ನಾವು ಬಡವರಿಗಾಗಿ ಕೆಲಸ ಮಾಡಿದರೆ ಕೆಲವರಿಗೆ ಹೊಟ್ಟೆಕಿಚ್ಚು; ವಿಪಕ್ಷಕ್ಕೆ ಚಾಟಿ ಬೀಸಿದ ಸಿಎಂ ಸಿದ್ದರಾಮಯ್ಯ

| Updated By: ಸುಷ್ಮಾ ಚಕ್ರೆ

Updated on: Sep 14, 2024 | 10:33 PM

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಗಗನಚುಕ್ಕಿ ಜಲಪಾತೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮನ್ನು ಟೀಕಿಸುವವರಿಗೆ ನಾವು ಕಳೆದ 1 ವರ್ಷದಲ್ಲಿ ಮಾಡಿದ ಸಾಧನೆಗಳು ಕಾಣುತ್ತಿಲ್ಲ. ನಾವೇನು ಮಾಡಿದ್ದೇವೆ ಎಂಬುದನ್ನು ಜನರ ಬಳಿ ಕೇಳಿದರೆ ಅವರೇ ಹೇಳುತ್ತಾರೆ ಎಂದಿದ್ದಾರೆ.

ನಾವು ಬಡವರಿಗಾಗಿ ಕೆಲಸ ಮಾಡಿದರೆ ಕೆಲವರಿಗೆ ಹೊಟ್ಟೆಕಿಚ್ಚು; ವಿಪಕ್ಷಕ್ಕೆ ಚಾಟಿ ಬೀಸಿದ ಸಿಎಂ ಸಿದ್ದರಾಮಯ್ಯ
ಗಗನ‌ಚುಕ್ಕಿ ಜಲಪಾತೋತ್ಸವ
Follow us on

ಮಂಡ್ಯ: ನಾವು ಜನರಿಗೆ ಕೊಟ್ಟ ಭರವಸೆಗಳನ್ನು ಅಧಿಕಾರಕ್ಕೆ ಬಂದ 1 ವರ್ಷದಲ್ಲಿ ಈಡೇರಿಸಿದ್ದೇವೆ. ಈ ನಿಮ್ಮ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾನೆ. ಪ್ರತಿ ಕುಟುಂಬಕ್ಕೆ ಐದಾರು ಸಾವಿರ ಹಣ ಸಿಗ್ತಾ ಇದೆ. ಎಲ್ಲಾ ಧರ್ಮದ ಜನರಿಗೆ ಹಣ ಸಿಗುತ್ತಿದೆ. ಎಲ್ಲಾ ಮಹಿಳೆಯರು ಬಸ್ಸಿನಲ್ಲಿ ಫ್ರೀಯಾಗಿ ಬಂದಿರ್ತಾರೆ. ಯಾರ ಬಳಿ ಕಾರಿಲ್ಲವೋ ಅವರು ಇಲ್ಲಿಗೂ ಫ್ರೀಯಾಗಿ ಬಸ್​ನಲ್ಲಿ ಬಂದಿದ್ದಾರೆ. ಇವತ್ತಿನವರೆಗೂ 7‌ ಕೋಟಿ ‌87 ಲಕ್ಷ ಜನರು ಬಸ್​ನಲ್ಲಿ ಫ್ರೀ ಆಗಿ ಓಡಾಡಿದ್ದಾರೆ. ಇದು ನಮ್ಮನ್ನು ಟೀಕೆ ಮಾಡೋರಿಗೆ ಕಾಣುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಬಡವರಿಗೆ ಕೆಲಸ ಮಾಡಿದರೆ ಕೆಲವರಿಗೆ ಹೊಟ್ಟೆ ಕಿಚ್ಚು. ಯಾರೂ ಇದರ ಉಪಯೋಗ ಪಡೆದುಕೊಳ್ಳುತ್ತಾ ಇದ್ದಾರೋ ಅವರು ಉತ್ತರ ಕೊಡಬೇಕು. ನಮ್ಮ ವಿರೋಧ ಪಕ್ಷದವರನ್ನು‌ ನಂಬೋದಕ್ಕೆ ಹೋಗ್ಬೇಡಿ. ಅವರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಕಳೆದ ವರ್ಷ ಮಳೆಯಾಗಿರಲಿಲ್ಲ, ಈ ವರ್ಷ ಮಳೆಯಾಗಿದೆ,. ಸಿದ್ದರಾಮಯ್ಯನ ಕಾಲ್ಗುಣ ಚೆನ್ನಾಗಿಲ್ಲ ಅಂತ ಹೇಳಿದ್ರು. ಆದರೆ, ರಾಜ್ಯದ ಎಲ್ಲಾ ನದಿಗಳೂ ತುಂಬಿವೆ. ಈಗ ಯಾರೂ ಮಾತಾಡಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: Nandini Milk Price Hike: ನಂದಿನಿ ಹಾಲಿನ ದರ ಹೆಚ್ಚಳ ಮಾಡುತ್ತೇವೆ: ಮಾಗಡಿಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ನಮಗೆ ಯಾವುದೇ ಜಾತಿ, ಧರ್ಮ ಇಲ್ಲ. ಬಿಜೆಪಿ ಜೆಡಿಎಸ್ ಥರ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಲ್ಲ. ಒಂದೇ ತಾಯಿಯ ಮಕ್ಕಳಂತೆ ಆಡಳಿತ ಮಾಡೋರು ಕಾಂಗ್ರೆಸ್ ನವರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಗಗನಚುಕ್ಕಿ ಜಲಪಾತಕ್ಕೆ 8 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದೇವೆ. ಮುಂದಿನ‌ ದಿನಗಳಲ್ಲಿ‌ ಇನ್ನಷ್ಟು ಹಣವನ್ನು ಖರ್ಚು ಮಾಡುತ್ತೇವೆ. ಪ್ರವಾಸೋದ್ಯಮ ಶಕ್ತಿ ಕರ್ನಾಟಕದಲ್ಲಿದೆ. ಪ್ರವಾಸೋದ್ಯಮದಿಂದ ಬಹಳಷ್ಟು ಆದಾಯ ಮಾಡೋದನ್ನು ನೋಡುತ್ತಿದ್ದೇವೆ. ಕರ್ನಾಟಕದಲ್ಲೂ ಕೂಡ ಪ್ರವಾಸೋದ್ಯಮವನ್ನು ಬೆಳೆಸಲು ನೈಸರ್ಗಿಕವಾದ ತಾಣಗಳಿವೆ. ಪ್ರವಾಸೋದ್ಯಮದ ಬೆಳವಣಿಗೆಗೆ ಹೊಸ‌ ನೀತಿ ಮಾಡಿ ಎಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಅವರಿಗೆ ತಿಳಿಸಿದ್ದೇನೆ. ಅದಕ್ಕೆ ಎಷ್ಟು ಖರ್ಚಾದರೂ ಭರಿಸಲಿಕ್ಕೆ ತಯಾರಾಗಿದ್ದೇವೆ. ಪ್ರವಾಸೋದ್ಯಮಕ್ಕೆ ಹೊಸ ನೀತಿ ತರಲು ಎಚ್ ಕೆ ಪಾಟೀಲ್ ಒಪ್ಪಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ನರೇಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ಗಗನ‌ಚುಕ್ಕಿ ಜಲಪಾತೋತ್ಸವ ಉದ್ಘಾಟನೆ ಆಗಿದೆ. ನಾನು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉದ್ಘಾಟನೆ ಮಾಡಿದ್ದೇನೆ. ಕಳೆದ ತಿಂಗಳು ಭರಚುಕ್ಕಿ ಜಲಪಾತೋತ್ಸವ ಉದ್ಘಾಟನೆ ಮಾಡಿದ್ದೆ. ಮಂಡ್ಯ, ಚಾಮರಾಜನಗರ ಜಿಲ್ಲೆಯಲ್ಲಿ ಗಗನಚುಕ್ಕಿ, ಭರಚುಕ್ಕಿ ನಿರ್ಮಾಣ ಆಗಿದ್ದು ನೋಡಿದ್ದೀರಿ. ಜಲಪಾತ ನೋಡಲು ಲಕ್ಷಾಂತರ ಜನ ಬರುತ್ತಾರೆ. ನಮ್ಮ ಸರ್ಕಾರ ಪ್ರವಾಸೋದ್ಯಮದ ದೃಷ್ಟಿಯಿಂದ ಎರಡೂ ಜಲಪಾತಗಳನ್ನು ಅಭಿವೃದ್ಧಿ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಣೆ‌ ಮಾಡಬೇಕಿದೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ನಾಯಕತ್ವ ಪ್ರಶ್ನಿಸುವ ಅರ್ಹತೆ ಕುಮಾರಸ್ವಾಮಿಗಿಲ್ಲ; ಚೆಲುವರಾಯಸ್ವಾಮಿ

ಗ್ಯಾರೆಂಟಿ ಯೋಜನೆ ಯಾರಿಗೆ ಮಾಡಿದ್ದು? ಯಾರು ತಮ್ಮ ಕಾಲದಲ್ಲಿ ಈ ಯೋಜನೆ, ಅಭಿವೃದ್ಧಿಗಳನ್ನು ಮಾಡಲಿಲ್ಲವೋ ಅವರು ಈ ಬಗ್ಗೆ ಟೀಕೆ ಮಾಡ್ತಾ ಇದ್ದಾರೆ. ಬಡವರಿಗೆ ಶಕ್ತಿ ತುಂಬಿದರೆ ವಿರೋಧ ಮಾಡ್ತಾ ಇದ್ದಾರಲ್ಲ. ಹಾಗಾದ್ರೆ ಅವರು ಬಡವರ ವಿರೋಧಿಗಳು ಎಂದರ್ಥ. ಈ ಮೊದಲು ಐದು ಕೆ.ಜಿ ಅಕ್ಕಿಯನ್ನು ಫ್ರೀ ಕೊಟ್ಟಿದ್ದು ಈ ಸಿದ್ದರಾಮಯ್ಯ. ಮತ್ತೆ ನಾವು ಅಧಿಕಾರಕ್ಕೆ ಬಂದು ಐದು ಕೆ.ಜಿ ಅಕ್ಕಿ ಕೊಡುತ್ತೇವೆ ಅಂತ ಹೇಳಿ ಅದನ್ನು ಜಾರಿಗೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ,‌‌ ಕಾಂಗ್ರೆಸ್ ಸರ್ಕಾರ ಎಂದು ಸಿ‌ಎಂ ಹೇಳಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ