ಸಕ್ಕರೆ ನಗರಿ ಮಂಡ್ಯದಲ್ಲಿ ರೌಡಿ ರಾಜಕಾರಣ ಶುರುವಾಗಿದೆ. ಹತ್ತಾರು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾದ ಪಾತಕಿಗಳು (Rowdy Sheeter) ಈಗ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇಬ್ಬರು ರೌಡಿ ಶೀಟರ್ ಗಳನ್ನ ಶಾಸಕ ಡಿಸಿ ತಮ್ಮಣ್ಣ (DC Thammanna) ರೆಡ್ ಕಾರ್ಪೆಟ್ ಹಾಕಿ ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಅಬ್ಬಬ್ಬಾ ಅದೇನು ಆರ್ಭಟ.. ಕೈಯಲ್ಲಿ ಎಣ್ಣೆ ಬಾಟ್ಲು ಹಿಡ್ಕೊಂಡು ಕ್ಯಾಮರಾ ಮುಂದೆ ಪೋಸು.. ಬುಲೆಟ್ ಬೈಕ್ ಗೆ ಒರಗಿಕೊಂಡು ನಿಂತಿದ್ದಾರೆ ನೋಡಿ ಇವ್ರೆ ಈ ಸ್ಟೋರಿಯ ಖಳನಾಯಕರು. ಹೆಸ್ರು ವರುಣ್ ಗೌಡ ಅಲಿಯಾಸ್ 202 ಹಾಗೂ ಪ್ರಶಾಂತ್ ಅಲಿಯಾಸ್ ಕುಳ್ಳಿ ಅಂತಾ ಮದ್ದೂರು ಪೊಲೀಸ್ ಠಾಣೆಯ ರೌಡಿ ಶೀಟರ್ಸ್… ಕೈಯಲ್ಲಿ ಮಚ್ಚು ಹಿಡ್ದು ನಂದೇ ಫೀಲ್ಡ್ ಎಂದು ಬಿಲ್ಡಪ್ ಕೊಟ್ಕೊಂಡು ಕೈಗೆ ರಕ್ತ ಅಂಟಿಸಿ ಕೊಂಡು ಪೊಲೀಸ್ ಸ್ಟೇಷನು, ಜೈಲು ಅಂತಾ ತಿರುಗಾಡಿದ ಇವ್ರು ಈಗ ರಾಜಕೀಯ ಪ್ರವೇಶ ಮಾಡಿದ್ದಾರೆ.. ಜೆಡಿಎಸ್ ಪಕ್ಷಕ್ಕೆ (Mandya JDS) ಸೇರ್ಕೊಂಡು ಊರು ಉದ್ದಾರ ಮಾಡೋಕೆ ಮುಂದಾಗಿದ್ದಾರೆ (Karnataka Assembly Elections 2023).
ಹೌದು ಮೊನ್ನೆ ಮದ್ದೂರು ಕ್ಷೇತ್ರದ ಹಾಲಿ ಶಾಸಕ ಡಿಸಿ ತಮ್ಮಣ್ಣನವರ ಸಮ್ಮುಖದಲ್ಲಿ ಇವರು ಜೆಡಿಎಸ್ ಪಕ್ಷ ಸೇರಿದ್ದಾರೆ. ತಮ್ಮ ನೂರಾರು ಪಟಾಲಂ ಜೊತೆ ಖಾಸಗಿ ಸಭಾ ಭವನದಲ್ಲಿ ಬಾಡೂಟ ಹಾಕಿಸುವ ಮೂಲಕ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹತ್ತಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್ ಗಳು ಪಕ್ಷ ಸೇರ್ಪಡೆಯಾಗಿದ್ದು ಈಗ ಎಲ್ಲೆಡೆ ಚರ್ಚೆ ಶುರುವಾಗಿದೆ.
ಈ ಕುರಿತು ಟಿವಿ9 ವರದಿ ಬಿತ್ತರಿಸಿದ ಬೆನ್ನಲ್ಲೆ ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.. ತಿಳಿದೊ ತಿಳಿಯದೆಯೋ ಅಚಾತುರ್ಯವಾಗಿದೆ. ನಾವು ಇದನ್ನ ಸರಿಪಡಿಸಿಕೊಳ್ಳುತ್ತೇವೆ.. ತತಕ್ಷಣವೇ ರೌಡಿ ಶೀಟರ್ ಗಳನ್ನ ಪಕ್ಷದ ಸದಸ್ಯತ್ವದಿಂದ ವಜಾ ಮಾಡುತ್ತೇವೆಂದು ಪ್ರತಿಕ್ರಿಯೆ ನೀಡಿದ್ದಾರೆ.
ಅದೇನೆ ಹೇಳಿ ಕ್ರೈಂ ಮಾಡಿ ರಕ್ತ ಕೈಗಂಟಿಸಿ ಕೊಂಡವರೆಲ್ಲಾ ರಾಜಕಾರಣಕ್ಕೆ ಬರ್ತಾಯಿರೋದು ದುರಂತವೇ ಸರಿ.. ಇಂತಹವರನ್ನ ರಾಜ್ಯದ ನಾಯಕರು ರಾಜಕೀಯದಲ್ಲಿ ಬೆಳೆಸದೆ, ಬೆಳೆಯಕ್ಕೆ ಸಹಕಾರ ನೀಡದೆ ದೂರವಿಡಬೇಕಾಗಿದೆ. ಇಲ್ದೆ ಹೋದರೆ ಮತ್ತಷ್ಟು ಪಾತಕಿಗಳು ರಾಜ್ಯ ರಾಜಕಾರಣಕ್ಕೆ ಬಂದು ಕುಲುಗೆಡಿಸೋದ್ರಲ್ಲಿ ಎರಡು ಮಾತಿಲ್ಲ…
ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ