ಸರ್ಕಾರಿ ಅಧಿಕಾರಿಗಳು ಮಾಧ್ಯಮ ಹೇಳಿಕೆ ನೀಡುವಂತಿಲ್ಲ: ಸಚಿವ ಆರ್ ಅಶೋಕ್ ಎಚ್ಚರಿಕೆ

| Updated By: guruganesh bhat

Updated on: Oct 01, 2021 | 4:23 PM

ಅಧಿಕಾರಿಗಳು ಜಗಳವಾಡಿ ಮಾಧ್ಯಮಗಳ ಮುಂದೆ ಬರಬಾರದು. ಯಾವುದೇ ವಿಚಾರಗಳನ್ನೂ ಸಹ ಮಾಧ್ಯಮಗಳಿಗೆ ಹೇಳುವಂತಿಲ್ಲ ಎಂದು ಕಠಿಣ ಎಚ್ಚರಿಕೆ ವಿಧಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳು ಮಾಧ್ಯಮ ಹೇಳಿಕೆ ನೀಡುವಂತಿಲ್ಲ: ಸಚಿವ ಆರ್ ಅಶೋಕ್ ಎಚ್ಚರಿಕೆ
ಆರ್ ಅಶೋಕ್ (ಸಂಗ್ರಹ ಚಿತ್ರ)
Follow us on

ಮಂಡ್ಯ: ಯಾವ ಅಧಿಕಾರಿಯೂ ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ಮಂಡ್ಯದಲ್ಲಿ ಕಂದಾಯ ಸಚಿವ ಆರ್‌.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಇಲಾಖೆಗಳ ವಿಚಾರಗಳನ್ನೂ ಅಧಿಕಾರಿಗಳು ಮಾಧ್ಯಮಗಳ ಎದುರು ಹೇಳುವಂತಿಲ್ಲ. ಇಲಾಖೆ ವಿಚಾರ ತಿಳಿಸಲು ಆಯಾ ಇಲಾಖಗಳ ಸಚಿವರಿದ್ದಾರೆ. ಸರ್ಕಾರಕ್ಕೆ ಮುಜುಗರ ತರುವ ರೀತಿ ಮಾತನಾಡುವಂತಿಲ್ಲ. ಅಧಿಕಾರಿಗಳು ಜಗಳವಾಡಿ ಮಾಧ್ಯಮಗಳ ಮುಂದೆ ಬರಬಾರದು. ಯಾವುದೇ ವಿಚಾರಗಳನ್ನೂ ಸಹ ಮಾಧ್ಯಮಗಳಿಗೆ ಹೇಳುವಂತಿಲ್ಲ ಎಂದು ಕಠಿಣ ಎಚ್ಚರಿಕೆ ವಿಧಿಸಿದ್ದಾರೆ.

ರಾಜ್ಯದಲ್ಲಿ ಕೇಳಿಬರುತ್ತಿರುವ ಮತಾಂತರ ವಿವಾದದ ಕುರಿತೂ ಪ್ರತಿಕ್ರಿಯಿಸಿದ ಅವರು, ಮತಾಂತರ ಎಂಬುದು ಹೀನ ಕೃತ್ಯ. ಹುಟ್ಟಿರುವ ಧರ್ಮದಲ್ಲಿ ಪೂಜೆ ಮಾಡುವುದು ಅವರ ಹಕ್ಕು. ವಿದೇಶದಿಂದ ಹಣ ತಂದು ಏಜೆಂಟ್ಗಳ ಮೂಲಕ ಹಸು, ಎಮ್ಮೆ ಕೊಡಿಸುತ್ತೇವೆಂದು ಆಮಿಷ ಒಡ್ಡುತ್ತಿದ್ದಾರೆ. ಆಸ್ಪತ್ರೆ ಖರ್ಚು ವೆಚ್ಚ ನೋಡಿಕೊಳ್ಳುತ್ತೇವೆಂದು ಆಮಿಷ ತೋರಿಸಲಾಗುತ್ತಿದೆ. ಲಕ್ಷಾಂತರ ಜನರನ್ನು ಮತಾಂತರ ಮಾಡಲು ಪ್ರಯತ್ನಿಸಲಾಗುತ್ತಿದೆ. ಅಂತಹ ಸಮಾಜಘಾತುಕ, ದೇಶದ್ರೋಹಿಗಳ ವಿರುದ್ಧ ನಿಶ್ಚಿತವಾಗಿ ಕ್ರಮ ಕೈಗೊಳ್ಳಲಾಗುವುದು. ಹಣದಾಸೆಗಾಗಿ ಮತಾಂತರ ಮಾಡುತ್ತಿರುವುದು ಗೊತ್ತಿದೆ. ಮತಾಂತರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದರೆ ಶಿಸ್ತುಕ್ರಮ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ರಾಜ್ಯ ಸರ್ಕಾರ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪ್ರಕರಣ ಆಧರಿಸಿ ಕರ್ನಾಟಕ ಸರ್ಕಾರ ಹಿರಿಯ ಅಧಿಕಾರಿಗಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿರ್ಬಂಧ ವಿಧಿಸಿದೆ. ಸರ್ಕಾರಿ ಅಧಿಕಾರಿಗಳು ಕೇಂದ್ರ, ರಾಜ್ಯ ಸರ್ಕಾರದ ನೀತಿಗಳ ಬಗ್ಗೆ ಟೀಕಿಸಬಾರದು. ಸರ್ಕಾರದ ನೀತಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಬಾರದು. ಸಂಬಂಧಿಸಿದ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದೆ ಯಾವುದೇ ಸರ್ಕಾರಿ ನೌಕರ ಪ್ರತಿಕೂಲ ಟೀಕೆ ಮಾಡುವಂತಿಲ್ಲ. ಅನುಮತಿ ಇಲ್ಲದೆ ಕೋರ್ಟ್‌ ಮತ್ತು ಮಾಧ್ಯಮಗಳ ಮೊರೆ ಹೋಗುವಂತಿಲ್ಲ. ನಿಯಮವನ್ನು ಮೀರಿ ಸರ್ಕಾರಕ್ಕೆ ವರ್ಚಸ್ಸಿಗೆ ಧಕ್ಕೆ ತಂದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ವಿಧಿಸಿದೆ.

ಸರ್ಕಾರಿ ಯೋಜನೆ ಪ್ರಚಾರಕ್ಕೆ ಮಾತ್ರ ಮಾಧ್ಯಮಗಳನ್ನು ಬಳಸಬೇಕು. ಕುಂದು ಕೊರತೆ ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಇಲಾಖೆಯ ಸಾಧನೆಗಳ ಬಗ್ಗೆ, ಅಥವಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಬೇಕಾದ ಸಂದರ್ಭದಲ್ಲಿ ಅಧಿಕಾರಿಗಳು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸದೇ ಸರ್ಕಾರದ ಆಡಳಿತ ಹೆಸರಿನಲ್ಲಿ ತೆರೆಯಲಾದ ಖಾತೆಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಸೂಚಿಸಿದೆ.

ನಿಯಮ 26: ಸರ್ಕಾರಿ ನೌಕರರ ಕೃತ್ಯಗಳು ಮತ್ತು ನಡತೆಯ ಪ್ರಕಾರ
ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದ ಹೊರತು ಯಾವುದೇ ಸರ್ಕಾರಿ ನೌಕರನು ಸರ್ಕಾರದ ಯಾವ ಅಧಿಕೃತ ಕೃತ್ಯವು ಪ್ರತಿಕೂಲ ಟೀಕೆಯ ಅಥವಾ ಮಾನಹಾನಿ ಸ್ವರೂಪದ ನಿಂದನೆಯ ವಸ್ತು ವಿಷಯವಾಗಿರುವುದೋ ಆ ಯಾವುದೇ ಅಧಿಕೃತ ಕಡತದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯಕ್ಕೆ ಅಥವಾ ಪತ್ರಿಕೆಗೆ ಮೊರೆ ಹೋಗತಕ್ಕದಲ್ಲ ಎಮದು ರಾಜ್ಯ ಸರ್ಕಾರ ತಿಳಿಸಿದೆ.

ಮೇಲಿನ ನಿಯಮಗಳಲ್ಲಿನ ಅವಕಾಶಗಳಿಗೆ ವ್ಯತಿರಿಕ್ತವಾಗಿ ಯಾವುದೇ ಅಧಿಕಾರಿ ಸರ್ಕಾರದ ಕಾರ್ಯನೀತಿಗೆ ವ್ಯತಿರಿಕ್ತವಾಗಿ ಅನಪೇಕ್ಷಿತ ವೇದಿಕೆಗಳಲ್ಲಿ ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಮುಗಿಸಲಾಗುವುದು ಎಂದು ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: 

Conversion Law: ಮತಾಂತರ ವಿರೋಧಿ ಕಾನೂನು ತರುವ ರೀತಿ ಇದಲ್ಲ; ಕಾರಣ ಇಲ್ಲಿದೆ ನೋಡಿ

ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದರೆ ಶಿಸ್ತುಕ್ರಮ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ರಾಜ್ಯ ಸರ್ಕಾರ

Published On - 4:14 pm, Fri, 1 October 21