ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಿಸಿದ ಕರ್ನಾಟಕ ಸರ್ಕಾರ, ಕುಸಿದ ಕೆಆರ್ಎಸ್ ನೀರಿನ ಮಟ್ಟ
ರೈತರ ಪ್ರತಿಭಟನೆಯ ನಡುವೆಯೂ ಕರ್ನಾಟಕ ಕಾಂಗ್ರೆಸ್ ಸರ್ಕಾರವು ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಿದೆ. ಕೆಆರ್ಎಸ್ ಡ್ಯಾಂನಿಂದ ಕಾವೇರಿ ನದಿಗೆ 7,279 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ನಿನ್ನೆ KRSನಿಂದ ತಮಿಳುನಾಡಿಗೆ 4448 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸದ್ಯ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿದಿದೆ.
ಮಂಡ್ಯ, ಆಗಸ್ಟ್ 31: ರೈತರ ಪ್ರತಿಭಟನೆಯ ನಡುವೆಯೂ ಕರ್ನಾಟಕ ಕಾಂಗ್ರೆಸ್ ಸರ್ಕಾರವು ತಮಿಳುನಾಡಿಗೆ (Tamil Nadu) ಹರಿಸುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದಿಂದ (KRS Reservoir) ಕಾವೇರಿ ನದಿಗೆ (Cauvery River) 7,279 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ.
ನಿನ್ನೆ KRSನಿಂದ ತಮಿಳುನಾಡಿಗೆ 4448 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸದ್ಯ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿದಿದೆ. ಗರಿಷ್ಠ 124.80 ಅಡಿ ನೀರಿನ ಮಟ್ಟ ಹೊಂದಿರುವ ಕೆಆರ್ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 100.96 ಅಡಿ ಇದೆ.
ಇಂದಿನ ನೀರಿನ ಮಟ್ಟ
- ಜಲಾಶಯದ ಗರಿಷ್ಠ ಮಟ್ಟ 124.80 ಅಡಿ
- ಒಳಹರಿವು 1610 ಕ್ಯೂಸೆಕ್
- ಇಂದಿನ ಮಟ್ಟ 100.96 ಅಡಿ
- ಗರಿಷ್ಠ 49.452 ಟಿಎಂಸಿ
- ಇಂದು 23.571 ಟಿಎಂಸಿ
ಇದನ್ನೂ ಓದಿ: ತಮಿಳುನಾಡುಗೆ ಕಾವೇರಿ ನೀರು; ಲೀಗಲ್ ಟೀಮನ್ನು ಭೇಟಿಯಾಗಲು ನಾಳೆ ಡಿಕೆ ಶಿವಕುಮಾರ್ ದೆಹಲಿಗೆ ಪಯಣ
ಕರ್ನಾಟಕದಲ್ಲೇ ಮಳೆ ಕೊರತೆಯಿಂದ ನೀರಿನ ಅಭಾವ ಉಂಟಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರವು ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದೆ. ಇದರ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರವು ತಮಿಳುನಾಡಿಗೆ ರಾತ್ರೋರಾತ್ರಿ ಹೆಚ್ಚುವರಿ ನೀರು ಹರಿಬಿಟ್ಟಿದೆ. ಹೀಗಾಗಿ ಹೋರಾಟದ ರೂಪರೇಷೆ ಕುರಿತು ಸಭೆ ಇಂದು ರೈತರು ಸಭೆ ನಡೆಸಲು ಮುಂದಾಗಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಅನಿರ್ಧಿಷ್ಠಾವಧಿ ಧರಣಿ
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ನಿಲ್ಲಿಸುವಂತೆ ಒತ್ತಾಯಿಸಿ ಇಂದು ಮಂಡ್ಯದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆಗೆ ಕರೆ ನೀಡಿದರೆ, ಅತ್ತ ಕೆಆರ್ಎಸ್ನಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗುತ್ತಿದೆ. ಕೆಆರ್ಎಸ್ನ ಬೃಂದಾವನದ ಬಳಿ ಶಾಮಿಯಾನ ಹಾಕಿ ರೈತರ ಜೊತೆಗೆ ಧರಣಿ ಆರಂಭಿಸಿದ್ದಾರೆ. ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನಂತೆ 15 ದಿನಗಳ ವರೆಗೆ ನೀರು ಹರಿಸುವಂತೆ ಆದೇಶ ನೀಡಿತ್ತು. ಆದೇಶ ಹೊರಡಿಸಿದ ದಿನವೇ ರಾಜ್ಯ ಸರ್ಕಾರ ನೀರು ಬಿಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 am, Thu, 31 August 23