Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮದ ಆಧಾರದಲ್ಲಿ ಯುವ ಜನರನ್ನು ವಿಭಜಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ: ಬಿವೈ ವಿಜಯೇಂದ್ರ ಆಕ್ರೋಶ

Hijab Row‌: ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಗೆಗೆ ಅವಕಾಶ ನೀಡುವ ಮೂಲಕ ಸಿದ್ದರಾಮಯ್ಯ ಸರ್ಕಾರವು ಯುವ ಮನಸ್ಸುಗಳನ್ನು ಧಾರ್ಮಿಕವಾಗಿ ಒಡೆಯುವುದನ್ನು ಉತ್ತೇಜಿಸುತ್ತಿದೆ. ಇದು ಅಂತರ್ಗತ ಕಲಿಕೆಯ ವಾತಾವರಣವನ್ನು ತಡೆಯುತ್ತದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧರ್ಮದ ಆಧಾರದಲ್ಲಿ ಯುವ ಜನರನ್ನು ವಿಭಜಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ: ಬಿವೈ ವಿಜಯೇಂದ್ರ ಆಕ್ರೋಶ
ವಿಜಯೇಂದ್ರ
Follow us
TV9 Web
| Updated By: Ganapathi Sharma

Updated on:Dec 23, 2023 | 9:54 AM

ಬೆಂಗಳೂರು, ಡಿಸೆಂಬರ್ 23: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು (Hijab Ban) ಹಿಂಪಡೆಯುವುದಾಗಿ ಘೋಷಿಸಿದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಇದು ‘ತುಷ್ಟೀಕರಣ’ ರಾಜಕಾರಣ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ, ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಿರುವ ಸರ್ಕಾರಿ ಆದೇಶವನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ನಮ್ಮ ಸರ್ಕಾರ ಜನರಲ್ಲಿ ಭೇದಭಾವ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

ಹಿಂದಿನ ಬಿಜೆಪಿ ಸರ್ಕಾರವು ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿತ್ತು.

ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯದಲ್ಲಿ ಯುವ ಮನಸ್ಸುಗಳನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

‘ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವು ನಮ್ಮ ಶೈಕ್ಷಣಿಕ ಸಂಸ್ಥೆಗಳ ಜಾತ್ಯತೀತ ಸ್ವರೂಪದ ಬಗ್ಗೆ ಕಳವಳ ಸೃಷ್ಟಿಸುವಂಥದ್ದು. ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಗೆಗೆ ಅವಕಾಶ ನೀಡುವ ಮೂಲಕ ಸಿದ್ದರಾಮಯ್ಯ ಸರ್ಕಾರವು ಯುವ ಮನಸ್ಸುಗಳನ್ನು ಧಾರ್ಮಿಕವಾಗಿ ಒಡೆಯುವುದನ್ನು ಉತ್ತೇಜಿಸುತ್ತಿದೆ. ಇದು ಅಂತರ್ಗತ ಕಲಿಕೆಯ ವಾತಾವರಣವನ್ನು ತಡೆಯುತ್ತದೆ. ಧಾರ್ಮಿಕ ಆಚರಣೆಗಳ ಪ್ರಭಾವವಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸುವ ವಾತಾವರಣವನ್ನು ನಿರ್ಮಿಸಬೇಕಾದ ಅಗತ್ಯವಿದೆ’ ಎಂದು ವಿಜಯೇಂದ್ರ ಉಲ್ಲೇಖಿಸಿದ್ದಾರೆ.

ಗ್ಯಾರಂಟಿಗಳಿಂದ ಬರಿದಾದ ಖಜಾನೆ, ಜನರ ದಿಕ್ಕು ತಪ್ಪಿಸಲು ಸಿದ್ದರಾಮಯ್ಯ ತಂತ್ರ: ಅಶೋಕ್

‘ಹಿಜಾಬ್ ವಿಷಯ ಹಠಾತ್ ಆಗಿ ಮುನ್ನೆಲೆಗೆ ಬಂದಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೊಡ್ಡ ಕುತಂತ್ರ ಅಡಗಿದೆ. ಗ್ಯಾರೆಂಟಿಗಳಿಂದ ಬರಿದಾದ ಖಜಾನೆ, ಅನುದಾನಕ್ಕಾಗಿ ಶಾಸಕರ ಒತ್ತಡ, ನಿಗಮ ಮಂಡಳಿ ನೇಮಕಕ್ಕೆ ಸೊಪ್ಪು ಹಾಕದ ಹೈಕಮಾಂಡ್ ಇವೆಲ್ಲದರಿಂದ ತಾವೇ ಸೃಷ್ಟಿಸಿಕೊಂಡ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಸಿದ್ದಾಮಯ್ಯನವರು ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಎಕ್ಸ್​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ವರ್ಷ ಹಿಜಾಬ್ ವಿವಾದದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರು ಸರ್ಕಾರದ ನಿರ್ಧಾರವನ್ನು ಕಾನೂನಾತ್ಮಕವಾಗಿ ಎದುರಿಸಲು ಬಿಜೆಪಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇನೆಂದ ಸಿದ್ದರಾಮಯ್ಯ, ಸಿಡಿದೆದ್ದ ಬಿಜೆಪಿ

ಕಳೆದ ಆರು ತಿಂಗಳಿಂದ ಕಾಂಗ್ರೆಸ್ ಸರಕಾರ ಗೊಂದಲದಲ್ಲಿದೆ. ತಮ್ಮ ವೈಫಲ್ಯವನ್ನು ಮರೆಮಾಚಲು ಸಿಎಂ ಇಂತಹ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ ಸರಕಾರ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ಸರಕಾರ ಹಿಜಾಬ್ ಹಿಂಪಡೆದರೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಆಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಧಾರ್ಮಿಕ ನೆಲೆಯಲ್ಲಿ ಬಿರುಕು ಮೂಡಿಸುತ್ತದೆ. ನಿರ್ಧಾರದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ನಾವು ಸಿದ್ಧರಿದ್ದೇವೆ ಎಂದು ಶಾಸಕರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:50 am, Sat, 23 December 23