ಮಂಡ್ಯ, ಮೇ.15: ಜಿಲ್ಲೆಯಲ್ಲಿ ನಾಲೆಗಳ ಆಧುನೀಕರಣ ಹೆಸರಲ್ಲಿ ಈ ಬಾರಿ ನಾಲೆಗಳಿಗೆ(Canals)ನೀರು ಹರಿಸಿಲ್ಲ. ಹೀಗಾಗಿ ಈ ಬಾರಿ ಮಂಡ್ಯ ಜಿಲ್ಲೆಯ ಬಹುತೇಕ ರೈತರು ಬೆಳೆಯನ್ನ ಬೆಳೆಯದೇ, ಇರುವ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂದಹಾಗೆ ಮಂಡ್ಯ(Mandya) ಜಿಲ್ಲೆಯ ಕೊನೆಯ ಭಾಗದ ರೈತರಿಗೆ ನಾಲೆಗಳ ಮೂಲಕ ನೀರು ತಲುಪಿಲ್ಲ. ನೀರು ಪೋಲಾಗುತ್ತಿದೆ ಎಂಬ ಉದ್ದೇಶದಿಂದ ನೂರಾರು ಕೋಟಿ ರೂ. ವೆಚ್ಚದಲ್ಲಿ ಮಂಡ್ಯದಲ್ಲಿ ವಿಸಿ ನಾಲೆಗಳ ಆಧುನಿಕರಣ ನಡೆಯುತ್ತಿದೆ. ಆದರೆ, ಕಾಮಗಾರಿ ಆರಂಭಗೊಂಡು ಆರು ತಿಂಗಳುಗಳು ಕಳೆಯುತ್ತಿದ್ದರೂ ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ.
ಸುಮಾರು 40 ಕಿಲೋ ಮೀಟರ್ನಷ್ಟು ಕಾಮಗಾರಿಯಲ್ಲಿ ಕೇವಲ 18 ಕಿಲೋ ಮೀಟರ್ ಕಾಮಗಾರಿ ಮಾತ್ರ ನಡೆದಿದೆ. ಹೀಗಾಗಿ ಮತ್ತೆ ಕಾಮಗಾರಿ ಹೆಸರಲ್ಲಿ ನೀರು ಹರಿಸದೇ ಇದ್ದರೇ ಕಾಮಗಾರಿಗಳನ್ನ ಮಾಡಲು ಬಿಡುವುದಿಲ್ಲ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ. ಅಂದಹಾಗೆ ಮಂಡ್ಯ, ಕೃಷಿ ಪ್ರಧಾನ ಜಿಲ್ಲೆ. ಲಕ್ಷಾಂತರ ಹೆಕ್ಟರ್ ಪ್ರದೇಶ ವಿಸಿ ನಾಲೆಯನ್ನೇ ಅವಲಂಬಿಸಿದೆ. ಕೆಆರ್ಎಸ್ ಜಲಾಶಯವೇ ಜೀವಾಳ. ಇದೇ ಕೆಆರ್ಎಸ್ ಜಲಾಶಯದ ಮೂಲಕ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಸುಮಾರು ಮಂಡ್ಯ ಜಿಲ್ಲೆಯಲ್ಲಿ 500 ಕಿಲೋ ಮೀಟರ್ ನಷ್ಟು ನಾಲೆಗಳು ಇವೆ. ಆದರೆ, ಕೊನೆ ಭಾಗದ ರೈತರಿಗೆ ನಾಲೆಗಳಲ್ಲಿ ನೀರು ಹರಿಯುತ್ತಿರಲಿಲ್ಲ.
ಹೀಗಾಗಿ ಕಾಮಗಾರಿಯನ್ನ ಆರಂಭಿಸುವ ನಿಟ್ಟಿನಲ್ಲಿ ಈ ಭಾರಿ ರೈತರಿಗೆ ತಿಳಿಸಿ ಬೆಳೆಗಳನ್ನ ಬೆಳೆಯದಂತೆ ಸೂಚನೆ ನೀಡಲಾಗಿತ್ತು. ಇದರಿಂದ ರೈತರು ಬೆಳೆಯನ್ನ ಬೆಳೆದಿಲ್ಲ. ಜೊತೆಗೆ ಇರುವ ಬೆಳೆಗಳು ಕೂಡ ಒಣಗಿವೆ. ರೈತರು ಸಹ ಕಾಮಗಾರಿ ಬೇಗನೇ ಮುಗಿದು ನಾಲೆಗಳಲ್ಲಿ ನೀರು ಹರಿಯುತ್ತದೆ ಅಂದುಕೊಂಡಿದ್ರು. ಆದರೆ, ಕಾಮಗಾರಿ ಪೂರ್ಣಗೊಳ್ಳದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಾರೆ ನಾಲೆಗಳ ಕಾಮಗಾರಿ ಕುಂಠಿತಗೊಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ