ಯಾರು ಕೊಚ್ಚೆ, ಕಚಡಾ ಎಂದು ಚರ್ಚೆ ಮಾಡೋಣ; ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಪಂಥಾಹ್ವಾನ

| Updated By: ಸುಷ್ಮಾ ಚಕ್ರೆ

Updated on: Nov 16, 2024 | 8:57 PM

ಜಮೀರ್​ ಅಹಮದ್ ಮತ್ತು ಆ 4 ಜನರ ಜೊತೆ ಇದ್ದುದು ನನ್ನ ಜೀವನದ ಅತ್ಯಂತ ಕರಾಳ ದಿನಗಳು. ಅವರು ಕೊಚ್ಚೆ ಎಂದು ತಿಳಿದ ಮೇಲೆ ಅವರನ್ನು ದೂರ ಇಟ್ಟಿದ್ದೇನೆ ಎಂದು ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಇದೀಗ ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಯಾರು ಕೊಚ್ಚೆ, ಕಚಡಾ ಎಂದು ಚರ್ಚೆ ಮಾಡೋಣ; ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಪಂಥಾಹ್ವಾನ
ಸಚಿವ ಚಲುವರಾಯಸ್ವಾಮಿ
Follow us on

ಮಂಡ್ಯ: ಜಮೀರ್ ಅಹಮದ್ ಹಾಗೂ ಆ ನಾಲ್ವರ ಜೊತೆ ಇದ್ದಿದ್ದು ನನ್ನ ಕರಾಳ ದಿನ ಎಂಬ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿಯವರ ಹೇಳಿಕೆ ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ನನಗೆ ಕುಮಾರಸ್ವಾಮಿಯಂತೆ ಮಾಧ್ಯಮದವರ ಮುಂದೆ ನಾಲಗೆ ಹರಿಬಿಡಲು ಸಾಧ್ಯವಿಲ್ಲ. ಅವರು ಚರ್ಚೆಗೆ ಬರುವುದಾದರೆ ಒಂದು ವೇದಿಕೆ ಸಿದ್ಧಮಾಡಿ. ಯಾರು ಹೊಲಸು, ಕಚಡ ಎಂದು ಚರ್ಚೆ ಮಾಡೋಣ. 20 ವರ್ಷ ಅವರ ಜತೆ ಇದ್ದೆವು, ಯಾರು ಸ್ನೇಹ ಬಿಟ್ಟರು ಎಂದು ಚರ್ಚಿಸೋಣ. ಸ್ನೇಹಿತರಿಂದಲೇ ಸಿಎಂ ಆದೇ ಎಂದು ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದರು. ಆಗ ಅದು ಕರಾಳದಿನ ಆಗಿರಲಿಲ್ಲವಾ? ಅಷ್ಟು ದಿನ ಏಕೆ ಕೊಳಚೆ ವಾಸನೆ ಕುಡಿದಿದ್ದರು? ಎಂದು ಮಂಡ್ಯ ಜಿಲ್ಲೆಯ ಹೊಸಗಾವಿ ಗ್ರಾಮದಲ್ಲಿ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಆಗಿ ಎಚ್​.ಡಿ. ಕುಮಾರಸ್ವಾಮಿ ಆ ರೀತಿ ಮಾತನಾಡಿದ್ದು ಎಷ್ಟು ಸರಿ? ಉತ್ತರ ಕೊಡುವುದು ಸೂಕ್ತ ಎಂದರೆ ಕೊಡುತ್ತೇನೆ. ಮಾತಿನಿಂದ ಯಾರೂ ದೊಡ್ಡವರು ಆಗುವುದಿಲ್ಲ, ನಡವಳಿಕೆಯಿಂದ ದೊಡ್ಡವರಾಗಬೇಕು. ಕೇಂದ್ರ ಸಚಿವ ಕುಮಾರಸ್ವಾಮಿಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಇತಿಹಾಸ ಚರ್ಚೆ ಮಾಡಬೇಕು ಅಂದರೆ ಸದನದಲ್ಲೇ ಚರ್ಚೆ ಮಾಡೋಣ ಎಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಪಂಥಾಹ್ವಾನ ನೀಡಿದ್ದಾರೆ.

ಇದನ್ನೂ ಓದಿ: ಜಮೀರ್ ಸಹವಾಸ ನನ್ನ ಜೀವನದ ಅತ್ಯಂತ ಕರಾಳ ದಿನಗಳು ಎಂದ ಕುಮಾರಸ್ವಾಮಿ!

20 ವರ್ಷ ಕೊಳಚೆ ಒಳಗೆ ಇದ್ದರು. ಎದುರಿಗೆ ಬಂದರೆ ಅವರ ಇತಿಹಾಸ ಹೇಳ್ತೇನೆ. ನಾನು ಹೇಳಲು ತಯಾರು ಇದ್ದೇನೆ, ನನ್ನ ಸ್ನೇಹಿತರನ್ನೂ ಕರೆದುಕೊಂಡು ಬರುವೆ. ಅವರ ಸ್ನೇಹ ಬಿಟ್ಟ ನಂತರ ಇಲ್ಲಿಯವರೆಗೂ ಮಾತನಾಡಿಲ್ಲ, ಅವರ ಸಂಪರ್ಕವಿಲ್ಲ. ಜೆಡಿಎಸ್​ನವರು ರಾಜಕೀಯದಲ್ಲಿ ಬೊಮ್ಮಾಯಿ, ಪಟೇಲ್‌ರ ಜೊತೆ ಎಷ್ಟು ದಿನ ಇದ್ದರು? ಇವರದ್ದು ಕುಟುಂಬದ ಪಕ್ಷ ಆಗಿ ಉಳಿದಿದೆ. ಸಾಕಷ್ಟು ಇತಿಹಾಸ ಇದೆ, ಹೆಗಡೆ, ಜೆ.ಹೆಚ್‌. ಪಟೇಲ್‌ ಜೊತೆ ಎಷ್ಟು ದಿನ ಚೆನ್ನಾಗಿದ್ದರು? ಈ ಬಗ್ಗೆ ಅವರೇ ಹೇಳಲಿ, ಸದನದಲ್ಲಿ ಚರ್ಚೆಯಾದರೆ ಒಳ್ಳೆಯದು, ಬರಲು ಹೇಳಿ. ಒಂದು ವೇದಿಕೆ ನಿರ್ಮಾಣ ಮಾಡೋಣಾ, ಒಂದು ಸಮಯ ನಿಗದಿ ಮಾಡಿ. ನಾವು ಬರಲು ತಯಾರಿದ್ದೇವೆ, ಜನರಿಗೂ ಅಸಲಿ ಸಂಗತಿ ಗೊತ್ತಾಗಬೇಕು ಎಂದು ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Sat, 16 November 24