಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ: ಬಿವೈ ವಿಜಯೇಂದ್ರ ಆಕ್ರೋಶ
ಮಕ್ಕಳ ಶಿಕ್ಷಣದಲ್ಲಿ ರಾಜಕೀಯ ಬೇಡ. ನಾವೆಲ್ಲ ಅಣ್ಣ ತಮ್ಮಂದಿರಂತೆ ಇದ್ದೇವೆ. ಮೊದಲು ನಾವು ಹೇಗೆ ಇದ್ದೆವೊ ಹಾಗೆ ಇರುತ್ತೇವೆ. ನಾವೆಲ್ಲ ಒಟ್ಟಿಗೆ ಇರೋಣ. ಹಿಜಾಬ್ ನಿಷೇಧದಿಂದ ಕೆಲವು ಮಕ್ಕಳಿಗೆ ಶಿಕ್ಷಣದಿಂದ ವಂಚನೆ ಆಗಿದೆ. ಹಿಜಾಬ್ ಗಲಾಟೆಯ ಬಳಿಕ ನಾನು ನನ್ನ ಸ್ನೇಹಿತರ ಜೊತೆ ಸಂಪರ್ಕದಲ್ಲಿ ಇದ್ದೇನೆ. 1 ವರ್ಷದಿಂದ ಬೇರೆ ಕೋರ್ಸ್ ಮಾಡುತ್ತಿದ್ದೆ. ಎಲ್ಲಾರಿಗೂ ಧನ್ಯವಾದ ಹೇಳುತ್ತೇನೆ ಎಲ್ಲಾರು ಒಟ್ಟಾಗಿ ಬಾಲೋಣ ಎಂದು ವಿದ್ಯಾರ್ಥಿನಿ ಮುಸ್ಕಾನ್ ಒಟ್ಟಾಗಿ ಬಾಳುವ ಸಂದೇಶ ರವಾನಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:40 pm, Sat, 23 December 23