ಕೆರಗೋಡ ಗ್ರಾಮದಲ್ಲಿ ತಣ್ಣಗಾಗದ ಹನುಮ ಧ್ವಜ ವಿವಾದ: ಸಾಮಾಜಿಕ ಜಾಲತಾಣದ ಮೇಲೆ ಖಾಕಿ ಕಣ್ಣು
Mandya Flag Row: ಮಂಡ್ಯದ ಕೆರಗೋಡು ಹನುಮ ಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಖಾಕಿ ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುವ ಪೋಸ್ಟ್ ನಿಷೇಧಿಸಿ ಮಂಡ್ಯ ಜಿಲ್ಲಾಡಳಿತ ಆದೇಶಿಸಿದೆ.
ಮಂಡ್ಯ, (ಫೆಬ್ರವರಿ 02): ಮಂಡ್ಯ ತಾಲೂಕಿನ ಕೆರಗೋಡು ಹನುಮ ಧ್ವಜ (Keregodu Flag ) ತೆರವು ಪ್ರಕರಣ ಇನ್ನೂ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದೇ ಫೆಬ್ರವರಿ 09ರಂದು ಮಂಡ್ಯ ಬಂದ್ಗೆ ಕರೆ ನೀಡಲಾಗಿದೆ. ಹೀಗಾಗಿ ಕೆರಗೋಡು ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುವ ಪೋಸ್ಟ್ ನಿಷೇಧಿಸಿ ಮಂಡ್ಯ ಜಿಲ್ಲಾಡಳಿ ಆದೇಶ ಹೊರಡಿಸಿದೆ.
ಕೆರಗೋಡು ಧ್ವಜಸ್ತಂಭದ ವಿಚಾರ ಸೂಕ್ಷ್ಮವಾಗಿದೆ. ಈ ಸಂಬಂಧ ಯಾರೇ ಆಗಲಿ ಸಾಮಾಜಿಕ ಜಾಲತಾಣದಲ್ಲಿ ಸಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುವ ಪೋಸ್ಟ್ ಮಾಡಬಾರದು. ಪ್ರಚೋದನಕಾರಿ ಹೇಳಿಕೆಗಳು, ವಿಡಿಯೋ, ಉದ್ರೇಕಕಾರಿ ಭಾಷಣ ಹಾಕುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳವುದಾಗಿ ಎಚ್ಚರಿಕೆ ನೀಡಿದೆ.
ಫೆಬ್ರವರಿ 9ರಂದು ಮಂಡ್ಯ ಬಂದ್ಗೆ ಕರೆ
ಮಂಡ್ಯ ಜಿಲ್ಲೆಯಲ್ಲಿ ಹನುಮಧ್ವಜ ತೆರವುಗೊಳಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಫೆಬ್ರವರಿ 9ರಂದು ಮಂಡ್ಯ ಬಂದ್ಗೆ ಕರೆ ನೀಡಲಾಗಿದೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಹೋರಾಟವನ್ನು ಆರಂಭಿಸಿವೆ. ಮತ್ತೊಂದು ಕಡೆ ಕಾಂಗ್ರೆಸ್ ಕೂಡ ರಾಷ್ಟ್ರ ಧ್ವಜವನ್ನು ಹಾರಿಸುವುದಾಗಿ ಹೇಳಿ ತಿರುಗೇಟು ನೀಡಿದೆ. ಇದು ಲೋಕಸಭೆ ಚುನಾವಣೆಗೆ ಮಂಡ್ಯ ಜಿಲ್ಲೆಯಲ್ಲಿ ಏರ್ಪಟ್ಟಿರುವ ಜಿದ್ದಾಜಿದ್ದಿ ಎಂದೇ ವಾಖ್ಯಾನಿಸಲಾಗುತ್ತಿದೆ. ಬಂದ್ ನಡೆಸಿ ನಂತರ ಹೋರಾಟ ತೀವ್ರಗೊಳಿಸುವುದಾಗಿ ಬಿಜೆಪಿ ಹಾಗೂ ಜೆಡಿಎಸ್ ಹೇಳಿಕೊಂಡಿವೆ. ಕಾಂಗ್ರೆಸ್ ಕೂಡ ಉತ್ತರ ನೀಡಲು ಸಿದ್ದವಾಗುತ್ತಿದೆ.
ವಿವಾದದ ಮೂಲ
ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಆಂಜನೇಯ ದೇಗುಲದ ಎದುರು ಹನುಮ ಧ್ವಜವನ್ನು ಸ್ಥಳೀಯರು ಹಾಗೂ ಬಿಜೆಪಿ ಮುಖಂಡರು ಕಟ್ಟಿದ್ದರು. ಇದಕ್ಕೆ ಸ್ಥಳೀಯವಾಗಿ ಅನುಮತಿಯನ್ನೂ ಪಡೆಯಲಾಗಿತ್ತು. ಎರಡು ದಿನದ ಹಿಂದೆ ಏಕಾಏಕಿ ಹನುಮಧ್ವಜವನ್ನು ತೆರವುಗೊಳಿಸಲಾಗಿತ್ತು. ಇದಕ್ಕೆ ಅನುಮತಿ ನೀಡಿಲ್ಲ ಎಂದು ಕೆಲವರು ತೆರವುಗೊಳಿಸಿದ್ದರು. ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರ ಕುಮ್ಮಕ್ಕಿನಿಂದಲೇ ಹನುಮ ಧ್ವಜವನ್ನು ತೆರವುಗೊಳಿಸಲಾಗಿದೆ ಎನ್ನುವುದು ಬಿಜೆಪಿ ಹಾಗೂ ಜೆಡಿಎಸ್ ಆರೋಪ. ಈ ವಿಚಾರವಾಗಿ ಸಂಘರ್ಷ ಏರ್ಪಟ್ಟಿದ್ದು, ಪ್ರತಿಭಟನೆಗಳು ನಡೆದಿವೆ. ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಅವರ ಫ್ಲೆಕ್ಸ್‌ಗಳನ್ನು ಹರಿದು ಬೆಂಕಿ ಹಚ್ಚಲಾಗಿದೆ. ಕೆಲವು ಕಡೆ ಕಲ್ಲು ತೂರಾಟವೂ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Fri, 2 February 24