ಮಂಡ್ಯ, ಮೇ 21: ಇದೇ ವರ್ಷ ಜನವರಿಯಲ್ಲಿ ಮಂಡ್ಯ (Mandya) ತಾಲೂಕಿನ ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ (Keragodu Hanuman Dhwaja) ತೆರವುಗೊಳಿಸಿದ್ದ ವಿಚಾರ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ರಾಜಕೀಯ ವಾಗ್ಯುದ್ದಕ್ಕೂ ಕಾರಣವಾಗಿತ್ತು. ಗ್ರಾಮದಲ್ಲಿನ 108 ಅಡಿಯ ಅರ್ಜುನ ಸ್ತಂಭದಲ್ಲಿದ್ದ ಹನುಮ ಧ್ವಜವನ್ನು ತೆರವುಗೊಳಿಸಿ ಸರ್ಕಾರ ತ್ರಿವರ್ಣ ಧ್ವಜ ಹಾರಿಸಿದೆ. ಹನುಮ ಧ್ವಜ ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರು, ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ, ಕೆರಗೋಡು ಅರ್ಜುನ ಸ್ತಂಭದಲ್ಲಿದ್ದ ಹಳೆ ತ್ರಿವರ್ಣ ಧ್ವಜ ತೆಗೆದು ಹೊಸ ಧ್ವಜ ಹಾರಿಸಲಾಗಿದೆ.
ಜಿಲ್ಲಾಡಳಿತ ಇಂದು (ಮೇ 21) ಬೆಳ್ಳಂಬೆಳಿಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಹಳೆ ಧ್ವಜ ಇಳಿಸಿ ಹೊಸ ಬಾವುಟವನ್ನು ಹಾರಿಸಿದೆ. ಮಂಡ್ಯ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜು ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ನಾಗಾರಾಜು, ಕೆರಗೋಡು ಗ್ರಾಮದಲ್ಲಿ ಹಿಂದೆ ರಾಷ್ಟ್ರ ಧ್ವಜ ಹಾರಿಸಲಾಗಿತ್ತು. ಗಾಳಿಗೆ ಧ್ವಜ ಗಂಟಾಗಿ ಸರಿಯಾದ ರೀತಿಯಲ್ಲಿ ಹಾರುತ್ತಿರಲಿಲ್ಲ. ಹೀಗಾಗಿ ಹಳೆಯ ಧ್ವಜ ಬದಲಿಸಿ ಹೊಸ ಧ್ವಜ ಹಾರಿಸಲಾಗಿದೆ. ಹಿಂದೆ ಇದ್ದ ಧ್ವಜದ ಅಳತೆಯಲ್ಲೇ, ಈಗ ಹೊಸ ರಾಷ್ಟ್ರ ಧ್ವಜ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ರಾಷ್ಟ್ರ ಧ್ವಜ ಹಾರಿಸುತ್ತೇವೆ ಎಂದರು.
ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರಿಗೆ ಪೊಲೀಸ್ ನೋಟಿಸ್
ಈ ಹಿಂದೆ ಧ್ವಜ ಹಾರಿಸಿದ್ದ ಸಂದರ್ಭದಲ್ಲಿ 108 ಅಡಿಯ ಅರ್ಜುನ ಸ್ತಂಭದ ಮುಕ್ಕಾಲು ಭಾಗದಲ್ಲಿ ಧ್ವಜ ಹಾರುತ್ತಿತ್ತು. ಇದಕ್ಕೆ ಗ್ರಾಮಸ್ಥರು ರಾಷ್ಟ್ರಧ್ವಜಕ್ಕೆ ಜಿಲ್ಲಾಡಳಿತ ಅವಮಾನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಇಷ್ಟು ದೊಡ್ಡ ಧ್ವಜ ಸ್ತಂಭಕ್ಕೆ ಚಿಕ್ಕ ರಾಷ್ಟ್ರ ಧ್ವಜ ಸಲ್ಲದು. ಜಿಲ್ಲಾಡಳಿತ ಹಾರಿಸಿದ ರಾಷ್ಟ್ರ ಧ್ವಜ ಅಸಮಾಧಾನ ತಂದಿದೆ. ದೊಡ್ಡ ರಾಷ್ಟ್ರ ಧ್ವಜ ಹಾರಿಸುವಂತೆ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಅತುರಾತುರದಲ್ಲಿ ಹೊಸ ಧ್ವಜ ಹಾರಿಸಿದ್ದಾರೆ. ನಮ್ಮ ಧ್ವಜ ಹೋರಾಟ ಇಲ್ಲಿಗೆ ನಿಲ್ಲಲ್ಲ. ಜೂ.4ರ ನಂತರ ಹನುಮ ಹೋರಾಟ ತೀವ್ರವಾಗಲಿದೆ. ಹೋರಾಟದ ಪರಿಣಾಮ ಸರ್ಕಾರ ಎದುರಿಸಲಿದೆ. ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು. ರಾಷ್ಟ್ರೀಯ ಹಬ್ಬದ ಸಂಧರ್ಭದಲ್ಲಿ ರಾಷ್ಟ್ರ ಧ್ವಜ ಹಾರಾಡಲು ಅಭ್ಯಂತರವಿಲ್ಲ. ಆದರೆ ಅರ್ಜುನ ಸ್ತಂಭ ನಿರ್ಮಾಣದ ಉದ್ದೇಶ ಹನುಮ ಧ್ವಜ ಹಾರಿಸುವುದು. ಹಾಗಾಗಿ ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು ಎಂದು ಕೆರಗೋಡು ಗ್ರಾಮಸ್ಥರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ