ಮಂಡ್ಯ, ಜೂ.23: ಅನೈತಿಕ ಸಂಬಂಧಕ್ಕೆ ಮಗನಿಂದಲೇ ದೊಡ್ಡಮ್ಮ ಒಬ್ಬಳು ಭೀಕರವಾಗಿ ಹತ್ಯೆಯಾಗಿರುವ ಘಟನೆ ಮಂಡ್ಯ (Mandya)ದ ಆನೆಕೆರೆ ಬೀದಿ ನಗರದಲ್ಲಿ ನಡೆದಿದೆ. 80 ವರ್ಷದ ಕೆಂಪಮ್ಮ ಮೃತ ವೃದ್ದೆ. ಇನ್ನು 34 ವರ್ಷದ ಹರೀಶ್ ಕೊಲೆ ಆರೋಪಿ. ಅಂದಹಾಗೆ ಆರೋಪಿ ಹರೀಶ್ನ ತಂದೆ ರಾಮಕೃಷ್ಣ ಎಂಬಾತ ಸೆಲೂನ್ ಶಾಪ್ವೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನಂತೆ. ತನ್ನ ಅಣ್ಣ ತೀರಿ ಹೋದ ನಂತರ ರಾಮಕೃಷ್ಣ, ಕೆಂಪಮ್ಮನನ್ನ 25 ವರ್ಷಗಳ ಕೆಳಗೆ ತನ್ನ ಜೊತೆಗೆ ಕರೆದುಕೊಂಡು ಬಂದು ಮನೆಯಲ್ಲಿ ಇಟ್ಟುಕೊಂಡಿದ್ದ. ಇದರಿಂದಾಗಿ ರಾಮಕೃಷ್ಣನ ಹೆಂಡತಿ ಗಂಡನನ್ನ ತೊರೆದು, ಬೆಂಗಳೂರಿನಲ್ಲಿ ಮಗನ ಜೊತೆ ವಾಸವಿದ್ದಳು. ಇದೇ ವಿಚಾರಕ್ಕೆ ಹಲವು ಬಾರಿ ಗಲಾಟೆ ಕೂಡ ನಡೆದಿತ್ತು. ಆದರೆ ನಿನ್ನೆ(ಜೂ.22) ಮಧ್ಯಾಹ್ನ ಕುಡಿದು ಮನೆಗೆ ಬಂದಿದ್ದ ಹರೀಶ್, ಕೆಂಪಮ್ಮಳ ಜೊತೆ ಮಾತಿನ ಚಕಮಕಿ ನಡೆಸಿ, ನಂತರ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಆರೋಪಿ ಹರೀಶ್, ತಂದೆ ರಾಮಕೃಷ್ಣನಿಗೂ ಕಾಲ್ ಮಾಡಿ, ಕೆಂಪಮ್ಮಳನ್ನ ಕೊಲೆ ಮಾಡಿರುವುದಾಗಿ ತಿಳಿಸಿ, ನಂತರ ತಾನೇ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಮೃತ ಕೆಂಪಮ್ಮಳಿಗೆ ಗಂಡ ತೀರಿಹೋದ ನಂತರ ಮೈದುನಾ ರಾಮಕೃಷ್ಣನೇ ಆಸರೆಯಾಗಿದ್ದ. ಮೂವರು ಹೆಣ್ಣು ಮಕ್ಕಳನ್ನ ಬಿಟ್ಟು ಮೈದುನ ರಾಮಕೃಷ್ಣನ ಜೊತೆ
ಕೆಂಪಮ್ಮ ವಾಸವಿದ್ದಳು. ಇನ್ನು ಆರೋಪಿ ಹರೀಶ್ ಸಹ ಇವರ ಜೊತೆಗೆ ವಾಸವಿದ್ದ. ಕೆಲ ಕಾಲ ಕೆಲಸವಿದೆ ಎಂದು ಬೇರೆ ಬೇರೆ ಊರಿಗೆ ತೆರಳುತ್ತಿದ್ದ.
ಇದನ್ನೂ ಓದಿ:ಅನೈತಿಕ ಸಂಬಂಧ: ಮನಬಂದಂತೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
ಈಗಾಗಲೇ ಎರಡು ಮದುವೆಯಾಗಿ ಇಬ್ಬರು ಪತ್ನಿಯನ್ನು ಕೂಡ ಆರೋಪಿ ಹರೀಶ್ ತೊರೆದಿದ್ದಾನೆ. ಸಾಕಷ್ಟು ಕುಡಿತದ ಚಟಕ್ಕೆ ದಾಸನಾಗಿದ್ದ ಹರೀಶ್, ನಿನ್ನೆ ಏಕಾಏಕಿ ಮನೆಗೆ ಬಂದು ತಂದೆ ರಾಮಕೃಷ್ಣ ಕೆಲಸಕ್ಕೆ ಹೋದ ಸಮಯದಲ್ಲಿ ದೊಡ್ಡಮ್ಮನ ಕಥೆಯನ್ನ ಮುಗಿಸಿದ್ದಾನೆ. ಇನ್ನು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಂಡ್ಯ ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿದೆ. ಒಟ್ಟಾರೆ, ಅನೈತಿಕ ಸಂಬಂಧ, ಸಿಟ್ಟು, ಕುಡಿತದ ಚಟದಿಂದಾಗಿ ಸ್ವತಃ ದೊಡ್ಡಮ್ಮಳ ಕಥೆಯನ್ನೇ ಮಗನೊಬ್ಬ ಮುಗಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Sun, 23 June 24